ಸಿಲಿಂಡರ್ ಸ್ಪೋಟಗೊಂಡು ಏಳು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಎಲ್‌ಬಿಎಸ್ ಲೇಔಟ್‌ನಲ್ಲಿ ನಡೆದಿದೆ.
ಅಫ್ರೋಜ್, ಪಸಿಯಾ ಭಾನು, ಹಸ್ಮಾ, ಶಾಹಿದ್ ಸೇರಿದಂತೆ ಆರು ಜನರಿಗೆ ಗಾಯಗಳಾಗಿದ್ದು, ಈ ಪೈಕಿ ಪಸಿಯಾ ಭಾನು ಮತ್ತು ಹಸ್ಮಾ ಇಬ್ಬರ ಸ್ಥಿತಿ ಗಂಭೀರವಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದೆಹಲಿ ಮೂಲದ ಹಸ್ಮಾ ಬಾನು ಎಂಬುವವರು ಮನೆ ಕೆಲಸ ಮಾಡಿಕೊಂಡು ಬೆಂಗಳೂರು ಎಲ್‌ಬಿಎಸ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಇವರ ಮನೆಯ ಸಿಲಿಂಡರ್ ಸ್ಟೋಟಗೊಂಡು ಅಕ್ಕಪಕ್ಕದ ಐದು ಮನೆಗಳಿಗೆ ಹಾನಿಯಾಗಿದೆ. ಜತೆಗೆ, ಮನೆಯಲ್ಲಿದ್ದ ಒಟ್ಟು ಏಳು ಮಂದಿಗೆ ಗಂಭೀರ ಗಾಯವಾಗಿದ್ದು, ಎಲ್ಲ ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ದೆಹಲಿ ಮೂಲದ ಹಸ್ಮಾ ಬಾನು ಎಂಬುವವರ ಮನೆಯಲ್ಲಿ ರಾತ್ರಿ ಗ್ಯಾಸ್ ಸೋರಿಕೆಯಾಗಿದ್ದು, ಮನೆಯ ಎಲ್ಲ ಕಿಟಕಿ ಬಾಗಿಲು ಬಂದ್ ಮಾಡಿದ್ದರಿಂದ ಸೋರಿಕೆಯಾದ ಅನಿಲ ಹೊರಗೆ ಹೋಗಲು ಆಗಿಲ್ಲ. ಮನೆಗಳು ಚಿಕ್ಕ ಚಿಕ್ಕದಾಗಿರುವ ಕಾರಣಕ್ಕೆ ಎಲ್ಲೆಡೆ ಗ್ಯಾಸ್ ಅನಿಲ ಸೇರಿಕೊಂಡಿದೆ. ಎಲ್ಲ ಕಿಟಕಿಗಳು ಬಂದ್ ಆಗಿದ್ದರಿಂದ ಬೆಳಗ್ಗೆ ಎದ್ದಾಗ ಮಹಿಳೆ ಮನೆಯಲ್ಲಿ ಲೈಟ್ ಹಾಕಲು ಸ್ವಿಚ್ ಹಾಕಿದಾಗ ಲೈಟ್ ಬಂದಿದ್ದರಿಂದ ತಕ್ಷಣವೇ ಇಡೀ ಮನೆ ಸ್ಪೋಟಗೊಂಡಿರಬಹುದು. ಇನ್ನು ಮನೆಗಳ ಗೋಡೆಗಳು ಒಂದಕ್ಕೊಂದು ಅಟ್ಯಾಚ್ ಆಗಿರುವುದರಿಂದ ಹಾನಿಯ ಪ್ರಮಾಣ ಐದು ಮನೆಗಳಿಗೆ ವ್ಯಾಪಿಸಿದೆ. ಇದೇ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ.
ಈ ಘಟನೆಯಲ್ಲಿ ಇಬ್ಬರ ದೇಹದ ಭಾಗಗಳು ಬಹುತೇಕ ಸುಟ್ಟುಹೋಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ಡ್ಯೂಟಿ, ರಜೆ ನೀಡಲು ಒಂದೂವರೆ ಕೋಟಿ ರೂ. ಲಂಚ ಪಡೆದಿದ್ದ 7 ಅಧಿಕಾರಿಗಳ ಅಮಾನತು
“ಬೆಳಗ್ಗೆ 7.10ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಮ್ಮ ಅಮ್ಮ ಮೊದಲ ಮಹಡಿಯಲ್ಲಿ ಇದ್ದರು. ನಾವು ಮತ್ತು ನಮ್ಮ ತಂದೆ ಕೆಳಗೆ ಇದ್ದೆವು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ಆದರೆ, ಪಕ್ಕದಲ್ಲಿ ದೆಹಲಿ ಮೂಲದ ಮಹಿಳೆ ವಾಸವಿದ್ದ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ನನಗೆ ಕರೆಂಟ್ ಹೊಡೆದು ಬಿದ್ದುಹೋಗಿದ್ದೆ. ಆಸ್ಪತ್ರೆಗೆ ಸೇರಿಸಲು ನನ್ನನ್ನು ಕರೆತಂದಿದ್ದಾರೆ. ಒಟ್ಟು ಐದು ಮನೆಗೆ ಹಾನಿ ಆಗಿದೆ. ಏಳು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಗಾಯಾಳು ಅಫ್ರೋಜ್ ತಿಳಿಸಿದ್ದಾರೆ.