ವಿಮಾನ ಹಾರಾಟ ಆರಂಭಿಸಲು ವಿಳಂಬವಾದ ಕಾರಣಕ್ಕಾಗಿ ಇಂಡಿಗೋ ವಿಮಾನದ ಕೋ-ಪೈಲಟ್ ಮೇಲೆ ಪ್ರಯಾಣಿಕನೋರ್ವ ಹಲ್ಲೆಗೈದಿದ್ದ ವಿಡಿಯೋ ವೈರಲ್ ಆದ ನಂತರ, ಇಂಡಿಗೋ ಸಂಸ್ಥೆಗೆ ಸಂಬಂಧಿಸಿದ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗಿದೆ.
ಮಂಜಿನ ಕಾರಣಕ್ಕಾಗಿ ಕೆಲ ಗಂಟೆಗಳ ಕಾಲ ವಿಮಾನಯಾನ ವಿಳಂಬವಾದ ಕಾರಣ ಹಾಗೂ ನಿಗದಿತ ಸ್ಥಳವನ್ನು ಹೊರತುಪಡಿಸಿ ಬೇರೆಡೆ ವಿಮಾನವನ್ನು ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಿಕರು ರನ್ ವೇಯಲ್ಲಿಯೇ ಕುಳಿತು ರಾತ್ರಿ ಊಟ ಮಾಡುತ್ತಿರುವ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
passengers of IndiGo Goa-Delhi who after 12 hours delayed flight got diverted to Mumbai having dinner just next to indigo plane pic.twitter.com/jGL3N82LNS
— JΛYΣƧΉ (@baldwhiner) January 15, 2024
ಈ ಬೆಳವಣಿಗೆ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ಘಟನೆಯ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಸಂಸ್ಥೆ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
Breaking now: Ministry of Civil aviation issues show cause notice to Indigo and Mumbai International airport after video of passengers seated on tarmac goes viral. https://t.co/Jd3NJf7VA4
— Rajdeep Sardesai (@sardesairajdeep) January 16, 2024
ಗೋವಾದಿಂದ ದೆಹಲಿಗೆ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನವು ಜನವರಿ 14 ರಂದು ಅಂದಾಜು 18 ಗಂಟೆಗಳ ಕಾಲ ವಿಳಂಬವಾಯಿತು. ಅಲ್ಲದೆ, ದೆಹಲಿಯ ಬದಲಿಗೆ ಮುಂಬೈಗೆ ಈ ವಿಮಾನವನ್ನು ಕೊಂಡೊಯ್ಯಲಾಯಿತು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೆಲವು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಇಂಡಿಗೋ ಘಟನೆ | ವಿಮಾನ ಪ್ರಯಾಣಿಕರ ಅಶಿಸ್ತಿನ ವರ್ತನೆ ಸಹಿಸಲ್ಲ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
ವಿಳಂಬದಿಂದ ನಿರಾಶೆಗೊಂಡ ಇಂಡಿಗೋ ವಿಮಾನ ಸಂಖ್ಯೆ 6E2195 ವಿಮಾನದ ಪ್ರಯಾಣಿಕರು ವಿಶ್ರಾಂತಿ ತೆಗೆದುಕೊಳ್ಳಲು ಒತ್ತಡ ಹೇರಿದ್ದರಿಂದ ಇಂಡಿಗೋ ವಿಮಾನದ ಪಕ್ಕದ ರನ್‌ವೇಯಲ್ಲಿ ಕುಳಿತು ಊಟ ಮಾಡಲು ಕುಳಿತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವೈರಲಾಗಿರುವ ವೀಡಿಯೊಗಳಲ್ಲಿ ಕೆಲವು ಪ್ರಯಾಣಿಕರು ಊಟವನ್ನು ಮಾಡುತ್ತಿದ್ದರೆ, ಇತರರು ರನ್‌ವೇಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿದೆ. ಈ ವಿಮಾನವು ಜನವರಿ 15 ರಂದು (ಸೋಮವಾರ) ಬೆಳಗ್ಗೆ 5:12ಕ್ಕೆ ಮುಂಬೈಗೆ ಬಂದಿಳಿದಿದ್ದವು ಎಂದು ವರದಿಯಾಗಿದೆ.
But Indian Railways provides delicious food on the train? Why complain about a small inconvenience? Please don’t share such Anti Govt videos to show India in a bad light. https://t.co/gmJIBSQdqB
— Mohammed Zubair (@zoo_bear) January 16, 2024
ಭಾರೀ ಟೀಕೆಗಳ ನಂತರ ಈ ಕುರಿತು ಇಂಡಿಗೋ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, “ಈ ಬೆಳವಣಿಗೆಗೆ ನಾವು ವಿಷಾದಿಸುತ್ತೇವೆ. ನಮ್ಮ ಸಂಸ್ಥೆಯ ವಿಮಾನದ ಮೂಲಕ ಪ್ರಯಾಣ ಮಾಡುವವರ ಪ್ರಯಾಣಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಲ್ಲ. ಆದರೂ, ಕೆಲವೊಮ್ಮೆ, ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಇಂತಹ ವಿಳಂಬಗಳು ವಿಮಾನಯಾನ ಸಂಸ್ಥೆಯ ನಿಯಂತ್ರಣವನ್ನೂ ಕೂಡ ಮೀರಿವೆ. ನೀವು ಇದನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಿರೀಕ್ಷಿಸುತ್ತೇವೆ” ಎಂದು ಏರ್‌ಲೈನ್ಸ್ ಹೇಳಿದೆ.
ವಿಮಾನ ನಿಲ್ದಾಣವನ್ನು ರೈಲ್ವೆಯಂತೆ ಪರಿವರ್ತಿಸುತ್ತೇನೆ ಎಂದಿದ್ದ ಪ್ರಧಾನಿಯವರ ಹಳೆಯ ಹೇಳಿಕೆ ವೈರಲ್!
ಇಂಡಿಗೋ ಏರ್‌ಲೈನ್ಸ್ ವಿರುದ್ಧ ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ನಲ್ಲಿ ನಿರಂತರ ವಿಳಂಬದ ಬಗ್ಗೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಮಂಜಿನ ಕಾರಣದಿಂದಾಗಿ ಈ ರೀತಿಯ ಬೆಳವಣಿಗೆಯಾಗಿರುವುದಾಗಿ ನಿನ್ನೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿಕೆ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಂತರ, ರೈಲ್ವೆಯನ್ನು ವಿಮಾನ ನಿಲ್ದಾಣದಂತೆ ಪರಿವರ್ತಿಸುತ್ತೇನೆ, ಹವಾಯಿ ಚಪ್ಪಲಿ ಧರಿಸಿದ ಸಾಮಾನ್ಯ ನಾಗರಿಕರು ಕೂಡ ಹವಾಯಿ ಜಹಾಜ್(ವಿಮಾನ)ದಲ್ಲಿ ಪ್ರಯಾಣಿಸಲು ಸಾಧ್ಯವಾಗಬೇಕು ಎಂದು ಪ್ರಧಾನಿಯವರು ನೀಡಿದ್ದ ಹಳೆಯ ಹೇಳಿಕೆಯು ಈಗ ವೈರಲ್ ಆಗುತ್ತಿದೆ.
ಈ ಬಗ್ಗೆ ಪೋಸ್ಟ್ ಹಾಕುತ್ತಿರುವ ನೆಟ್ಟಿಗರು, “ಮೋದಿಜೀಯವರು ಈ ಹಿಂದೆ ನೀಡಿದ್ದ ಭರವಸೆಯನ್ನು ಇಂಡಿಗೋ ಸಂಸ್ಥೆಯವರು ಈಡೇರಿಸಿದ್ದಾರೆ. ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳಲ್ಲಿ ನೆಲದಲ್ಲೇ ಕುಳಿತು ಊಟ ಮಾಡುವಂತೆಯೇ, ಇಂಡಿಗೋದವರು ಕೂಡ ಪ್ರಯಾಣಿಕರನ್ನು ರನ್‌ವೇಯಲ್ಲಿ ಕುಳ್ಳಿರಿಸಿ ಊಟ ನೀಡಿದ್ದಾರೆ. ಮೋದಿ ಹೈ ತೊ ಮುಮ್ಕಿನ್ ಹೈ” ಎಂದು ವ್ಯಂಗ್ಯವಾಡಿದ್ದಾರೆ.