ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಕೆ.ಜೆ ಜಾಯ್ ನಿಧನರಾಗಿದ್ದಾರೆ. 77 ವರ್ಷ ವಯಸ್ಸಿನವರಾಗಿದ್ದ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಹಿರಿಯ ಸಂಗೀತ ನಿರ್ದೇಶಕರು ಸೋಮವಾರ ಬೆಳಗಿನ ಜಾವ 2:30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಮಲಯಾಳಂ ಚಲನಚಿತ್ರ ಸಂಗೀತದಲ್ಲಿ ಮೊದಲ ಟೆಕ್ನೋ ಸಂಗೀತಗಾರ ಎಂದು ಕರೆಯಲ್ಪಡುವ ಕೆ.ಜೆ. ಜಾಯ್, ಮಲಯಾಳಂ ಸಿನಿರಂಗವನ್ನು ತಮ್ಮ ಹಾಡುಗಳಿಂದ ಶ್ರೀಮಂತಗೊಳಿಸಿದವರು. ತಮ್ಮ ಸಂಗೀತ ಸಂಯೋಜನೆಗಳೊಂದಿಗೆ ಮಾಲಿವುಡ್ನಲ್ಲಿ ಅಳಿಸಲಾಗದ ಗುರುತು ಬಿಟ್ಟುಹೋಗಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್. ವಿಶ್ವನಾಥನ್ ಅವರಿಗೆ ವಾದ್ಯಗಾರರಾಗಿ ಚಿತ್ರರಂಗದಲ್ಲಿ ಕೆ.ಜೆ. ಜಾಯ್ ಪಯಣ ಆರಂಭವಾಗಿತ್ತು. ಆರಂಭದಲ್ಲಿ ಎಂ.ಎಸ್. ವಿಶ್ವನಾಥನ್ ಸಂಯೋಜಿಸಿದ ಹಾಡುಗಳಲ್ಲಿ ಅಕಾರ್ಡಿಯನ್ ಕಲಾವಿದರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಸಂಗೀತ ನಿರ್ದೇಶಕರಾಗಿ ಕೆಲಸ ಪ್ರಾರಂಭಿಸಿದ್ದರು. ಅವರಿಗೆ ಎಂ.ಎಸ್. ವಿಶ್ವನಾಥನ್ ಸಹ ಪ್ರೋತ್ಸಾಹ ನೀಡಿದ್ದರು.
1975ರಲ್ಲಿ ಬಿಡುಗಡೆಯಾದ ‘ಲವ್ ಲೆಟರ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕೆ.ಜೆ. ಜಾಯ್ ಗುರುತಿಸಿಕೊಂಡರು. ಈ ಸಿನಿಮಾಕ್ಕೆ ಗೀತರಚನೆಕಾರರಾದ ಭರಣಿಕಾವು ಶಿವಕುಮಾರ್ ಮತ್ತು ಸತ್ಯನ್ ಅಂತಿಕಾಡ್ ಸಾಹಿತ್ಯದ ಕೊಡುಗೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಮಮಂದಿರ | ತಪ್ಪನ್ನು ನಾವು ತಪ್ಪು ಅಂತಾನೇ ಹೇಳುತ್ತೇವೆ, ಅದರಲ್ಲಿ ಮುಲಾಜಿಲ್ಲ: ಅವಿಮುಕ್ತೇಶ್ವರಾನಂದ ಸ್ವಾಮೀಜಿ
ಕೆ.ಜೆ. ಜಾಯ್ ಅವರ ಅಸಾಧಾರಣ ಪ್ರತಿಭೆಯು ಅವರಿಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತ್ತು. ಮಲಯಾಳಂ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದರು. ಕೆ.ಜೆ. ಜಾಯ್ ಅವರ ನೆನಪಿನಲ್ಲಿ ಉಳಿಯುವ ಚಿತ್ರಗಳಲ್ಲಿ ‘ಇವನೆಂತೆ ಪ್ರಿಯಾಪುತ್ರನ್’, ‘ಚಂದನಚೋಳ’, ‘ಆರಾಧನಾ’, ‘ಸ್ನೇಹ ಯಮುನಾ’, ‘ಮುಕ್ಕುವನೆ ಸ್ನೇಹಿಚ ಭೂತಂ’, ‘ಮನುಷ್ಯ ಮೃಗಂ’, ‘ಸರ್ಪಂ’, ‘ಶಕ್ತಿ’ ಸೇರಿ ಇನ್ನೂ ಅನೇಕ ಸಿನಿಮಾಗಳಿವೆ.