ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ನಮ್ಮ ಚಲನೆ ರಹಿತ ಜಾತಿ ವ್ಯವಸ್ಥೆಯ ಸಾಮಾಜಿಕ ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿದರು. ಇದನ್ನು ಮಾಡಿದ್ದು ದೇವರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲಸಂಗಮದಲ್ಲಿ ಆಯೋಜಿಸಿದ್ದ 37ನೇ ಶರಣ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ. ಬಹು ಸಂಖ್ಯಾತರನ್ನು ಶಿಕ್ಷಣದಿಂದ ದೂರ ಇಡಲು ಅಸಮಾನತೆಯಿಂದ ಕೂಡಿದ ಚಾತುವರ್ಣ ವ್ಯವಸ್ಥೆಯನ್ನು ಮಾಡಿದರು. ಬಸವಾದಿ ಶರಣರ ವಚನ ಚಳವಳಿ ತಾರತಮ್ಯದಿಂದ ಕೂಡಿದ ಕರ್ಮ ಸಿದ್ಧಾಂತವನ್ನು, ಮೌಢ್ಯವನ್ನು ತೊಡೆದು ಹಾಕಿತು. ಹಣೆ ಬರಹ ಮತ್ತು ಕರ್ಮ ಸಿದ್ಧಾಂತವನ್ನು, ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದನ್ನು ಬಸವಣ್ಣನವರು ಸಂಪೂರ್ಣ ತಿರಸ್ಕರಿಸಿದ್ದರು.
ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಾದಿ ಶರಣರು ಪ್ರತಿಪಾದಿಸಿದರು. ಧರ್ಮ ತಾರತಮ್ಯ ಮಾಡಬೇಡಿ, ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಬಸವಾದಿ ಶರಣರು ವಿರೋಧಿಸಿದ್ದರು. ಈ ಕಾರಣಕ್ಕೇ ಇವ ನಮ್ಮವ, ಇವ ನಮ್ಮವ ಎನ್ನುವ ಉದಾತ್ತವಾದ ಮೌಲ್ಯವನ್ನು 800 ವರ್ಷಗಳ ಹಿಂದೆಯೇ ಹೇಳಿದರು. ಹೀಗಾಗಿ ಜಾತಿ ವ್ಯವಸ್ಥೆಯನ್ನು ಶರಣರೇ ಹೋಗಲಾಡಿಸಬೇಕು ಎಂದು ಹೇಳಿದರು.
ಜಾತಿ ಕಾರಣಕ್ಕೆ ಹಿಂದುಳಿದಿರುವ ಸಮುದಾಯಗಳಿಗೆ ಆರ್ಥಿಕ ಶಕ್ತಿ ನೀಡಬೇಕು. ಜಾತಿ, ವರ್ಗ, ಅಂತಸ್ತನ್ನು ಸೋಕಿಸಿಕೊಳ್ಳದೆ ಇರುವವರು ಮಾತ್ರ ನಿಜ ಶರಣರು. ಪಟ್ಟಭದ್ರ ಹಿತಾಸಕ್ತಿಗಳು ಇರುವುದು ಬಹಳ ಕಡಿಮೆ ಜನ. ಆದರೆ, ಇವರು ಸ್ಟ್ರಾಂಗ್ ಇದ್ದಾರೆ. ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದವರು ಬಹುಸಂಖ್ಯಾತರು. ಇವರು ಒಗ್ಗಟ್ಟಾಗಬೇಕು ಎಂದು ಕರೆಕೊಟ್ಟರು.
ಈ ಕಾರ್ಯಕ್ರಮದಲ್ಲಿ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ. ಮಾತೆ ಗಂಗಾದೇವಿ, ಉಪಾಧ್ಯಕ್ಷ ಮಹದೇಶ್ವರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ಶಾಸಕ ವಿಜಯಾನಂದ ಕಾಶಪ್ಪನವರ್, ಸಚಿವ ಬೈರತಿ ಸುರೇಶ್, ಶಾಸಕ ಎಂ.ನರೇಂದ್ರ ಸ್ವಾಮಿ, ಎಚ್.ವೈ. ಮೇಠಿ, ರಾಘವೇಂದ್ರ ಹಿಟ್ನಾಳ್ ಉಪಸ್ಥಿತರಿದ್ದರು.