ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?

Date:

ದೇಶದ ಯುವ ಜನತೆಯ ಕೈಗೆ ಕೆಲಸ ಕೊಟ್ಟು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾದ, ನ್ಯಾಯ ಒದಗಿಸಬೇಕಾದ ವಿಚಾರದಲ್ಲಿ ಮೋದಿಯವರು ಕಳೆದ 10 ವರ್ಷಗಳಲ್ಲಿ ಬಹಳ ದೊಡ್ಡ ಅನ್ಯಾಯವೆಸಗಿದ್ದಾರೆ. ದೇಶದ ಯುವಶಕ್ತಿಯನ್ನು ಬಳಸಿಕೊಂಡು ದೇಶದ ಕೀರ್ತಿಯನ್ನು ಜಗತ್ತಿನ ಬಲಾಢ್ಯ ದೇಶಗಳ ಮಟ್ಟಕ್ಕೆ ಏರಿಸಬೇಕಾದವರು- ಓಟಿಗಾಗಿ, ಕುರ್ಚಿಗಾಗಿ, ಸ್ವಾರ್ಥಕ್ಕಾಗಿ ಜೈ ಶ್ರೀರಾಮ್ ಮೊರೆ ಹೋಗಿದ್ದಾರೆ.

ಜನವರಿ 12, ಸ್ವಾಮಿ ವಿವೇಕಾನಂದರ ಜನ್ಮದಿನ. ಆ ದಿನವನ್ನು ರಾಷ್ಟ್ರೀಯ ‘ಯುವದಿನ’ವೆಂದು ಆಚರಿಸಲಾಗುತ್ತದೆ. ಆ ಯುವದಿನದಂದೇ ದೇಶದ ಯುವಜನತೆಗೆ ಸಂಬಂಧಿಸಿದಂತೆ ಮೂರು ಮಹತ್ವದ ಘಟನೆಗಳು ಜರುಗಿವೆ.

ಒಂದು, ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ನಾಸಿಕ್‌ನ ತಪೋವನದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ‘ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ದಿನದಂದು ದೇಶಾದ್ಯಂತ ದೇಗುಲಗಳು ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು’ ಎಂದು ಯುವ ಜನತೆಗೆ ಕರೆ ಕೊಟ್ಟಿದ್ದಾರೆ.

ಎರಡು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವೇಕಾನಂದ ಅವರ ಜಯಂತಿ ದಿನವೇ ಯುವನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಿ, ‘2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿನಿಂದ ಉದ್ಯೋಗ ಸಿಗದೇ ಇರುವ ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ ಮತ್ತು ಡಿಪ್ಲೊಮಾ ತೇರ್ಗಡೆಯಾದ ನಿರುದ್ಯೋಗಿಗಳಿಗೆ ತಿಂಗಳಿಗೆ ₹1,500 ಸಿಗಲಿದೆ. ಎರಡು ವರ್ಷದವರೆಗೆ ಭತ್ಯೆ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು’ ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂರು, ಕರ್ನಾಟಕ ಲೋಕಸೇವಾ ಆಯೋಗವು ಭ್ರಷ್ಟಾಚಾರದಿಂದ ಕೂಡಿದ್ದು, ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಗಳವರೆಗೆ, ಕೋಟಿಗಳಿಗೆ ಹರಾಜು ಹಾಕಲಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಕೂಡ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟಿಸಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದಿ ಕೂರಿಸಿದ್ದಾರೆ.

ಪ್ರಧಾನಿ ಮೋದಿ ದೇಶದ ಯುವಜನತೆಗೆ ದೇಗುಲಗಳ ಕಸ ಗುಡಿಸಲು, ಭಜನೆ ಮಾಡಲು ಹೇಳಿದರೆ; ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರುದ್ಯೋಗಿ ಯುವಕರಿಗೆ ಭತ್ಯೆ ಕೊಡುತ್ತೇನೆ ಎಂದಿದ್ದಾರೆ. ಇವುಗಳ ನಡುವೆಯೇ, ನಿರುದ್ಯೋಗಿ ಪದವೀಧರರೊಬ್ಬರು ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ವಿಳಂಬನೀತಿಯ ಬಗ್ಗೆ ಪ್ರತಿಭಟಿಸಿ ಬಂಧನಕ್ಕೊಳಗಾಗಿದ್ದಾರೆ.

ಮೇಲಿನ ಮೂರೂ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಸ್ವಾಮಿ ವಿವೇಕಾನಂದರು ದೇಶಕ್ಕೆ ಕೊಟ್ಟ ಕೊಡುಗೆ ಹಾಗೂ ಅವರ ಜನ್ಮದಿನದಂದು ನಾವು ಅವರಿಗೆ ತೋರುತ್ತಿರುವ ಗೌರವ ಗಮನಕ್ಕೆ ಬಂದು ಬೇಸರವಾಗುತ್ತದೆ. ಹಾಗೆಯೇ, ದೇಶದ ಯುವ ಜನತೆಯ ಘನಘೋರ ವಾಸ್ತವ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ.

ದೇಶದ ಜನರ ಓದು, ತಿಳಿವಳಿಕೆ, ಜ್ಞಾನ ಕೌಶಲಗಳಿಗೆ ಅನುಗುಣವಾದ ದುಡಿಮೆಗಳು ದೊರೆತರೆ, ಆ ದುಡಿಮೆಗೆ ತಕ್ಕ ಸಂಭಾವನೆ ಸಿಕ್ಕರೆ, ಅದು ಸಾಮಾಜಿಕ ಚಲನಶೀಲತೆಗೆ ಕಾರಣವಾಗುತ್ತದೆ. ಜನರ ಕೈಯಲ್ಲಿ ಕಾಸು ಓಡಾಡಿದರೆ, ಅದು ಸಮಾಜ ಪ್ರಗತಿಯತ್ತ ದಾಪುಗಾಲು ಹಾಕಿ ದೇಶದ ಆರ್ಥಿಕತೆಗೆ ವೇಗ ಬರುತ್ತದೆ. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತವರಿಗೆ ಇಷ್ಟು ಜ್ಞಾನವಿಲ್ಲದೆ ಹೋದರೆ, ಅಂಥ ದೇಶ ಅರಾಜಕತೆಯತ್ತ ಸಾಗಿ ಅಧೋಗತಿಗೆ ಇಳಿಯುತ್ತದೆ.

2016ರ ನವೆಂಬರ್‍‌ನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ರದ್ದತಿ ನಿರ್ಧಾರದಿಂದಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿತು. 2017ರ ಜೂನ್ 30ರ ಮಧ್ಯರಾತ್ರಿ ದೇಶದಾದ್ಯಂತ ಅಧಿಕೃತವಾಗಿ ಏಕರೂಪ ತೆರಿಗೆ ವ್ಯವಸ್ಥೆ(ಜಿಎಸ್‌ಟಿ) ಜಾರಿಗೆ ತಂದ ಪರಿಣಾಮವಾಗಿ ಸಣ್ಣ ಕೈಗಾರಿಕೆಗಳು ಸೊರಗಿದವು. 2018ರಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿ ಆಘಾತ ಮೂಡಿಸಿತು. 2019 ಮತ್ತು 2020ರ ಬಳಿಕ, ಕೋವಿಡ್ ಸಾಂಕ್ರಾಮಿಕ ರೋಗ ಉಲ್ಭಣಗೊಂಡು ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿತು. ಈ ಅವಧಿಯಲ್ಲಿ ಕನಿಷ್ಠ ಒಂದು ಕೋಟಿ ಉದ್ಯೋಗಗಳು ನಷ್ಟವಾಗಿದ್ದವು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ, ಭಾರೀ ಪ್ರಚಾರ ಪಡೆದ ಪ್ರಧಾನಿ ಮೋದಿಯವರು, ಯುವ ಜನತೆ ಕೆಲಸ ಕೇಳಿದಾಗ ಪಕೋಡ ಮಾರಿ ಎಂದರು. ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿರುವ ಈಗ, ಪ್ರಧಾನಿಯವರು ಶ್ರೀರಾಮನ ಭಜನೆ ಶುರು ಮಾಡಿದ್ದಾರೆ. ದೇವರು-ಧರ್ಮದ ಅಮಲು ಏರಿಸಿ, ದೇಗುಲದ ಕಸ ಗುಡಿಸಿ ಎಂದು ಯುವ ಜನತೆಗೆ ಕರೆ ಕೊಟ್ಟಿದ್ದಾರೆ.

ದೇಶದ ಯುವ ಜನತೆಯ ಕೈಗೆ ಕೆಲಸ ಕೊಟ್ಟು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾದ, ನ್ಯಾಯ ಒದಗಿಸಬೇಕಾದ ವಿಚಾರದಲ್ಲಿ ಮೋದಿಯವರು ಕಳೆದ 10 ವರ್ಷಗಳಲ್ಲಿ ಬಹಳ ದೊಡ್ಡ ಅನ್ಯಾಯವೆಸಗಿದ್ದಾರೆ. ದೇಶದ ಯುವಶಕ್ತಿಯನ್ನು ಬಳಸಿಕೊಂಡು ದೇಶದ ಕೀರ್ತಿಯನ್ನು ಜಗತ್ತಿನ ಬಲಾಢ್ಯ ದೇಶಗಳ ಮಟ್ಟಕ್ಕೆ ಏರಿಸಬೇಕಾದವರು- ಓಟಿಗಾಗಿ, ಕುರ್ಚಿಗಾಗಿ, ಸ್ವಾರ್ಥಕ್ಕಾಗಿ ಜೈ ಶ್ರೀರಾಮ್ ಮೊರೆ ಹೋಗಿದ್ದಾರೆ.

‘ಯಾವ ಸಮಾಜ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಆ ಸಮಾಜದಲ್ಲಿ, ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ’ ಎಂದಿದ್ದ ವಿವೇಕಾನಂದರ ಈ ಮಾತು- ದೇಶದ ಯುವ ಜನತೆಗೆ ಅರ್ಥವಾದರೆ, ಅದು 2024ರ ಚುನಾವಣೆಯಲ್ಲಿ ಪ್ರತಿಬಿಂಬಿತವಾದರೆ, ದೇಶ ಮತ್ತು ಜನ- ಇಬ್ಬರೂ ಉಳಿಯುತ್ತಾರೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಇದಲ್ಲಾ ಒಂದು challenging issues. ಬಹಳ ವರ್ಷಗಳಿಂದ disputed site ಆಗಿದ್ದು ಇದೀಗ ಮಾನ್ಯ ನ್ಯಾಯಲಯದಲ್ಲಿ ಬಗೆಹರಿಸಲಾಗಿದ್ದು ತೀರ್ಪಿನ ಅನ್ವಯ ಶ್ರೀ ರಾಮ ಮಂದಿರ ಕಟ್ಟಲಾಗಿದೆ. ಪ್ರಪಂಚದಲ್ಲಿ ಎಲ್ಲರನ್ನು ಖುಷಿ ಪಡಿಸುವುದಿ ಅಸಾಧ್ಯ. pending ಇರುವ ದೊಡ್ಡ ಸಮಸ್ಯಗಳು ಇತ್ತೀಚೆಗೆ ಅಷ್ಟೆ ಬದಲಾಗುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಸಹ ಉದ್ಯೋಗ ಸೃಷ್ಟಿ ಮಾಡದೆ ನಗದು ಹಂಚುತ್ತಿರುವುದು ಒಂದು ದುರದೃಷ್ಟಕರ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದಯೆ ಎಂಬುದು ಸಂಶಯ ಕಾಡಿದೆ. ಅವರು ಸಹ ಇದನ್ನ ಒಪ್ಪುತ್ತಿರಲಿಲ್ಲ ಎಂದು ಭಾವಿಸುತ್ತೇನೆ. 76 ವರ್ಷಗಳ ಸ್ವಾಂತತ್ರ ನಂತರ ಹೊಸ ತಂತ್ರ. ಬಹಳ confusing ಪರಿಸ್ಥಿತಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...