ಬೆಳಕಿನ ಮೀನುಗಾರಿಕೆ ಅವೈಜ್ಞಾನಿಕ ಪದ್ಧತಿ ಎಂಬ ಕಾರಣಕ್ಕೆ ನಿಷೇಧಿಸಲಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ದುಮುಚ್ಚಿ ನಡೆಸಲಾಗುತ್ತಿದ್ದ ಬೆಳಕಿನ ಮೀನುಗಾರಿಕೆ ಇದೀಗ ಮುಕ್ತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೈತಕೋಲದ ಬಂದರಿನಲ್ಲಿ ಬೆಳಕಿನ ಮೀನುಗಾರಿಕೆ ನಡೆಸಿ ದಡಕ್ಕೆ ಮರಳಿದ ಬೋಟ್‌ವೊಂದರ ದೃಶ್ಯಗಳನ್ನು ಮೀನುಗಾರರೊಬ್ಬರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನಿತ್ಯ ಹಲವು ಬೋಟ್‍ಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳಕಿನ ಮೀನುಗಾರಿಕೆ ನಡೆಸುತ್ತಿವೆ ಎಂದು ಅವರು ದೂರಿದ್ದಾರೆ.
ಜಿಲ್ಲೆಯ ಹತ್ತಾರು ಪರ್ಸಿನ್ ಬೋಟ್‍ಗಳು ನಿರಾತಂಕವಾಗಿ ಆಳಸಮುದ್ರದಲ್ಲಿ ಬೆಳಕಿನ ಮೀನುಗಾರಿಕೆ ನಡೆಸುತ್ತಿವೆ ಎಂದು ಸಾಂಪ್ರದಾಯಿಕ ಮೀನುಗಾರರು ಆರೋಪಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಳಕಿನ ಮೀನುಗಾರಿಕೆ ನಡೆಸುವ ಬೋಟುಗಳನ್ನು ಪತ್ತೆ ಹಚ್ಚಿ ಹಿಡಿದುಕೊಡುವ ಕೆಲಸವನ್ನು ಮೀನುಗಾರರೇ ಮಾಡಿದ್ದರು.
ಆದರೆ, ಈ ಬಾರಿ ಹಲವು ಬೋಟುಗಳ ನಿಷೇಧಿತ ಪದ್ಧತಿ ಮೂಲಕ ಮೀನುಗಾರಿಕೆ ನಡೆಸುತ್ತಿದ್ದರು ದೂರು ನೀಡಲು ಯಾರು ಮುಂದೆ ಬರುತ್ತಿಲ್ಲ. ಬೈತಕೋಲ, ಹೊನ್ನಾವರ, ಭಟ್ಕಳ ಭಾಗದಲ್ಲಿ ಹಲವು ಪರ್ಸಿನ್ ಬೋಟುಗಳು ಬೆಳಕಿನ ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ ಎಂದು ಮೀನುಗಾರರು ದೂರುತ್ತಿದ್ದಾರೆ.
‘ಆಳಸಮುದ್ರದಲ್ಲಿ 250 ಕೆ.ವಿ ಸಾಮರ್ಥ್ಯದ ಜನರೇಟರ್, 12 ಎಲ್‌ಇಡಿ ಬಲ್ಬ್ ಬಳಸಿ ರಾತ್ರಿ ವೇಳೆ ಪ್ರಖರ ಬೆಳಕು ಬೀರಲಾಗುತ್ತದೆ. ಬೆಳಕಿಗೆ ಗುಂಪುಗೂಡುವ ಮೀನನ್ನು ಸಣ್ಣ ಗಾತ್ರದ ಬಲೆ ಬೀಸಿ ಹಿಡಿಯಲಾಗುತ್ತದೆ. ನಿಷೇಧಿತ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವವರನ್ನು ನಿಯಂತ್ರಿಸಲು ಮೀನುಗಾರಿಕೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರ್ಸಿನ್ ಬೋಟುಗಳನ್ನು ನಡೆಸುತ್ತಿದ್ದು ಅವರೇ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಲ್ಲಿನ ಬೋಟ್ ಮಾಲೀಕರೊಬ್ಬರು ಆರೋಪಿಸುತ್ತಿದ್ದಾರೆ.
ಮೀನಿನ ಸಂತತಿಗೆ ಬೆಳಕಿನ ಮೀನುಗಾರಿಕೆ ಹಾನಿ ಉಂಟುಮಾಡುತ್ತದೆ ಎಂದು ನಿಷೇಧಿಸಲಾಗಿದೆ. ಮೀನಿನ ಕೊರತೆಯಿಂದ ಬೈತಕೋಲದ 75ಕ್ಕೂ ಹೆಚ್ಚು ಟ್ರಾಲರ್ ಬೋಟುಗಳು ಸಮುದ್ರಕ್ಕೆ ಇಳಿಯದಂತ ಸ್ಥಿತಿ ಇದೆ. ಮೀನು ಕೊರತೆ ಉಂಟುಮಾಡುವ ಚಟುವಟಿಕೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಮಾದ್ಯಮದೆದುರು ತಮ್ಮ ಬೇಸರ ಹೊರಹಾಕಿದ್ದಾರೆ.