“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆ ವಿಚಾರದಲ್ಲಿರುವ ಕೆಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೂಡಲೇ ಆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕಾನೂನು ಪರಿಮಿತಿಯೊಳಗೆ ಎಷ್ಟು ತೆರಿಗೆ ಕಡಿಮೆ ಮಾಡಲು ಸಾಧ್ಯವೋ ಅಷ್ಟು ತೆರಿಗೆ ಕಡಿಮೆ ಮಾಡುತ್ತೇವೆ. ಎಲ್ಲವನ್ನೂ ಪುಕ್ಸಟೆ ಕೊಡಲು ಆಗುವುದಿಲ್ಲ. ಕೊಟ್ಟರೆ, ಅದಕ್ಕೆ ಅರ್ಥವೂ ಇರುವುದಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು, ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಶೇಷಾದ್ರಿಪುರಂನ ಶಿರೂರ್ ಆಟದ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಕಲ ಚೇತನರು ಹಾಗೂ ಹಿರಿಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, “ಬೆಂಗಳೂರು ದಕ್ಷಿಣ, ಹೆಬ್ಬಾಳದಲ್ಲಿ ತೆರಿಗೆ ಸಮಸ್ಯೆ ಇದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದಾರೆ. 2020ರಲ್ಲಿ ಬಿಬಿಎಂಪಿ ಏನು ಕಾಯಿದೆ ಮಾಡಿದೆ ಎಂಬ ಬಗ್ಗೆ ಗಮನಿಸುತ್ತೇನೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ. ತೆರಿಗೆ ಕಡಿಮೆ ಮಾಡಲು ಎಷ್ಟು ಸಾಧ್ಯವೋ ಅಷ್ಟು ತೆರಿಗೆ ಕಡಿಮೆ ಮಾಡುತ್ತೇವೆ. 30–40 ಸೈಟ್ ಇರುವವರಿಗೆ, ಬಡವರಿಗೆ ರಿಯಾಯಿತಿ ಕೊಡಬೇಕೆಂಬ ಚಿಂತನೆ ಇದೆ. ಹಾಗೆಯೇ, ನಿಯಮದಲ್ಲಿ ಸ್ವಲ್ಪ ಸಡಿಲಿಕೆ ನೀಡಬೇಕು ಎಂದುಕೊಂಡಿದ್ದೇವೆ” ಎಂದರು.
“ಯಾರೂ ಕೂಡ ತೆರಿಗೆ ಬಗ್ಗೆ ಗಾಬರಿಯಾಗಬೇಡಿ. ಶೆಡ್, ಶೀಟ್ ಕಟ್ಟಿಕೊಟ್ಟಿರುವವರ ಬಗ್ಗೆ ಗಮನ ಹರಿಸುತ್ತೇವೆ. ಕಾನೂನು ಪರಿಮಿತಿಯೊಳಗೆ ತೆರಿಗೆ ಕಡಿಮೆ ಮಾಡಲು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ” ಎಂದರು.
“ಕೆಲವು ಜನ ಒಂದು ಅಂತಸ್ತು ಮನೆ ಕಟ್ಟುವುದಾಗಿ ಹೇಳಿ, ಮೂರು ಅಂತಸ್ತು ಮನೆ ಕಟ್ಟಿಸುತ್ತಿದ್ದಾರೆ. ಸರ್ಕಾರಕ್ಕೆ ತೆರಿಗೆ ಕಟ್ಟದೇ ಇರುವುದು ತಪ್ಪು. ಖಾತೆ ಯಾರ ಹೆಸರಲ್ಲಿದೆಯೇ ಅವರಿಗೆ ಉಚಿತವಾಗಿ ದಾಖಲೆಗಳನ್ನು ನೀಡಲು ಮುಂದಾಗುತ್ತೇವೆ. ಹಿಂದಿನ ಸರ್ಕಾರ 1 ಲಕ್ಷ ವಸತಿ ಮನೆಗಳನ್ನು ಘೋಷಿಸಿ ಕೊಟ್ಟಿಲ್ಲ” ಎಂದು ಡಿಕೆ ಶಿವಕುಮಾರ್ ಹೇಳಿದರು.
“ರಾತ್ರಿ 10 ಗಂಟೆಯಾದರೂ ನಿಮ್ಮ ಎಲ್ಲರ ಸಮಸ್ಯೆಗಳನ್ನು ಕೇಳಿಯೇ ಹೋಗುತ್ತೇನೆ. ನಿಮ್ಮ ಸಮಸ್ಯೆಗಳನ್ನು ನೋಂದಾಯಿಸಿಕೊಳ್ಳಿ” ಎಂದು ಜನರಿಗೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೊಲೀಸರ ಸಮ್ಮುಖದಲ್ಲಿಯೇ ಕೊಲೆ ಆರೋಪಿಯ ಮನೆಗೆ ಬೆಂಕಿ
ಈ ವೇಳೆ ಸಚಿವರು ಹಾಗೂ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಬಿ.ಝಡ್ ಜಮೀರ್ ಅಹ್ಮದ್ ಖಾನ್, ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್ ಅಶ್ವತ್ಥ ನಾರಾಯಣ್, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಜಯರಾಮ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.