ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಸ್ಸಾಂ ತಲುಪಿದೆ. ಈ ವೇಳೆ, ಅಸ್ಸಾಂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನ್ಯಾಯ ಮತ್ತು ನ್ಯಾಯದ ಚರ್ಚೆಗಾಗಿ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಯಾತ್ರೆಯ ಮಾರ್ಗದಲ್ಲಿ ಶಿವಸಾಗರ ಜಿಲ್ಲೆಯ ಅಮ್ಗುರಿಯಲ್ಲಿ ಅಂಗಿತಾ ದತ್ತಾ ಅವರ ನೇತೃತ್ವದಲ್ಲಿ ಧರಣಿ ನಡೆದಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ ಬಳಿಕ ತಮ್ಮನ್ನು 2023ರ ಏಪ್ರಿಲ್‌ನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ನಮಗೆ ನ್ಯಾಯ ಬೇಕೆಂದು ಆಕೆ ಧರಣಿ ನಡೆಸಿದ್ದಾರೆ.
“ನಾನು ನ್ಯಾಯವನ್ನು ಪಡೆಯಲು ಇಲ್ಲಿಗೆ ಬಂದಿದ್ದೇನೆ. ರಾಹುಲ್ ಗಾಂಧಿ ಅವರು ತಮ್ಮ ನ್ಯಾಯ ಯಾತ್ರೆಯನ್ನು ಪ್ರಾರಂಭಿಸಿದಾಗ ನನಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ನ್ಯಾಯ ಮತ್ತು ಪಕ್ಷದ ಸದಸ್ಯತ್ವಕ್ಕಾಗಿ ನಾನು ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುತ್ತೇನೆ” ಎಂದು ದತ್ತಾ ಹೇಳಿದ್ದಾರೆ.
ಆದರೆ, ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ರಾಹುಲ್ ಸುತ್ತ ಇದ್ದಿದ್ದರಿಂದ ಅವರನ್ನು ಭೇಟಿ ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಆಕೆಯ ಬೆಂಬಲಿಗರು ಹೇಳಿದ್ದಾರೆ. “ನನ್ನ ಅಮಾನತಿನ ನಂತರ ಈ 10 ತಿಂಗಳಲ್ಲಿ ನಾನು ಯಾವುದೇ ರಾಜಕೀಯ ಪಕ್ಷವನ್ನು ಸೇರಲಿಲ್ಲ. ಆದರೆ ಈ ದೇಶದ ಜನರಿಗೆ ನ್ಯಾಯವನ್ನು ಕೇಳಲು ಹೊರಟ ನಾಯಕನಿಂದ ನನಗೆ ಯಾವುದೇ ನ್ಯಾಯ ಸಿಗಲಿಲ್ಲ” ಎಂದು ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದತ್ತಾ ಬೆಂಬಲಿಗರು ಯಾತ್ರೆಯ ಮಾರ್ಗದುದ್ದಕ್ಕೂ ‘ಅಸ್ಸಾಂ ಮಗಳಿಗೆ ನ್ಯಾಯ ಬೇಕು’ ಎಂಬ ಪೋಸ್ಟರ್‌ಗಳನ್ನು ಹಾಕಿದ್ದರು. ದತ್ತಾ ಅವರ ಧರಣಿ ಬಗ್ಗೆ ಪಕ್ಷದ ರಾಜ್ಯ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿದಿತ್ತು ಎಂದು ದತ್ತಾ ಬೆಂಬಲಿಗರು ಹೇಳಿದ್ದಾರೆ.
ದತ್ತಾ ಅವರ ಮನವಿ ಪಡೆಯಲಾಗದ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದೆ. “ನ್ಯಾಯ ಎಲ್ಲರಿಗೂ ಸಿಗಬೇಕು. ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಪಕ್ಷವು ತಮ್ಮ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ನ್ಯಾಯಕ್ಕಾಗಿ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಸದಸ್ಯರಿಗೆ ಯಾಕೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಬಿಜೆಪಿ ನಾಯಕ ನಳಿನ್ ಕೊಹ್ಲಿ ಹೇಳಿರುವುದಾಗಿ ವರದಿಯಾಗಿದೆ.