ಬಾಬರಿ ಮಸೀದಿ ವಿವಾದದಲ್ಲಿ ತೀರ್ಪು ಪ್ರಕಟವಾಗಿ ನಾಲ್ಕು ವರ್ಷಗಳು ಕಳೆದಿವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಡೆಯುತ್ತಿದೆ. ಜನವರಿ 22ರಂದು ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಇದೆಲ್ಲದರ ನಡುವೆ, ಬಾಬ್ರಿ ಮಸೀದಿ ತೀರ್ಪು ನೀಡುವ ಸಮಯದಲ್ಲಿ ಮಸೀದಿ ನಿರ್ಮಾಣಕ್ಕೂ ಅಯೋಧ್ಯೆಯಲ್ಲಿ 5 ಎಕರೆ ಜಾಗ ನೀಡುವಂತೆ ಸುಪ್ರೀಂ ಆದೇಶಿಸಿತ್ತು. ಅಯೋಧ್ಯೆ ಬಳಿಯ ಧನ್ನಿಪುರ ಗ್ರಾಮದಲ್ಲಿ ಜಾಗವನ್ನು ಕೂಡ ನೀಡಲಾಗಿದೆ.
ಅಂದಹಾಗೆ, ಮಸೀದಿಗಾಗಿ ಧನ್ನಿಪುರದಲ್ಲಿ ಗುರುತಿಸಲಾಗಿರುವ ಭೂಮಿಯು ವಿವಾದಿತ ಭೂಮಿಯಿಂದ ಬರೋಬ್ಬರಿ 20 ಕಿ.ಮೀ ದೂರದಲ್ಲಿದೆ. ಆಶ್ಚರ್ಯಕರ ಸಂಗತಿ ಎಂದರೆ, ಆ ಜಾಗದಲ್ಲಿ ಈವರೆಗೆ ಒಂದೇ ಒಂದು ಇಟ್ಟಿಗೆಯನ್ನೂ ಇಡಲಾಗಿಲ್ಲ. ಆ ಜಾಗ ಖಾಲಿ ಬಿದ್ದಿದೆ. ಜಾನುವಾರುಗಳು ಅಡ್ಡಾಡುವ ತಾಣವಾಗಿದೆ. ಯುವಕರು ಆಟ ಆಡುವಾಡುವ ಬಯಲಾಗಿದೆ.
ಮಸೀದಿ ನಿರ್ಮಾಣಕ್ಕೆಂದು ನೀಡಲಾಗಿದ್ದ ಜಾಗದಲ್ಲಿ ಮಸೀದಿ ಜೊತೆಗೆ, ಕಾನೂನು ಕಾಲೇಜು, 500 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, ಪ್ರತಿದಿನ ಸುಮಾರು 1,000 ಬಡವರಿಗೆ ಉಚಿತವಾಗಿ ಆಹಾರ ನೀಡುವ ಸಮುದಾಯ ಅಡುಗೆಮನೆ ಮತ್ತು ಇತರ ಸೌಕರ್ಯಗಳನ್ನು ಒದಗಿಸುವುದಾಗಿ ಸುನ್ನಿ ವಕ್ಫ್ ಮಂಡಳಿ 2019ರಲ್ಲೇ ಹೇಳಿತ್ತು. ಅದಕ್ಕಾಗಿ ನೀಲನಕ್ಷೆಯನ್ನೂ ಸಿದ್ಧಪಡಿಸಿತ್ತು.
ಅಂತೆಯೇ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಧನ್ನಿಪುರ ಮತ್ತು ರೌನಾಹಿಯ ಗ್ರಾಮಗಳ ನಿವಾಸಿಗಳು ‘ದೊಡ್ಡ ಮಸೀದಿ’ಗಿಂತ ತುರ್ತಾಗಿ ಆಸ್ಪತ್ರೆ, ಸರ್ಕಾರಿ ಕಾಲೇಜು ಮತ್ತು ಇತರ ಸರ್ಕಾರಿ ಸಂಸ್ಥೆಗಳ ಅಗತ್ಯವಿದೆ ಎಂದು ಭಾವಿಸಿದ್ದಾರೆ.
“ಈ ಭೂಮಿಯನ್ನು ಮಸೀದಿಗೆ ಮಂಜೂರು ಮಾಡಿದಾಗಿನಿಂದ ದೇಶಾದ್ಯಂತ ರಾಜಕಾರಣಿಗಳು, ಧಾರ್ಮಿಕ ವಿದ್ವಾಂಸರು ಮತ್ತು ಪತ್ರಕರ್ತರು ಸೇರಿದಂತೆ ಪ್ರತಿದಿನ ನಾಲ್ಕೈದು ಮಂದಿ ಧನ್ನಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಆಸ್ಪತ್ರೆ, ಕಾಲೇಜು ಮತ್ತು ಸಮುದಾಯ ದಾಸೋಹದೊಂದಿಗೆ ‘ಭವ್ಯ ಮಸೀದಿ’ ನಿರ್ಮಿಸಲಾಗುವುದು ಎಂದು ಎಲ್ಲರೂ ಭರವಸೆ ನೀಡುತ್ತಾರೆ. ಆದರೆ, ನಾಲ್ಕು ವರ್ಷ ಕಳೆದರೂ ಇಲ್ಲಿ ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ. ಮಸೀದಿ ಜೊತೆಗಿನ ಎಲ್ಲ ಯೋಜನೆಗಳು ಯಾವಾಗ ನನಸಾಗುತ್ತದೋ ಆ ದೇವರೇ ಬಲ್ಲ” ಎಂದು ಮಸೀದಿ ಜಾಗದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಮೊಹಮ್ಮದ್ ಸಾಜಿದ್ ಖಾನ್ ಹೇಳಿದರು.
12ನೇ ತರಗತಿವರೆಗೆ ಓದಿರುವ ಖಾನ್, ”ನಮ್ಮ ಸುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಕಾಲೇಜು ಇಲ್ಲದ ಕಾರಣ ಉನ್ನತ ಶಿಕ್ಷಣಕ್ಕೆ ಹೋಗಲಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಈಗಾಗಲೇ ಧನ್ನಿಪುರ ಮತ್ತು ರೌನಾಹಿ ಗ್ರಾಮಗಳಲ್ಲಿ 20 ಮಸೀದಿಗಳಿವೆ. ನಮಗೆ ಮಸೀದಿಗಿಂತ ತುರ್ತಾಗಿ ಬೇಕಾಗಿರುವುದು ಸರ್ಕಾರಿ ಆಸ್ಪತ್ರೆ ಮತ್ತು ಪದವಿ ಕಾಲೇಜು. ಆಸ್ಪತ್ರೆ ಇಲ್ಲದೆ ನಾವು ಚಿಕಿತ್ಸೆಗಾಗಿ ಲಕ್ನೋ ಅಥವಾ ಫೈಜಾಬಾದ್‌ಗೆ ಹೋಗಬೇಕಾದ ಅನಿವಾರ್ಯತೆ ಇದೆ,” ಎಂದು ಸಾಜಿದ್ ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ತೀರ್ಪು ಬಂದ ಬಳಿಕ ಧನ್ನಿಪುರದಲ್ಲಿ ಜಾಗ ಮಂಜೂರಾದ ಮೇಲೆ ಮಸ್ಜಿದ್-ಎ-ಅಯೋಧ್ಯೆ ಎಂಬುದನ್ನು ಮಸ್ಜಿದ್ ಮೊಹಮ್ಮದ್ ಬಿನ್ ಅಬ್ದುಲ್ಲಾ ಎಂದು ಕರೆಯಲಾಗುತ್ತಿದೆ. ಇದು ಈಗ, ಸುನ್ನಿ ವಕ್ಫ್ ಬೋರ್ಡ್ ಸ್ಥಾಪಿಸಿರುವ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮೇಲ್ವಿಚಾರಣೆಯಲ್ಲಿದೆ.
”ಬಾಬರಿ ಮಸೀದಿಯ ತೀರ್ಪಿನಲ್ಲಿ ವಿವಾದಿತ ಮಸೀದಿಗಿಂತ ಮೊದಲು ಹಿಂದೂ ದೇಗುಲ ಇತ್ತು ಎಂದು ಹೇಳಿಲ್ಲ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಬಹುಸಂಖ್ಯಾತರ ಪ್ರಾಬಲ್ಯದಲ್ಲಿರುವುದರಿಂದ ಆ ಭೂಮಿಯನ್ನು ರಾಮಮಂದಿರಕ್ಕೆ ಕೊಟ್ಟಿದ್ದಾರೆ. ತಟಸ್ಥ ನ್ಯಾಯಾಲಯಗಳಿದ್ದರೆ ಆ ಭೂಮಿಯನ್ನು ಮುಸ್ಲಿಮರಿಗೆ ಪರಿಹಾರದೊಂದಿಗೆ ನೀಡಲಾಗುತ್ತಿತ್ತು. ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು” ಎಂದು ಧನ್ನಿಪುರದ ಸೋಹೈಲ್ ಇಸ್ಮಾಯಿಲ್ ಹೇಳಿದರು. ಅಲ್ಲದೆ, ಅವರು ತಮ್ಮ ಗ್ರಾಮದಲ್ಲಿ ಎಂದಿಗೂ ಭವ್ಯವಾದ ಮಸೀದಿ ನಿರ್ಮಿಸುವುದಿಲ್ಲ ಎಂದರು.
”ಇದೇ ಜಿಲ್ಲೆಯಲ್ಲಿ 20 ಕಿ.ಮೀ ದೂರದಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಕಳೆದ, ನಾಲ್ಕು ವರ್ಷಗಳಿಂದ ಇಲ್ಲಿ ಒಂದೇ ಒಂದು ಇಟ್ಟಿಗೆಯ ಅಡಿಪಾಯ ಕೂಡ ಹಾಕಿಲ್ಲ. ನಮ್ಮ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತಿದೆ. ನಮಗೆ ಯಾವುದೇ ಸಂಸ್ಥೆಯ ಮೇಲೆ ಭರವಸೆ ಇಲ್ಲ,” ಎಂದು ಇಸ್ಮಾಯಿಲ್ ಹೇಳಿದರು.
ರೌನಾಹಿ ಮತ್ತು ಧನ್ನಿಪುರ ಗ್ರಾಮಗಳು ಪರಸ್ಪರ ಸಮೀಪದಲ್ಲಿವೆ. ಗ್ರಾಮಗಳ ನಡುವೆ ಕೇವಲ 20 ಅಡಿ ರಸ್ತೆಯ ಅಂತರವಿದೆ. ಎರಡೂ ಗ್ರಾಮಗಳಲ್ಲಿ ಮುಸ್ಲಿಂ ಬಾಹುಳ್ಯವಿದೆ. ಪಕ್ಕದ ಗ್ರಾಮಗಳಾದ ಚಿರ್ರಾ ಮತ್ತು ಮಾಗಾಳಿ ಕೂಡ ಮುಸ್ಲಿಂ ಪ್ರಾಬಲ್ಯ ಹೊಂದಿವೆ. ಈ ಎಲ್ಲ ಹಳ್ಳಿಗಳಿಗೆ ಸಾಮಾನ್ಯ ಕೊರತೆ ಎಂದರೆ- ಶಿಕ್ಷಣ, ಮೂಲಸೌಕರ್ಯ, ನಿರುದ್ಯೋಗದ ಸಮಸ್ಯೆ.
ಭರವಸೆ ಕಳೆಗುಂದಿದೆ
ಅಯೋಧ್ಯೆಯ ರಾಮಮನೋಹರ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಸ್ನಾತಕೋತ್ತರ ಪದವಿ ಮುಗಿಸಿ ಸಿಎಟಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಾಜಿದ್ ಖಾನ್ (24) ಮಸೀದಿ ಪ್ರದೇಶದಿಂದ 100 ಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ.
“ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಸರ್ಕಾರವು ಬೃಹತ್ ಮೊತ್ತವನ್ನು ನೀಡಿದೆ. ಪ್ರಸ್ತಾಪಿತ ಮಸೀದಿ ಜಾಗಕ್ಕೆ ಸರ್ಕಾರ ಸ್ವಲ್ಪ ಹಣವನ್ನಾದರೂ ಮಂಜೂರು ಮಾಡಿದ್ದರೆ, ಕನಿಷ್ಠ ಆಸ್ಪತ್ರೆ ಮತ್ತು ಕಾಲೇಜು ನಿರ್ಮಿಸಬಹುದಿತ್ತು. ಆದರೆ, ನಾವು ಮುಸ್ಲಿಮರು ಸರ್ಕಾರದ ಆದ್ಯತೆಯಲ್ಲಿಲ್ಲ” ಎಂದು ಮಜೀದ್ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಗ್ರಾಮಸ್ಥ, ಕಟ್ಟಾ ಬಿಜೆಪಿ ಬೆಂಬಲಿಗ ಶಿವನಾರಾಯಣ ಮೌರ್ಯ ಎಂಬವರು ರಾಮಮಂದಿರದ ಮಾದರಿಯಲ್ಲಿ ಬಿಜೆಪಿ ಸರ್ಕಾರವು ಮಥುರಾ ಮತ್ತು ಕಾಶಿಯಲ್ಲಿ ವಿವಾದ ಸೃಷ್ಟಿಸುವುದನ್ನು ತಡೆಯಬೇಕು ಎನ್ನುತ್ತಾರೆ. ”ನಾಲ್ಕು ವರ್ಷಗಳ ನಂತರವೂ ಮಸೀದಿಗಾಗಿ ಮಂಜೂರು ಮಾಡಿದ ಭೂಮಿ ಇನ್ನೂ ನಿರ್ಜನವಾಗಿ ಕಾಣುತ್ತಿದೆ. ಮಸೀದಿ ನಿರ್ಮಾಣದಲ್ಲಿನ ವಿಳಂಬದ ಹಿಂದಿರುವ ಕಾರಣ ನನಗೆ ತಿಳಿದಿಲ್ಲ. ಆದರೆ, ಕೆಲವು ಪ್ರಮುಖ ಕೆಲಸಗಳನ್ನು ನಾಲ್ಕು ವರ್ಷಗಳಲ್ಲಿ ಮಾಡಬೇಕಾಗಿತ್ತು. ಆಸ್ಪತ್ರೆ ಮತ್ತು ಸಮುದಾಯ ದಾಸೋಹಕ್ಕಾಗಿ ನಾವು ಬಹಳ ದಿನಗಳಿಂದ ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.
ಗ್ರಾಮದ ಕೆಲವು ಮಂದಿ ಮಸೀದಿ ವಿಳಂಬಕ್ಕೆ ಹಣದ ಕೊರತೆ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ”ಧನ್ನಿಪುರದಲ್ಲಿ ‘ಭವ್ಯ ಮಸೀದಿ’ಯನ್ನು ನೋಡುವ ಕನಸು ಕಾಣುತ್ತಾ ಅನೇಕ ವೃದ್ಧರು ಸಾವನ್ನಪ್ಪಿದರು. ಸಮಿತಿಯ ಬಳಿ ಮಸೀದಿಗೆ ಹಣವಿಲ್ಲ ಎಂಬುದನ್ನು ನಾವು ಕೇಳುತ್ತಿದ್ದೇವೆ” ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ಸ್ಥಳೀಯ ಪತ್ರಕರ್ತ ಸೊಹ್ರಾಬ್ ಖಾನ್ ಪ್ರಕಾರ, “ಗ್ರಾಮದಲ್ಲಿ ಹಲವು ಮಸೀದಿಗಳಿವೆ. ಅವು ಜನರಿಗೆ ನಮಾಜ್ ಮಾಡಲು ಅವಕಾಶ ನೀಡುತ್ತದೆ. ಆದರೆ, 500 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣವು ಅಗತ್ಯವಾಗಿದೆ. ಆಸ್ಪತ್ರೆ ನಿರ್ಮಾಣವಾದರೆ, ಉತ್ತರ ಪ್ರದೇಶದಿಂದ ಜನರು ಕ್ಯಾನ್ಸರ್ ಚಿಕಿತ್ಸೆಗಾಗಿ ದೆಹಲಿ ಅಥವಾ ಲಕ್ನೋಗೆ ಹೋಗುವುದು ತಪ್ಪುತ್ತದೆ. ನಮ್ಮ ಗ್ರಾಮ ಆಳುವವರ ಗಮನಕ್ಕಾಗಿ ಹಾತೊರೆಯುತ್ತಿದೆ. ಆದರೆ, ಯಾರು ಇದರ ಬಗ್ಗೆ ಗಮನ ಹರಿಸುತ್ತಾರೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಧಾರ್ಮಿಕ ಗುರುತು ಮುಖ್ಯವಾಗುತ್ತದೆ” ಎಂದಿದ್ದಾರೆ.
ಸಮಿತಿಯು ಅನುದಾನದ ಸಮಸ್ಯೆ ಎದುರಿಸುತ್ತಿದೆ
ಧನ್ನಿಪುರದಲ್ಲಿ ಮಸೀದಿ ಯೋಜನೆಗಾಗಿ ರಚನೆಯಾದ ಐಐಸಿಎಫ್‌ನ ಕಳೆದ ವರ್ಷದ ಅಂದಾಜಿನ ಪ್ರಕಾರ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಡಿಎ) ಪಾವತಿಸಲು 3 ಕೋಟಿ ರೂ. ಅಗತ್ಯವಿತ್ತು. ಆದರೆ, ಹಣದ ಕೊರತೆಯಿಂದಾಗಿ ಪಾವತಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ, ನಾಗರಿಕ ಅಧಿಕಾರಿಗಳು, ಯುಪಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಸೇವೆಗಳಿಂದ ಕಟ್ಟಡ ನಕ್ಷೆಗಳು ಮತ್ತು ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರಗಳು) ಅನುಮೋದನೆಗಾಗಿ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ.
”ಐದು ಎಕರೆಯಲ್ಲಿ ಸಮುದಾಯ ದಾಸೋಹ, ಕ್ಯಾನ್ಸರ್ ಆಸ್ಪತ್ರೆ, ಪದವಿ ಕಾಲೇಜು ಸೇರಿ ಭವ್ಯ ಮಸೀದಿ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ, ಐಐಸಿಎಫ್ ರೈತರಿಂದ ಆರು ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ. ಇದಕ್ಕೂ ದೊಡ್ಡ ಮೊತ್ತದ ಅಗತ್ಯವಿದೆ. ಸರ್ಕಾರದ ನೆರವಿನೊಂದಿಗೆ ಮಂದಿರ ಸಮಿತಿಯ ದೇಣಿಗೆ ಸಂಗ್ರಹಿಸಿದ ರೀತಿಯಲ್ಲಿ ಐಐಸಿಎಫ್ ಕೂಡ ಸರ್ಕಾರದ ನೆರವಿನೊಂದಿಗೆ ಜಾಹೀರಾತು ನೀಡಿದರೆ ಜನರು ದೇಣಿಗೆ ನೀಡುತ್ತಾರೆ” ಎಂದು ಪತ್ರಕರ್ತ ಸೊಹ್ರಾಬ್ ಖಾನ್ ಹೇಳುತ್ತಾರೆ.
ಒಂದೆಡೆ ಮಂದಿರ ನಿರ್ಮಾಣಕ್ಕೆ 20 ವರ್ಷಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಸರ್ಕಾರವೂ ನೆರವು ನೀಡುತ್ತಿದೆ. ಇನ್ನೊಂದೆಡೆ, ಐಐಸಿಎಫ್ ರಚನೆಯಾಗಿ ಮೂರು ವರ್ಷಗಳು ಕಳೆದಿವೆ. ಆದರೆ, ಸಮಿತಿ ಬಳಿ ಹಣವಿಲ್ಲ. ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಜನರಿಗೆ ಹೇಗೆ ದಾನ ಮಾಡಬೇಕು ಎಂಬ ಅರಿವೂ ಇಲ್ಲ.
ಮಸೀದಿ ವಿಚಾರವಾಗಿ ಮಾತನಾಡಿರುವ ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್, ”2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಅಯೋಧ್ಯೆ ಜಿಲ್ಲಾಡಳಿತ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ 5 ಎಕರೆಗಳನ್ನು ನೀಡಿತು. ಧನ್ನಿಪುರದಲ್ಲಿ ಭೂಮಿ ನೀಡಿದ್ದರಿಂದಾಗಿ, ಅಲ್ಲಿ ಈಗಾಗಲೇ 14 ಮಸೀದಿಗಳಿರುವ ಕಾರಣ ಯಾವ ರೀತಿಯ ಯೋಜನೆಗಳನ್ನು ರೂಪಿಸಬಹುದು ಎಂದು ಚರ್ಚಿಸಲು ನಾವು ಧನ್ನಿಪುರ ಮತ್ತು ರೌನಾಹಿಗೆ ಹೋಗಿದ್ದೆವು. ಅಲ್ಲಿನ ಜನರು ಮಸೀದಿ ಹೊರತುಪಡಿಸಿ, ಆಸ್ಪತ್ರೆ, ಸಮುದಾಯ ದಾಸೋಹ, ಶಿಕ್ಷಣ ನೀಡುವ ಸಮಾಜ ಸೇವೆಯೂ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಾವು ಕಾಲೇಜು, ಆಸ್ಪತ್ರೆ, ಸಮುದಾಯ ದಾಸೋಹದ ಯೋಜನೆಗಳನ್ನು ಹೊಂದಿದ್ದೇವೆ” ಎಂದರು.
”ಉದ್ದೇಶಿತ ಭೂಮಿ ಅಯೋಧ್ಯೆಯ ಅವಧ್ ಪ್ರದೇಶದಲ್ಲಿದೆ. 1857ರಲ್ಲಿ, ಈ ಪ್ರದೇಶವು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರಮುಖ ಯುದ್ಧಭೂಮಿಯಾಗಿತ್ತು. ಇಲ್ಲಿ ಹಿಂದು ಮತ್ತು ಮುಸ್ಲಿಮರು ಒಟ್ಟಾಗಿ ಬ್ರಿಟೀಷರ ವಿರುದ್ಧ ಯುದ್ಧ ಮಾಡಿದ್ದರು. ಅವಧ್ ಹಿಂದು-ಮುಸ್ಲಿಂ ಏಕತೆಯ ಪರಂಪರೆ ಹೊಂದಿದೆ. ಆದ್ದರಿಂದ, ಈ ಯೋಜನೆಯಿಂದ ನಾವು ಏಕತೆಯ ಸಂದೇಶ ಸಾರಲು ಬಯಸುತ್ತೇವೆ. ಕಳೆದ ಅಕ್ಟೋಬರ್‌ನಲ್ಲಿ ಸಮಿತಿಯ ಮುಖ್ಯಸ್ಥರು ದೇಣಿಗೆ ಸಂಗ್ರಹಕ್ಕೆ ಕೆಲವು ಪ್ರಯತ್ನಗಳನ್ನು ಮಾಡಿದ್ದರು. ಮುಂಬೈಗೆ ಹೋಗಿ, ಕೆಲವು ಉದ್ಯಮಿಗಳನ್ನು ಭೇಟಿ ಮಾಡಿ ದೇಣಿಗೆ ಕೇಳಿದ್ದರು. ಖಚಿತವಾಗಿಯೂ ಯೋಜನೆ ಆರಂಭವಾಗುತ್ತದೆ. ಆದರೆ, ಸಮಯ ಮತ್ತು ದಿನಾಂಕವನ್ನು ಹೇಳಲು ನಮಗೆ ಸಾಧ್ಯವಿಲ್ಲ” ಎಂದು ಅಥರ್ ಹೇಳಿದರು.
ಗಮನಾರ್ಹ ಸಂಗತಿ ಎಂದರೆ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆಗೆ ಅನುಮೋದನೆ ಪಡೆಯಲು 2020ರಲ್ಲಿ ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಾಗರಿಕ ಇಲಾಖೆ ಸೇರಿದಂತೆ ಎಂಟು ಇಲಾಖೆಗಳಿಂದ ಎನ್‌ಒಸಿ ಕೋರಲಾಗಿದೆ. ಇದುವರೆಗೆ ಯಾವುದೇ ಇಲಾಖೆ ಎನ್‌ಒಸಿ ನೀಡಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಜಮೀನು ಪರಿಶೀಲನೆ ನಡೆಸಿದಾಗ ಮಸೀದಿ ನಿರ್ಮಿಸಲು ಉದ್ದೇಶಿಸಿರುವ ಜಾಗಕ್ಕೆ ರಸ್ತೆಯ ಅಗಲ ಕಿರಿದಾಗಿದೆ ಎಂದು ತಿಳಿದುಬಂದಿದೆ. 12 ಮೀಟರ್ ಅಗಲ ಇರಬೇಕಿದ್ದ ಅಪ್ರೋಚ್ ರಸ್ತೆಯ ಅಗಲ ಕೇವಲ 6 ಮೀಟರ್ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳದವರು ಎನ್‌ಒಸಿ ನೀಡಲು ನಿರಾಕರಿಸಿದ್ದಾರೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಉಳ್ಳವರು ರಾಮಮಂದಿರ ಮಾಡುವರಯ್ಯ… ನಾವೇನು ಮಾಡುವುದು? ಬಡವರಯ್ಯ ಎಂದು ಹಲುಬುವಂತಾಗಿದೆ ಇಲ್ಲಿನ ಮುಸ್ಲಿಮರ ಸ್ಥಿತಿ.
ಮೂಲ: ನ್ಯೂಸ್‌ಕ್ಲಿಕ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ