‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ಬಹು ಆಯಾಮಗಳಿಂದ ಸತ್ಯವನ್ನು ಪರೀಕ್ಷಿಸಲು ಪ್ರಯತ್ನಿಸುತ್ತವೆ. ಜಾನಪದ, ಪೌರಾಣಿಕ, ಅಭಿಜಾತ ಸಾಹಿತ್ಯದ ಕಥನಗಳನ್ನು ಮರುವಿಶ್ಲೇಷಣೆಗೆ ಒಳಪಡಿಸಿ ಶೋಧನೆ ನಡೆಸುವ ಗುಣ ಈ ಸಂಕಲನದ ಉದ್ದಕ್ಕೂ ಕಾಣುತ್ತದೆ ಎಂದು ಹಿರಿಯ ಲೇಖಕ ಅಗ್ರಾಹಾರ ಕೃಷ್ಣಮೂರ್ತಿ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗೋವಿಂದರಾಜು ತಮ್ಮ ಕಥೆಗಳ ಮೂಲಕ ಪರಂಪರೆಯ ಕಥನಗಳನ್ನು ಸಮಕಾಲೀನ ಸಂದರ್ಭದ ತಿಳುವಳಿಕೆಯ ಜೊತೆಗಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿರುವ ರೂಢಿ ಕಂದಾಚಾರಗಳನ್ನು ಪ್ರಶ್ನೆಮಾಡುವ ಗುಣ, ಕಥೆ ಹೇಳಲು ಬಳಸಿಕೊಂಡ ಭಾಷೆ, ತಂತ್ರಗಾರಿಕೆ ಈ ಸಂಕಲನವನ್ನು ವಿಶಿಷ್ಟವಾಗಿಸಿದೆ” ಎಂದರು.
ವಿಮರ್ಶಕ ರವಿಕುಮಾರ್ ನೀಹ ಮಾತನಾಡಿ, “ಕಥಾಸ್ಪರ್ಧೆಗಳು, ಸೃಜನಶೀಲ ಚಟುವಟಿಕೆಗಳ ವಿಮರ್ಶೆ, ಸಂಶೋಧನೆಗೆ ಹಿನ್ನಡೆ ಉಂಟುಮಾಡುತ್ತವೆಂಬ ಮಾತುಗಳ ನಡುವೆ ಇಲ್ಲಿನ ಕಥೆಗಳು ಸಂಶೋಧನಾತ್ಮಕ ಸೃಜನೆಗಳಾಗಿವೆ. ಈ ಸಂಕಲನ ಸಂಶೋಧನೆ-ವಿಮರ್ಶೆ-ಸೃಜನಶೀಲತೆಯ ನಡುವಿನ ಗೆರೆಯನ್ನು ಅಳಿಸಿಹಾಕಿದೆ. ಇವು ವಿಮರ್ಶಾ ಸಂಶೋಧನಾತ್ಮಕ ಕಥೆಗಳು” ಎಂದು ಹೇಳಿದರು.
“ಎಂಟು ಕಥೆಗಳನ್ನು ಹೊಂದಿರುವ ಈ ಸಂಕಲನದಲ್ಲಿ ಏಕ ಮಾದರಿಯ ಸಂಸ್ಕೃತಿ ಹೇರಿಕೆಗೆ ಸಾಹಿತ್ಯಿಕ ಪ್ರತಿರೋಧವಿದೆ. ಇಡೀ ಸಂಕಲನದ ಉದ್ದಕ್ಕೂ ಕಾವ್ಯದ ರೂಪಕಗಳು ಎದುರಾಗುತ್ತವೆ. ಕೆಲವು ಕಥೆಗಳು ಕಾವ್ಯದಿಂದ ಆರಂಭವಾದರೆ ಕೆಲವು ಕಥೆಗಳು ಕಾವ್ಯದಿಂದ ಮುಕ್ತಾಯವಾಗುತ್ತವೆ. ಇವು ಕಾವ್ಯಾತ್ಮಕ ಕಥನ ಸೃಜನೆಗಳೂ ಹೌದು. ವೈಚಾರಿಕತೆಯನ್ನು ಸೃಜನಶೀಲತೆಗೆ ಅಳವಡಿಸುವಾಗ ಅದು ತೀರಾ ವಾಚ್ಯವಾಗಿಬಿಡುವ ಸಾಧ್ಯತೆಗಳಿವೆ. ಆದರೆ ಇಲ್ಲಿನ ಕಥೆಗಳು ಬಹಳ ತಿಳಿಹಾಸ್ಯ ಬೆರೆತ ವೈಚಾರಿಕ ನಿರೂಪಣೆಗಳಾಗಿದ್ದು, ಇದು ಈ ಕಾಲದ ಮುಖ್ಯ ಸಂಕಲನ” ಎಂದರು.
ಖ್ಯಾತ ಕಥೆಗಾರ, ಅನುವಾದಕ ಕೇಶವ ಮಳಗಿ ಮಾತನಾಡಿ, “ಕಥಾ ಪರಿಸರದ ಸಂಕೀರ್ಣತೆಯ ಬಗೆಗಿನ ತಿಳಿವು, ಕಥಾವಸ್ತುವಿನ ಚೆಲುವು, ನೋವು, ವಿಷಾದವನ್ನು ವಿವರಿಸಲು ಆಯ್ದುಕೊಂಡ ಭಾಷೆ ವಿಧಾನ, ಸ್ಥಳೀಯತೆ, ಪ್ರಾದೇಶಿಕತೆಯ ದಟ್ಟ ಪ್ರತಿಫಲನ, ಪ್ರತಿ ಕಥೆಗಳಿಗೂ ಭಿನ್ನವಾಗಿ ರೂಪಿಸಿಕೊಂಡ ನುಡಿಗಟ್ಟು ಮತ್ತು ವಿನ್ಯಾಸ, ಗಾಢ ವಾಸ್ತವ ಪ್ರಜ್ಞೆ, ಕನಸು ಕನವರಿಕೆ, ಬದುಕಿನ ರೂಕ್ಷತೆ, ಅಸಂಗತತೆಯನ್ನು ವಿವರಿಸಲು ಕಥೆಗಾರ ನೀಡುವ ರೂಪಕಗಳ ಗೊಂಚಲುಗಳು, ಸಿದ್ಧಮಾದರಿಯಿಂದ ಹೊರಬಂದು ನೇಯ್ದ ಭರವಸೆ ಹುಟ್ಟಿಸುವ ಕಥೆಗಳು ಇಲ್ಲಿವೆ” ಎಂದರು.
ತುಮಕೂರು ವಿವಿ ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ, “ಕಥೆ ಏನು ಹೇಳುತ್ತದೆ, ಕಥೆ ಏನು ಮಾಡುತ್ತದೆ ಎನ್ನುವ ಪ್ರಶ್ನೆಗಳ ಜೊತೆಗೆ ಕಥೆಗಾರ ಏನು ಮಾಡಲು ಹೊರಟಿದ್ದಾನೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಭಾಷೆಯನ್ನು ಬಳಸಿ ಮಾಡುವ ಕೃತವೆಲ್ಲವು ರಾಜಕೀಯ ಚಟುವಟಿಕೆಯೇ ಆಗಿರುತ್ತವೆ. ಸಮಕಾಲೀನ ಕಥೆಗಾರರಿಗಿಂತ ಭಿನ್ನ, ಆಶಾದಾಯಕ ಬೆಳಕಿನ ಸೆಳಯುವಿಕೆಯೊಂದು ಗೋವಿಂದರಾಜುವಿನ ಕಥೆಗಳಲ್ಲಿದೆ. ಇಲ್ಲಿನ ಕಥೆಗಳಲ್ಲಿ ಕಂಡುಬರುವ ಮುಖ್ಯ ಗುಣ ಆತ್ಮವಿಮರ್ಶೆ, ಕೆ.ಬಿ ಸಿದ್ಧಯ್ಯನವರ ‘ದಕ್ಲಕಥಾದೇವಿಕಾವ್ಯ’ ಎತ್ತುವ ತನಗಿಂತ ಮೇಲಿರುವವರನ್ನು ದ್ವೇಷಿಸದೆ, ವೈರಿಗಳು ಎಂದು ನೋಡದೆ, ತನಗಿಂತ ಕೆಳಗಿರುವವರನ್ನು ತನ್ನ ತೆಕ್ಕೆಗೆ ತಂದುಕೊಳ್ಳುವ ಕಾರುಣ್ಯ ಮೈತ್ರಿ ಮುಖ್ಯವಾಗಿ ಆತ್ಮವಿಮರ್ಶೆಬೇಕಿದೆ. ಇಂತಹ ಆತ್ಮಾವಲೋಕನವನ್ನು ಕರ್ನಾಟಕದ ದಲಿತ ಚಳವಳಿ ಮಿಸ್ ಮಾಡುತ್ತಿದೆ ಅನ್ನಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಕೆಲವು ದಿನಗಳ ಹಿಂದೆ ಕೋಟಿಗಾನಹಳ್ಳಿ ರಾಮಯ್ಯ ಆದಿಮವನ್ನು ಶಾಶ್ವತವಾಗಿ ತ್ಯಜಿಸಬೇಕಾಗಿ ಬಂದಿರುವ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಇದರ ಬಗ್ಗೆ ನಾಡಿನ ಇತರ ಸಂಘಟನೆಗಳು ಮುಖ್ಯವಾಗಿ ದಲಿತ ಸಂಘಟನೆಯಾದರೂ ಒಂದು ಗಂಭೀರ ಸಂವಾದ ಮಾಡಬೇಕಿತ್ತು. ಏಕೆಂದರೆ, ಕೋಟಿಗಾನಹಳ್ಳಿ ರಾಮಯ್ಯ ಎತ್ತುತ್ತಿರುವ ಪ್ರತಿ ಮಾತೂ ಕೂಡ ಅತ್ಯಂತ ಬೆಲೆಯುಳ್ಳದ್ದು ನಮ್ಮ ನೆರಮನೆಯೊಬ್ಬರು ತಮ್ಮ ಸಮಾಜಕ್ಕೆ, ಕಾಲಕ್ಕೆ ಒದಗಿರುವ ಸಂಕಟಗಳ ಬಗ್ಗೆ ಆರ್ತವಾಗಿ ಮೊರೆಯಿಡುವ ಹಾಗೆ ಮಾತನಾಡುತ್ತಿರುವಾಗ ನಾವು ಅದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಗಾಂಧಿ ದೊಡ್ಡವರೋ, ಅಂಬೇಡ್ಕರ್ ದೊಡ್ಡವರೋ ಎಂದು ತೌಡು ಕುಟ್ಟುತ್ತಾ ಈ ಸಮಾಜ ಯಾಕೆ ಸಂವೇದನೆ ಕಳೆದುಕೊಂಡಿದೆ ಎಂಬುದು ನನ್ನ ಬಹಳ ಮುಖ್ಯ ಪ್ರಶ್ನೆ. ಕೆಡುಕನ್ನು ಅನ್ಯದಲ್ಲಿ ಗುರುತಿಸುವುದು ಸುಲಭ. ಆದರೆ ನನ್ನೊಳಗಿನ ಕೆಡುಕಿನ ದಾರಿಯನ್ನು ಅನ್ವೇಷಿಸುವುದು ಕಷ್ಟ. ಈ ಕಥೆಗಾರ ಕಷ್ಟದ ಹಾದಿಯನ್ನು ಆರಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ನಿರ್ಧಾರ
ಹಿರಿಯ ಲೇಖಕ ಕರೀಗೌಡ ಬೀಚನಹಳ್ಳಿ ಮಾತನಾಡಿ, “ಮನಃಶಾಸ್ತ್ರೀಯ ಮತ್ತು ಸಂಶೋಧನೆಯ ಅನೇಕ ಥಿಯರಿಗಳ ತಳಹದಿಯ ಮೇಲೆ ಇಲ್ಲಿನ ಕತೆಗಳನ್ನು ಕಟ್ಟಲಾಗಿದೆ. ಇವು ಸಂಶೋಧಕನೊಬ್ಬ ಬರೆದ ಕಥೆಗಳು” ಎಂದರು.
ಮಲ್ಲಿಕಾ ಬಸವರಾಜು ಮಾತನಾಡಿ, “ಆಧುನಿಕತೆ-ಪುರಾಣವನ್ನು ಸೃಜನಶೀಲವಾಗಿ ಬೆರೆಸಿದ ಇಲ್ಲಿನ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಅಪಾರ ಗಟ್ಟಿ ಧ್ವನಿ ಇದೆ. ಇದು ಸಮಕಾಲೀನ ಸಂದರ್ಭದಲ್ಲಿ ಗಮನಿಸಲೇಬೇಕಾದ ಸಂಕಲನವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಗೋವಿಂದರಾಜು ಎಂ ಕಲ್ಲೂರು, ಪ್ರಾಧ್ಯಾಪಕಿ ಗೀತಾವಸಂತ, ಆಶಾ ಬಗ್ಗನಡು, ಕಥೆಗಾರ ಗುರುಪ್ರಸಾದ್ ಕಂಟಲಗೆರೆ, ಎಸ್ ಗಂಗಾಧರಯ್ಯ, ಕುಂದೂರು ಮುರುಳಿ, ಚೈತ್ರಾ, ಕೊಟ್ಟಶಂಕರ್, ಮರಿಯಾಂಬಿ, ಸುಧಾಕರ್ ಕೆ ಎಸ್ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.