ಹಣದ ಆಸೆಗೆ ಬಿದ್ದು ಸ್ನೇಹಿತೆಯ ಮನೆಯಲ್ಲಿ ಹಗಲು ಹೊತ್ತಲ್ಲೇ ಮಹಿಳೆಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗುರು, ರುದ್ರೇಶ್, ಸಂದೀಪ್, ಪ್ರಭಾವತಿ ಹಾಗೂ ರೇಣುಕಾ ಬಂಧಿತರು. ಗುರು ಮತ್ತು ರೇಣುಕಾ ಇಬ್ಬರು ಪತಿ-ಪತ್ನಿಯರಾಗಿದ್ದಾರೆ. ಆರೋಪಿಗಳು ಅನುಶ್ರೀ ಎಂಬ ಮಹಿಳೆಯನ್ನು ಕಟ್ಟಿ ಹಾಕಿ, ಆಕೆಯ ಮನೆಯಲ್ಲಿ ದರೋಡೆ ಮಾಡಿದ್ದಾರೆ.
ಏನಿದು ಪ್ರಕರಣ?
ಮಾಡಿದ ಸಾಲ ತೀರಿಸೋಕೆ ಅಡ್ಡ ದಾರಿ ಹಿಡಿದ ರೇಣುಕಾ ಹಣದ ಆಸೆಗೆ ಬಿದ್ದು ತನ್ನ ಸ್ನೇಹಿತೆ ಬಳಿಯೇ ಹಣ ದೋಚಲು ಸಂಚು ರೂಪಿಸಿದ್ದಾಳೆ.
ತನ್ನ ಗ್ಯಾಂಗ್ನೊಂದಿಗೆ ಜನವರಿ 14ರ ಬೆಳಗ್ಗೆ 9.20 ಗಂಟೆ ಸುಮಾರಿಗೆ ಕೊಡಿಗೆಹಳ್ಳಿ ಸಮೀಪದ ತಿಂಡ್ಲು ಸರ್ಕಲ್ನಲ್ಲಿ ಇರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್‌ಗೆ ಮಸಾಜ್ ಥೆರಪಿಗೆಂದು ಬಂದಿದ್ದರು. ಬಳಿಕ ಅನುಶ್ರೀ ಎಂಬ ಮಹಿಳೆಯ ಮುಖಕ್ಕೆ ಕೆಮಿಕಲ್ ಇದ್ದ ಕರ್ಚಿಫ್ ಇಟ್ಟು, ಕೈ-ಕಾಲು ಕಟ್ಟಿ ಹಾಕಿ ಮಹಿಳೆಯ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು.
ರೇಣುಕಾ ಮತ್ತು ಆಕೆಯ ಪತಿ ದರೋಡೆ ಮಾಡಲು ಹಿಂದಿನ ದಿನವೇ ಮಸಾಜ್ ಸೆಂಟರ್‌ಗೆ ಬಂದು ಹೊಂಚು ಹಾಕಿದ್ದರು. ಮಸಾಜ್ ಸೆಂಟರ್‌ನಲ್ಲಿ ಥೆರಫಿಸ್ಟ್ ಒಬ್ಬಳೇ ಇದ್ದಾಗ ದರೋಡೆ ಮಾಡಲು ಬೆಳಗ್ಗೆ 8:30ರ ಸುಮಾರಿಗೆ ಮಸಾಜ್ ಸೆಂಟರ್‌ಗೆ ಎರಡು ಪಲ್ಸರ್ ಬೈಕ್‌ನಲ್ಲಿ ಗ್ಯಾಂಗ್ ಬಂದಿತ್ತು. ಗುರು, ಪ್ರಭಾವತಿ, ರುದ್ರೇಶ್, ಸಂದೀಪ್ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ಬಳಿ ಗಾಡಿ ನಿಲ್ಲಿಸಿದರು. ಬಳಿಕ ಥೆರಫಿಸ್ಟ್ ಅನುಶ್ರೀ ಒಬ್ಬರೇ ಇದ್ದದನ್ನು ಗಮನಿಸಿ ಒಳಗೆ ಬಂದು ಮಸಾಜ್ ಮಾಡಿಸಿಕೊಳ್ಳಲು ದರದ ಮಾಹಿತಿ ನೀಡಿ ಎಂದು ಚರ್ಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ ಸಮಯದಲ್ಲಿ ಕೋಮುಗಲಭೆ ಆಗದಂತೆ ನೋಡಿಕೊಳ್ಳಿ: ಸಿದ್ದರಾಮಯ್ಯ ಖಡಕ್ ಸೂಚನೆ
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆ ಮುಂದುವರೆದಿದೆ.