ಪಕ್ಷ ರಾಜಕಾರಣ, ನಾಯಕರ ಸ್ವಾರ್ಥ, ಕಾನೂನಿನ ತೊಡಕುಗಳಿಂದಾಗಿ ಪರಿಶಿಷ್ಟ ಜಾತಿಯ ಜನ, ನ್ಯಾಯವಾಗಿ ದಕ್ಕಬೇಕಾದ ಮೀಸಲಾತಿಗಾಗಿ ಇನ್ನೆಷ್ಟು ದಿನ ಕಾಯುವುದು? ಬಂದ ಸರ್ಕಾರಗಳೆಲ್ಲ ಪರಿಶಿಷ್ಟರ ಮೂಗಿಗೆ ತುಪ್ಪ ಸವರುತ್ತಲೇ ಸಾಗಿದರೆ- ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ? ಬಾಬಾ ಸಾಹೇಬರು ಮತ್ತೆ ಹುಟ್ಟಿ ಬರಬೇಕೇ?
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಜ. 18ರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪರಿಶಿಷ್ಟ ಜಾತಿ-ಪಂಗಡದ 101 ಉಪಜಾತಿಗಳಲ್ಲಿ ಪ್ರಮುಖವಾಗಿ ಹೊಲೆಯ, ಕೊರಮ, ಕೊರಚ, ಲಂಬಾಣಿ, ಭೋವಿ -ಈ ಐದು ಸಮುದಾಯಗಳಷ್ಟೇ ಇಲ್ಲಿಯವರೆಗೆ ಮೀಸಲಾತಿಯ ಲಾಭ ಪಡೆದಿರುವುದು. ಅತಿ ಹೆಚ್ಚು ಸಂಖ್ಯೆಯುಳ್ಳ ಮಾದಿಗ ಮತ್ತು ಉಳಿದ 95 ಸಮುದಾಯಗಳು ಅಂಚಿಗೆ ತಳ್ಳಲ್ಪಟ್ಟಿವೆ, ನಿರ್ಲಕ್ಷ್ಯಕ್ಕೊಳಗಾಗಿವೆ, ನಿರ್ಗತಿಕ ಸ್ಥಿತಿಯಲ್ಲಿವೆ. ಕಳೆದ ಮೂವತ್ತು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿವೆ.
ಈಗ ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ, ಕಳೆದ ಚುನಾವಣೆಯಲ್ಲಿ ಇವರಿಗೆ ಕೊಟ್ಟ ಭರವಸೆ ನೆನಪಾಗಿದೆ. ಪರಿಶಿಷ್ಟ ಜಾತಿ-ಪಂಗಡಗಳ ಸಚಿವರು, ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಇನ್ನು ತಡಮಾಡುವುದು ಸರಿಯಲ್ಲವೆಂದು ಒತ್ತಡ ಹಾಕಿದ್ದಾರೆ. ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ, ಒಳ ಮೀಸಲಾತಿ ವಿಷಯವನ್ನು ಕೇಂದ್ರದ ಹೆಗಲಿಗೆ ಹೊರಿಸುವ ದಾಳ ಉರುಳಿಸಲಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಬಚಾವಾಗಿದೆ.
ಏತನ್ಮಧ್ಯೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ, ಮಾದಿಗ ಸಮುದಾಯ ಸೇರಿದಂತೆ ಇತರ ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಕಾಪಾಡಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳ ಕುರಿತು ಪರಿಶೀಲಿಸುವುದಕ್ಕೆ ಜ. 19ರಂದು ಉನ್ನತ ಮಟ್ಟದ ಸಮಿತಿ ರಚಿಸಿದೆ. ಪ್ರಧಾನಿಯವರ ನಿರ್ದೇಶನದ ಮೇರೆಗೆ ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇದೇ ತಿಂಗಳು 23ರಂದು ಈ ಸಮಿತಿಯ ಮೊದಲ ಸಭೆ ಕೂಡ ಜರುಗಲಿದೆ.
ಅಂದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಂಬರುವ ಲೋಕಸಭಾ ಚುನಾವಣೆ ಮಹತ್ವದ್ದಾಗಿದೆ. ಆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಪರಿಶಿಷ್ಟ ಜಾತಿ-ಪಂಗಡಗಳ ಮತದಾರರು ಮುಖ್ಯವಾಗಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಂದು ಕೋಟಿ ಐದು ಲಕ್ಷದಷ್ಟು ಪರಿಶಿಷ್ಟ ಜಾತಿ-ಪಂಗಡದವರಿದ್ದು, ಆ ಸಮುದಾಯಗಳ ಬಲದಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಗೆಲುವಿನಲ್ಲಿ ಅಲ್ಪಸಂಖ್ಯಾತರ ಪಾಲೂ ಇದೆ.
ಸೋತಿರುವ ಬಿಜೆಪಿ ಈಗ ಬುದ್ಧಿ ಕಲಿತಿದೆ. ಕಾಂಗ್ರೆಸ್ ಗೆಲುವಿನ ಹಿಂದಿರುವ ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ ವಹಿಸುತ್ತಿದೆ. ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ಈಗಾಗಲೇ ದೃಢ ನಿಲುವು ತಳೆದಿದೆ. ಅದರಲ್ಲೂ ಮುಸ್ಲಿಮರಿಗೆ ಟಿಕೆಟ್ ಕೊಡದೆ, ಚುನಾವಣಾ ರಾಜಕಾರಣದಿಂದ ದೂರವಿರಿಸಿದೆ. ಆದರೆ ಅದೇ ನಿಲುವನ್ನು ಪರಿಶಿಷ್ಟ ಸಮುದಾಯಗಳ ಬಗ್ಗೆ ತಳೆಯಲಾಗುವುದಿಲ್ಲ, ಅದಕ್ಕೆ ಅಷ್ಟು ಧೈರ್ಯವೂ ಇಲ್ಲ.
ಆದಕಾರಣ, ಬಿಜೆಪಿ ಒಡೆದು ಆಳುವ ನೀತಿಗೆ ಕೈಹಾಕಿದೆ. ಪರಿಶಿಷ್ಟ ಸಮುದಾಯಗಳ ಒಳಗಿನ ಭಿನ್ನಾಭಿಪ್ರಾಯವನ್ನು ದೊಡ್ಡದು ಮಾಡಿ, ಒಳವರ್ಗೀಕರಣ, ಮೀಸಲಾತಿ ಹೆಚ್ಚಳದಂತಹ ಆಮಿಷಗಳ ಮಾತುಗಳನ್ನಾಡುತ್ತಿದೆ. ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮಾದಿಗರ ಸಬಲೀಕರಣಕ್ಕಾಗಿ ಪರಿಶಿಷ್ಟ ಜಾತಿಗಳ ವರ್ಗೀಕರಣದ ದಾಳ ಉರುಳಿಸಿದ್ದರು. ಅದನ್ನು ಅವರು ಆಗಲೇ ಉನ್ನತ ಮಟ್ಟದ ಸಮಿತಿ ರಚಿಸುವ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ.
ಈಗ ರಾಜ್ಯ ಸರ್ಕಾರ ತಳಸಮುದಾಯಗಳ ಬಗ್ಗೆ ತಳೆಯುವ ನಿಲುವು, ನಿರ್ಧಾರ ಬಹಳ ಮುಖ್ಯವಾಗಿದೆ. ಅಂದರೆ, ಒಳಮೀಸಲಾತಿಗಾಗಿ ಕೇಂದ್ರಕ್ಕೆ ಯಾವ ವರದಿಯನ್ನು ಶಿಫಾರಸು ಮಾಡಲಿದೆ ಎಂಬುದು ಇಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆ.
2005ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರ ನ್ಯಾ. ಎ.ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿತ್ತು. ನ್ಯಾ. ಸದಾಶಿವ ಅವರ ಆಯೋಗ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2012 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಆದರೆ, ಈ ವರದಿ ಅವೈಜ್ಞಾನಿಕವಾಗಿದೆ, ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿದರೆ ಕೆಲವೇ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂಬ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ನ್ಯಾ. ನಾಗಮೋಹನದಾಸ್, ನ್ಯಾ. ಸುಭಾಷ್ ಅಡಿ ಮತ್ತು ನ್ಯಾ. ಭಕ್ತವತ್ಸಲಂ ಅವರ ಏಕವ್ಯಕ್ತಿ ಆಯೋಗಗಳನ್ನು ಕಾಲಕಾಲಕ್ಕೆ ರಚಿಸಿ, ಪರಿಷ್ಕೃತ ವರದಿಯನ್ನು ಪಡೆದಿವೆ. ಇದಲ್ಲದೆ, ಕಳೆದ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿಯನ್ನು ಅಪ್ರಸ್ತುತ ಎಂದು ಹೇಳಿ, ಸಚಿವ ಜೆ.ಸಿ. ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಿ, ಮತ್ತೊಂದು ಪರಿಷ್ಕೃತ ವರದಿಯನ್ನು ತಯಾರಿಸಿದೆ.
ಈಗ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದ ಮುಂದಿರುವ ಸವಾಲು ಎಂದರೆ, ಮೂವರು ನ್ಯಾಯಮೂರ್ತಿಗಳ ಏಕವ್ಯಕ್ತಿ ಆಯೋಗದ ವರದಿ ಹಾಗೂ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿಯ ವರದಿ- ಈ ನಾಲ್ಕು ಪರಿಷ್ಕೃತ ವರದಿಗಳಲ್ಲಿ ಯಾವುದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುತ್ತದೆ? ಮತ್ತು ಅಷ್ಟೇ ಮುಖ್ಯವಾದ ಪ್ರಶ್ನೆ- ಈ ವರದಿಯನ್ನು ಕೇಂದ್ರ ಸರ್ಕಾರ ರಚಿಸಿರುವ ನ್ಯಾ. ಉಷಾ ಮೆಹ್ರಾ ಅಧ್ಯಕ್ಷತೆಯ ರಾಷ್ಟ್ರೀಯ ಆಯೋಗ ಮಾನ್ಯ ಮಾಡುತ್ತದಾ ಎಂಬುದು.
ಇದಕ್ಕಿಂತಲೂ ಮುಖ್ಯವಾದ ವಿಚಾರ, ಸಂವಿಧಾನದ 341ನೇ ವಿಧಿಗೆ ಮೂರನೇ ಖಂಡವನ್ನು ಸೇರಿಸುವ ಮೂಲಕ ಪರಿಶಿಷ್ಟರಲ್ಲಿ ಒಳ ಮೀಸಲು ಅನುಷ್ಠಾನಕ್ಕೆ ತಂದರೆ, ಅದರ ಲಾಭ ಮೋದಿಗೋ ಅಥವಾ ಸಿದ್ದರಾಮಯ್ಯಗೋ ಎಂಬುದು.
ಈ ಹಿಂದೆ, ಪರಿಶಿಷ್ಟರ ಮೀಸಲಾತಿಗೆ ಸಂಬಂಧಿಸಿದಂತೆ ಉಷಾ ಮೆಹ್ರಾ ಆಯೋಗ 2008ರಲ್ಲಿ ಯುಪಿಎ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಅದನ್ನು ಮನಮೋಹನ್ ಸಿಂಗ್‌ರ ಸರ್ಕಾರ ಅನುಷ್ಠಾನಕ್ಕೆ ತರಲಿಲ್ಲ. ಯುಪಿಎ ಸರ್ಕಾರದ ಕ್ರಮ ಖಂಡಿಸಿ, ಪ್ರಚಾರ ಪಡೆದು ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ- ಮೋದಿ ಸರ್ಕಾರ- ಹತ್ತು ವರ್ಷವಾದರೂ, ಜಾರಿಗೆ ತರಲಿಲ್ಲ. ಈಗ ಚುನಾವಣೆ ಎದುರಾಗಿದೆ, ಮೂರನೇ ಬಾರಿಗೆ ಮೋದಿ ಪ್ರಧಾನಿ ಕುರ್ಚಿಯಲ್ಲಿ ಕೂರಬೇಕಾಗಿದೆ- ಹಾಗಾಗಿ ಪರಿಶಿಷ್ಟರ ಒಳಮೀಸಲಾತಿ ಮುನ್ನೆಲೆಗೆ ಬಂದಿದೆ.
ಪಕ್ಷ ರಾಜಕಾರಣ, ನಾಯಕರ ಸ್ವಾರ್ಥ, ಕಾನೂನಿನ ತೊಡಕುಗಳಿಂದಾಗಿ ತಳ ಸಮುದಾಯಗಳ ಜನ, ನ್ಯಾಯವಾಗಿ ದಕ್ಕಬೇಕಾದ ಮೀಸಲಾತಿಗಾಗಿ ಇನ್ನೆಷ್ಟು ದಿನ ಕಾಯುವುದು? ಬಂದ ಸರ್ಕಾರಗಳೆಲ್ಲ ಪರಿಶಿಷ್ಟರ ಮೂಗಿಗೆ ತುಪ್ಪ ಸವರುತ್ತಲೇ ಸಾಗಿದರೆ- ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ? ಬಾಬಾ ಸಾಹೇಬರು ಮತ್ತೆ ಹುಟ್ಟಿ ಬರಬೇಕೇ?
