ವಿಶೇಷ ವರ್ಗಗಳ (ಸ್ಪೇಷಲ್ ಕೆಟಗರಿ) ಅಡಿಯಲ್ಲಿ ನಿವೇಶನ ಮತ್ತು ಮನೆಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಜನವರಿ 22ರಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ರಾಯಚೂರು ಜಿಲ್ಲಾ ಸಂಚಾಲಕ ನರಸಿಂಹಲು ಹೇಳಿದರು.
ರಾಯಚೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ನಗರ ಸ್ಥಳೀಯ ಸಂಸ್ಥೆಗಳಿಂದ ನಾಲ್ಕೈದು ಬಾರಿ ಸಮೀಕ್ಷೆ ನಡೆಸಿದ್ದರೂ ಜಿಲ್ಲಾಧಿಕಾರಿಯವರು ಅನುಮೋದನೆ ನೀಡಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಶಿಫಾರಸು ಮಾಡುತ್ತಿಲ್ಲ. ಅನೇಕ ಬಾರಿ ಪ್ರತಿಭಟನೆ, ಮನವಿಗಳನ್ನು ನೀಡಿದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಸರ್ಕಾರದ ಇಂತಹ ನಿರ್ಲಕ್ಷ್ಯ ಖಂಡಿಸಿ ನಡೆಯಲಿರುವ ಅಹೋರಾತ್ರಿ ಹೋರಾಟದಲ್ಲಿ ಜಿಲ್ಲೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ” ಎಂದರು.
ದಲಿತ ಸಮರ ಸೇನೆ ಜಿಲ್ಲಾಧ್ಯಕ್ಷ ನೀಲಕಂಠ ಮಾತನಾಡಿ, “ನಿವೇಶನ ಮತ್ತು ವಸತಿ ನೀಡುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಾಲ್ಕು ಬಾರಿ ಸಮೀಕ್ಷೆ ನಡೆಸಲಾಗಿದೆ. 900 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಸಿಂಧನೂರು 237, ಲಿಂಗಸೂಗೂರು 188, ಮಾನ್ವಿ 163, ಸಿರವಾರ 218, ಕವಿತಾಳ 188 ಹಾಗೂ ಹಟ್ಟಿಯಲ್ಲಿ 74 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸ್ವಚ್ಛತೆಗೆ ಆದ್ಯತೆ ನೀಡಿ: ಎನ್‌ಜಿಟಿ ಅಧ್ಯಕ್ಷ
“ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳನ್ನು ಕೇಳಿದರೆ ಉಡಾಫೆಯಾಗಿ ಮಾತನಾಡಿ, ಮಹಿಳೆಯರನ್ನು ಹೊರ ಕಳುಹಿಸುವಂತೆ ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ ನೀಡಿದರೂ ಕ್ರಮವಹಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನತಾ ದರ್ಶನದಲ್ಲಿಯೂ ದೂರು ನೀಡಲಾಗಿದ್ದರಿಂದ ಸಚಿವರು ಸೂಚನೆ ನೀಡಿದ್ದಾರೆ. ಆದರೂ ಮನೆಗಳನ್ನು ನೀಡುತ್ತಿಲ್ಲ. ವಸತಿ ಸಚಿವರೂ ಕೂಡ ಪತ್ರ ಬರೆದಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಸ್ಪಂದಿಸದೇ ಇರುವುದನ್ನು ಖಂಡಿಸಿ ಆಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ಮೂರು ಸಾವಿರ ಮಂದಿ ಮಹಿಳೆಯರು ಧರಣಿಯಲ್ಲಿ ಭಾಗವಹಿಸಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಕರಿಯಪ್ಪ, ರಂಗಮ್ಮ, ಅನಿಲ್, ಶಂಕರ, ದುರ್ಗಮ್ಮ, ಮಹಿಬೂಬಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ