ರಾಯಚೂರು ಜಿಲ್ಲೆಯ ದೇವದುರ್ಗ ಕೈಗಾರಿಕಾ ಪ್ರದೇಶದ ಜಮೀನಿನ ಚೆಕ್ ಬಂದಿ ಹಾಗೂ ಹಂಚಿಕೆಗೆ ಲಭ್ಯವಾಗುವ ಭೂಮಿಯನ್ನು ಗುರುತಿಸಲು ಡಿಪಿಆರ್ ತಯಾರಿಸಲು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಬಂದ ನಂತರ ಮುಂದಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ದೇವದುರ್ಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಗಿಡ ಗಂಟೆಗಳು ಬೆಳೆದಿದ್ದು ಜಂಗಲ್ ಕಟಿಂಗ್ ಮಾಡಲು ಮುಂದೂಡಲಾಗಿತ್ತು, ಸರಹದ್ದು ಗುರುತಿಸುವ ಕುರಿತು ಜಾಲಿಗಿಡಗಳ ಜಂಗಲ್ ಕಟಿಂಗ್‌ಗೆ ಸೂಚಿಸಿದ್ದು ಅದನ್ನು ಮುಂದೂಡಲಾಗಿತ್ತು. ಇದೀಗ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾಮಗಾರಿಗಾಗಿ ಡಿಪಿಆರ್ ತಯಾರಿಸುವ ಕುರಿತು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂದ ನಂತರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಲು ಈ ಹಿಂದೆ ಕಾಮಗಾರಿ ನಡೆಸಲು ತಿಳಿಸಲಾಗಿತ್ತು, ಬಾಕಿ ಕಾಮಗಾರಿ ಪೂರ್ಣಗೊಂಡ ಬಳಿಕ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ದೇವಸುಗೂರು ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯಿಂದ ಪೈಪ್ ಲೈನ್ ಅಳವಡಿಕೆ ಕೆಲಸ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಒದಗಿಸಲು ನಗರಸಭೆಗೆ ಪತ್ರ ಬರೆದಿದೆ ಎಂದು ಕೆಐಎಡಿಬಿ ಅಧಿಕಾರಿ ಮಾಹಿತಿ ನೀಡಿದರು.
ಕೆಐಎಡಿಬಿಯಿಂದ ನಿರ್ಮಿಸಿದ ವಸತಿ ಮತ್ತು ನಿವೇಶನ ಹಂಚಿಕೆ ಮಾಡುವ ಕುರಿತು ಹಂಚಿಕೆ ಕೋರಿ 173 ಅರ್ಜಿಗಳು ಸಲ್ಲಿಕೆಯಾಗಿವೆ, 24ಅರ್ಜಿಗಳು ಶೇ.20ರಷ್ಟು ಹಣ ಪಾವತಿ ಮಾಡಿದ್ದಾರೆ, 49 ಅರ್ಜಿದಾರರು ಶೇ.100ರಷ್ಟು ಹಣ ಪಾವತಿಸಿದ್ದಾರೆ. ಅರ್ಜಿದಾರರಿಗೆ ಸ್ವಾಧೀನ ಪತ್ರ ನೀಡಲಾಗಿದೆ. ಉಳಿದ ವಸತಿ ಗೃಹಗಳಿಗೆ ಮಂಡಳಿಯಿಂದ ವಿವಿಧ ಹಂತಗಳಲ್ಲಿ ಇ-ಅಕ್ಯೂಷನ್ ಮೂಲಕ ವಿಲೇವಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೊಸ ಯೋಜನೆ ಮಂಜೂರಾತಿಗಾಗಿ ನಾಲ್ಕು ರೈಸ್ ಮಿಲ್ಲಿಂಗ್‌ಗೆ ಅರ್ಜಿಗಳು ಬಂದಿದ್ದು, ಗದ್ವಾಲ್ ರಸ್ತೆ, ವಡವಾಟಿ, ವಡ್ಲೂರು, ಮಾನವಿಯಿಂದ ನಾಲ್ಕು ಅರ್ಜಿಗಳು ಹಾಗೂ ಚಟುವಟಿಕೆ ಬದಲಾವಣೆ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಪ್ಲೈಯಾಶ್ ಬ್ರಿಕ್ಸ್ ಬದಲಾಗಿ ವೇರ್ ಹೌಸ್, ಲಾಜಿಸ್ಟಿಕ್ಸ್, ರೈಸ್ ಮಿಲ್ಲಿಂಗ್ ಬದಲಾಗಿ ವೇರ್ ಹೌಸ್, ಲಾಜಿಸ್ಟಿಕ್ಸ್, ಡ್ರಿಂಕಿಂಗ್ ವಾಟರ್ ಬದಲಾಗಿ ಪ್ಲೈಯಾಶ್ ಬ್ರಿಕ್ಸ್, ಮಾಡಲು ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಿರೆಡ್ಡಿ, ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ತ್ರಿವಿಕ್ರಮ ಜೋಷಿ, ಜಂಬಣ್ಣ ಯಕ್ಲಾಸಪೂರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.