ಅಸ್ಸಾಂನಲ್ಲಿ ಸಾಗಿದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಅನುಮತಿಸಲಾಗಿದ್ದ ಮಾರ್ಗದಲ್ಲಿ ತೆರಳದೆ, ಬೇರೆ ಮಾರ್ಗದಲ್ಲಿ ತೆರಳಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೆ.ಬಿ ಬೈಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಸ್ಸಾಂನ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಾತ್ರೆಯು ಜೋಹರ್ತ್ ಜಿಲ್ಲಾಡಳಿತ ಸೂಚಿಸಿದ್ದ ನಿಯಮಗಳನ್ನು ಅನುಸರಿಸಿಲ್ಲ. ರಸ್ತೆ ಸುರಕ್ಷತಾ ನಿಮಯಗಳನ್ನು ಪಾಲಿಸಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಯಾತ್ರೆಯಲ್ಲಿ ಅಸ್ಸಾಂ ಜನರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಅಸ್ಸಾಂ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ’ ಎಂದಿದ್ದರು. ಇದರಿಂದಾಗಿ, ರಾಹುಲ್ ಗಾಂಧಿ ಮತ್ತು ರಾಜ್ಯದಲ್ಲಿ ಯಾತ್ರೆಯಲ್ಲಿ ಸಂಘಟಿಸಿದ್ದ ಬೈಜು ವಿರುದ್ಧ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ದೇಬಬ್ರತ ಸೈಕಿಯಾ, “ಯಾತ್ರೆಯ ಯಶಸ್ಸಿನಿಂದ ಬಿಜೆಪಿ ವಿಚಲಿತವಾಗಿದೆ. ಹೀಗಾಗಿಯೇ, ಈ ಎಫ್‌ಐಆರ್ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಪಿಡಬ್ಲ್ಯುಡಿ ಪಾಯಿಂಟ್‌ನಲ್ಲಿ ‘ಟ್ರಾಫಿಕ್ ಡೈವರ್ಶನ್’ಅನ್ನು ನಿರ್ವಹಿಸುವ ಪೊಲೀಸರು ಇರಲಿಲ್ಲ. ನಿಯೋಜಿತ ಮಾರ್ಗವು ತುಂಬಾ ಚಿಕ್ಕದಾಗಿತ್ತು. ನಾವು ದೊಡ್ಡ ಜನಸಮೂಹ ಹೊಂದಿದ್ದೆವು. ಆದ್ದರಿಂದ, ನಾವು ಕೆಲವೇ ಮೀಟರ್‌ಗಳವರೆಗೆ ಬೇರೆ ಮಾರ್ಗದಲ್ಲಿ ಹೋದೆವು. ಅಸ್ಸಾಂನಲ್ಲಿ ಮೊದಲ ದಿನದ ಯಾತ್ರೆಯ ಯಶಸ್ಸಿನಿಂದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಯಭೀತರಾಗಿದ್ದಾರೆ. ನಮ್ಮ ಯಾತ್ರೆಯ ದಿಕ್ಕು ತಪ್ಪಿಸಲು ಅವರು ಬಯಸಿದ್ದಾರೆ” ಎಂದು ಸೈಕಿಯಾ ಹೇಳಿದ್ದಾರೆ.
ಅಸ್ಸಾಂನಲ್ಲಿ ನಡೆದ ಮೊದಲ ದಿನದ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಅಸ್ಸಾಂನ ಬಿಜೆಪಿ ಸರ್ಕಾರವು ಬಹುಶಃ ಭಾರತದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಯಾತ್ರೆಯಲ್ಲಿ ನಾವು ಅಸ್ಸಾಂನ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತೇವೆ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ರಾಹುಲ್ ಗಾಂಧಿಯಿಂದ ‘ನ್ಯಾಯ’ದ ನಿರೀಕ್ಷೆಯಲ್ಲಿ ಅಸ್ಸಾಂ ಕಾಂಗ್ರೆಸ್‌ನಿಂದ ಅಮಾನತಾದ ನಾಯಕಿ
ರಾಹುಲ್ ಹೇಳಿಕೆ ವಿರುದ್ಧ ಪ್ರತ್ಯಾರೋಪ ಮಾಡಿದ್ದ ಮುಖ್ಯಮಂತ್ರಿ ಶರ್ಮಾ, “ಗಾಂಧಿ ಕುಟುಂಬವೇ ಅತ್ಯಂತ ಭ್ರಷ್ಟ ಕುಟುಂಬವಾಗಿದೆ. ಅವರ ಯಾತ್ರೆಯು ಅಸ್ಸಾಂನಲ್ಲಿ ವಾಸಿಸುವ ಬಂಗಾಲಿ ಮುಸ್ಲಿಮರಾದಿ ‘ಮಿಯಾಸ್’ಗಳಿಗಾಗಿ ಮಾತ್ರ. ಇದು ‘ನ್ಯಾಯ್ ಯಾತ್ರೆ’ಯಲ್ಲ, ‘ಮಿಯಾ ಯಾತ್ರೆ’. ಎಲ್ಲೆಲ್ಲಿ ಮುಸ್ಲಿಮರು ಇರುತ್ತಾರೋ ಆ ಸ್ಥಳಗಳಿಗೆ ಭೇಟಿ ನೀಡುತ್ತಾರೆ” ಎಂದು ಹೇಳಿದ್ದರು.
2024ರ ಲೋಕಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಅವರುಭಾರತದ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ನಡೆಸುತ್ತಿದ್ದಾರೆ. ಸುಮಾರು 6,700 ಕಿ.ಮೀ ದೂರ ಯಾತ್ರೆ ಕ್ರಮಿಸಲಿದೆ. ಯಾತ್ರೆಯು ಜನವರಿ 14ರಂದು ಮಣಿಪುರದ ತೌಬಲ್‌ನಲ್ಲಿ ಪ್ರಾರಂಭವಾಗಿದೆ. ಮಾರ್ಚ್ 20 ಅಥವಾ 21ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಯಾತ್ರೆ ಕೊನೆಗೊಳ್ಳಲಿದೆ.