ಶೇ 4ರಷ್ಟು ಮುಸ್ಲಿಂ ಮೀಸಲಾತಿ ರದ್ದು ತೀರ್ಮಾನ ಅತಿ ಕಳಪೆ ಮತ್ತು ದೋಷಪೂರಿತ ನಿರ್ಧಾರಕ್ಕೆ ಪ್ರಥಮ ಸಾಕ್ಷಿ ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶೇ. 4ರಷ್ಟು ಮೀಸಲಾತಿ ರದ್ದುಗೊಳಿಸಿರುವ ನಿರ್ಧಾರ “ತೀರ ಕಳಪೆ ಹಾಗೂ ದೋಷಪೂರಿತ” ಎಂದು ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಗೊಳಿಸಿದ ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಸರ್ಕಾರ ಏಪ್ರಿಲ್ 18ರವರೆಗೆ ಯಾವುದೇ ನೇಮಕಾತಿ ಅಥವಾ ದಾಖಲಾತಿಯನ್ನು ಮಾಡುವಂತಿಲ್ಲ ಎಂದು ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಕೆ ಎಂ ಜೋಸೆಫ್ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಕರ್ನಾಟಕ ಸರ್ಕಾರದ ಆದೇಶದ ನಿರ್ಧಾರ ಪ್ರಕ್ರಿಯೆ “ಕಳಪೆ ಹಾಗೂ ದೋಷಪೂರಿತವಾಗಿದ್ದಂತೆ” ಕಂಡು ಬರುತ್ತಿದೆ ಎಂದು ಹೇಳಿ, ಅದಕ್ಕೆ ತಡಯಾಜ್ಞೆ ನೀಡುವ ಇಂಗಿತ ವ್ಯಕ್ತಪಡಿಸಿದಾಗ, ಕರ್ನಾಟಕ ಸರ್ಕಾರದ ಪರವಾಗಿ ಹಾಜರಿದ್ದ ತುಷಾರ್ ಮೆಹ್ತಾ ನ್ಯಾಯಾಲಯ ಆದೇಶದ ಪಾಲನೆಯ ಭರವಸೆ ನೀಡಿದರು.
ತುಷಾರ್ ಮೆಹ್ತಾ ಸರ್ಕಾರದ ಪ್ರತಿಕ್ರಿಯೆಗಾಗಿ ಸಮಯಾವಕಾಶವನ್ನು ಕೇಳಿದರು. “ಮಾರ್ಚ್ 24ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ವಯಾವುದೇ ಬಡ್ತಿಗಳು ಅಥವಾ ನೇಮಕಾತಿಗಳನ್ನು ಮಾಡುವುದಿಲ್ಲ” ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
“ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರೆ, ಆಯೋಗದ ಅಂತಿಮ ವರದಿ ಬರುವವರೆಗೂ ಸರ್ಕಾರ ಕಾಯಬಹುದಿತ್ತು. ಮುಸ್ಲಿಂ ಮೀಸಲಾತಿ ಸೌಲಭ್ಯ ಹಲವು ವರ್ಷಗಳಿಂದ ಸಿಗುತ್ತಿದೆ. ದಾಖಲೆಗಳ ಪ್ರಕಾರ ಆ ಸಮುದಾಯ ಬಹಳ ಹಿಂದುಳಿದಿದೆ. ಈಗ ದಿಢೀರನೆ ಹೇಗೆ ಬದಲಾಯಿತು?” ಎಂದು ಪೀಠ ಸರ್ಕಾರವನ್ನು ಪ್ರಶ್ನಿಸಿದೆ.
ಮುಸ್ಲಿಂ ಸಮುದಾಯದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಗೋಪಾಲ್ ಶಂಕರನಾರಾಯಣನ್, “ಮುಸ್ಲಿಂ ಮೀಸಲಾತಿ ರದ್ದುಗೊಳಿಸುವ ಮೊದಲು ರಾಜ್ಯ ಸರ್ಕಾರ ಯಾವುದೇ ಅಧ್ಯಯನ ನಡೆಸಿಲ್ಲ ಮತ್ತು ಯಾವುದೇ ದತ್ತಾಂಶವನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿಲ್ಲ” ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ, “ಅರ್ಜಿಗಳಿಗೆ ತಮ್ಮ ಅಭಿಪ್ರಾಯ ನೀಡಲು ಅವಕಾಶ ಕೊಡುವವರೆಗೂ ಮಧ್ಯಂತರ ಆದೇಶ ನೀಡಬಾರದು” ಎಂದು ಮನವಿ ಮಾಡಿಕೊಂಡರು.
ಈ ಮೊದಲು ಒಕ್ಕಲಿಗರು ಶೇ. 4 ಮತ್ತು ಲಿಂಗಾಯತರು ಶೇ. 5 ಮೀಸಲಾತಿ ಹೊಂದಿದ್ದರು. ರಾಜ್ಯ ಸಚಿವ ಸಂಪುಟದ ನಿರ್ಧಾರದ ನಂತರ, ಒಕ್ಕಲಿಗರು ಶೇ. 6 ರಷ್ಟು ಮತ್ತು ಲಿಂಗಾಯತರು ಶೇ. 7 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ.
ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇ. 10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗದಡಿಯಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಮೀಸಲಾತಿ ಮಿತಿ ಸುಪ್ರೀಂಕೋರ್ಟ್ ನಿಗದಿ ಮಾಡಿದ ಶೇ 57ನ್ನು ಮೀರುತ್ತದೆ.
ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ವಿವಿಧಡೆ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ವಿಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ.