ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ಲೋಕಸಭಾ ಸದಸ್ಯ ಡ್ಯಾನಿಶ್ ಅಲಿ ಅವರು ಇಂದು ಮಣಿಪುರದಲ್ಲಿ ಆರಂಭಗೊಂಡಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
“ಇಂದು ನಾನು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ. ಇದು ನನಗೆ ಅತ್ಯಂತ ಮುಖ್ಯವಾದ ಸಂದರ್ಭ. ಆತ್ಮಾವಲೋಕನ ಮಾಡಿಕೊಂಡ ನಂತರ ನಾನು ಇಲ್ಲಿಗೆ ಬಂದಿದ್ದೇನೆ. ದೇಶದಲ್ಲಿನ ಪ್ರಸ್ತುತ ಸ್ಥಿತಿಯಲ್ಲಿ ನನಗೆ ಎರಡು ಆಯ್ಕೆಗಳಿವೆ. ಒಂದು ದಲಿತ, ಹಿಂದುಳಿದ. ಅಲ್ಪಸಂಖ್ಯಾತ ಹಾಗೂ ಇತರ ಶೋಷಿತ ಹಾಗೂ ಬಡ ವರ್ಗಗಳನ್ನು ಕಡೆಗಣಿಸಿರುವುದನ್ನು ಒಪ್ಪಿಕೊಳ್ಳುವುದು ಅಥವಾ ದ್ವೇಷ, ಭಯ, ಶೋಷಣೆ, ಒಡೆದು ಆಳುವ ನೀತಿಯ ವಿರುದ್ಧ ಆರಂಭಗೊಂಡಿರುವ ಅಭಿಯಾನದಲ್ಲಿ ಪಾಲ್ಗೊಳ್ಳುವುದು. ಎರಡನೇ ಆಯ್ಕೆಯನ್ನು ಮಾಡಿಕೊಳ್ಳಲು ನನ್ನ ಆತ್ಮಸಾಕ್ಷಿ ನನ್ನ ಒತ್ತಾಯಿಸಿದೆ” ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ.
“ಆಡಳಿತ ಪಕ್ಷದ ಸದಸ್ಯನೊಬ್ಬ ನನ್ನ ಹಾಗೂ ನನ್ನ ಧರ್ಮದ ವಿರುದ್ಧ ಸಂಸತ್ತಿನಲ್ಲಿಇದೇ ರೀತಿಯ ದಾಳಿಯುಂಟು ಮಾಡಿದ ಕಾರಣ ಸ್ವಾಭಾವಿಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ಬಂದಿದೆ” ಎಂದು ಡ್ಯಾನಿಶ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?
ಕಳೆದ ವರ್ಷದ ಲೋಕಸಭಾ ಅಧಿವೇಶನದಲ್ಲಿ ಡ್ಯಾನಿಶ್ ಅಲಿ ವಿರುದ್ಧ ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಇದರಿಂದ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಅಲ್ಲದೆ ಮತ್ತೊಂದು ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಪರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಡ್ಯಾನಿಶ್ ಅಲಿ ಅವರನ್ನು ಉಚ್ಚಾಟಿಸಿದ್ದರು.
ಇಂದಿನಿಂದ ಮಣಿಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಗೊಂಡಿದ್ದು,66 ದಿನಗಳ ಅಭಿಯಾನದಲ್ಲಿ 15 ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ.