ಖಾಸಗಿ ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸುವ ಬದಲು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿರುವ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸಮಿತಿ, “ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು 2024ರ ಜನವರಿ 16ರಂದು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿ, ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದು, ಯಾವುದೇ ಅಧಿಕೃತ ನೀತಿ ಅಥವಾ ನಿಯಂತ್ರಣದ ಅನುಪಸ್ಥಿತಿಯಲ್ಲಿ, ದೇಶದಲ್ಲಿ ಅನಿಯಂತ್ರಿತ ಖಾಸಗಿ ಮಾಲೀಕತ್ವದ ಕೋಚಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.
“ಮಾಧ್ಯಮಗಳಲ್ಲಿ ವರದಿಯಾದಂತೆ ಇಂತಹ ಕೇಂದ್ರಗಳು ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ, ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಮೂಲಕ ವಿದ್ಯಾರ್ಥಿಗಳ ಆತ್ಮಹತ್ಯೆ, ಬೆಂಕಿ ಅವಘಡಗಳಿಂದ ಜೀವಹಾನಿ ಹಾಗೂ ಹಲವಾರು ಅವ್ಯವಹಾರಗಳ ತಾಣವಾಗಿರುವುದನ್ನು ಅಧಿಕೃತವಾಗಿ ಶಿಕ್ಷಣ ಮಂತ್ರಾಲಯವೇ ಪತ್ರದಲ್ಲಿ ದಾಖಲಿಸಿದೆ. ಇದೊಂದು ಗಂಭೀರ ವಿಚಾರ” ಎಂದು ನಿರಂಜನಾರಾಧ್ಯ ವಿ ಪಿ ತಿಳಿಸಿದ್ದಾರೆ.
“ಈ ಎಲ್ಲ ಅನಾಹುತಗಳಿಗೆ ಕಾರಣವಾಗಿರುವ ಕಾನೂನು ಬಾಹಿರ ಕೋಚಿಂಗ್ ಕೇಂದ್ರಗಳ ಸಮಸ್ಯೆಯನ್ನು, ಶಿಕ್ಷಣದ ಮೂಲ ಉದ್ದೇಶ, ವ್ಯಾಪ್ತಿ ಮತ್ತು ವಿಸ್ತೃತ ಜ್ಞಾನದ ನೆಲೆಯಲ್ಲಿ ನೋಡುವ ಬದಲು, ಸಂಕುಚಿತ ಹಾಗೂ ವ್ಯವಹಾರಿಕ ಖಾಸಗಿ ಕೋಚಿಂಗ್ ನೆಲೆಗೆ ಸೀಮಿತಗೊಳಿಸಿ, ಕಾನೂನು ಬಾಹಿರ ವ್ಯಾಪಾರದ ಕೇಂದ್ರಗಳನ್ನು’ಕೋಚಿಂಗ್ ಸೆಂಟರ್‌ನ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳʼ ಮೂಲಕ ಅಧಿಕೃತವಾಗಿ ಕಾನೂನು ಬದ್ಧಗೊಳಿಸುವ ಕ್ರಮ ಸರಿಯಲ್ಲ” ಎಂದು ಪಾಫ್ರೆ ತೀವ್ರವಾಗಿ ವಿರೋಧಿಸಿದೆ.
“ದೀರ್ಘಾವಧಿಯಲ್ಲಿ ಸುಸಜ್ಜಿತ ಶಾಲಾ-ಕಾಲೇಜುಗಳಲ್ಲಿ ಮಾನವ ವಿಕಸನಕ್ಕೆ ಪೂರಕವಾದ ಗುಣಾತ್ಮಕ ಶಿಕ್ಷಣ ಒದಗಿಸುವ ಬದಲು, ಖಾಸಗಿ ಮಾಲೀಕತ್ವದ ನೆಲೆಯ ಕೋಚಿಂಗ್ ವ್ಯಾಪಾರ ಕೇಂದ್ರಗಳ ಮೂಲಕ ಶಿಕ್ಷಣವನ್ನು ಒಂದು ವ್ಯಾಪಾರದ ಸರಕನ್ನಾಗಿಸುವ ಮತ್ತು ಸಂಕುಚಿತ ತರಬೇತಿ-ಕಂಟಪಾಠವನ್ನೇ ಶಿಕ್ಷಣ ಎಂದು ಬಿಂಬಿಸಿ ಪರಿಗಣಿಸುವುದು ಅಪಾಯಕಾರಿ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟಿದೆ.
“ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಹೆಸರಿನಲ್ಲಿ ಸಮರ್ಥಿಸಿಕೊಂಡಿರುವುದು ಶಿಕ್ಷಣದ ಪರಿಕಲ್ಪನೆ ಹಾಗೂ ವ್ಯಾಖ್ಯಾನವನ್ನು ಅನರ್ಥಗೊಳಿಸುವ ಪ್ರಯತ್ನ. ಕಲಿಕೆಯ ಭಾಗವಾಗಿ, ಯಾವುದೇ ಶೈಕ್ಷಣಿಕ ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಅಗತ್ಯ ಶೈಕ್ಷಣಿಕ ಬೆಂಬಲಕ್ಕೆ ಸಾಂಸ್ಥಿಕ ನೆಲೆಯಲ್ಲಿ ಹಾಲಿ ಇರುವ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ಅಗತ್ಯ ʼಬೆಂಬಲ ವ್ಯವಸ್ಥೆಯನ್ನುʼ ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುವ ಬದಲು, ಹೆಚ್ಚುವರಿ ಸಾಂಸ್ಥಿಕ ವ್ಯವಸ್ಥೆಗಳಂತಿರುವ ಕೋಚಿಂಗ್ ಸೆಂಟರ್‌ಗಳನ್ನು ಅಧಿಕೃತಗೊಳಿಸುವ ಮೂಲಕ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಮಾಲೀಕತ್ವದ ನೆಲೆಯ ವ್ಯಾಪಾರದ ಕೇಂದ್ರಗಳನ್ನಾಗಿಸುವ ಈ ಕ್ರಮ ವಿದ್ಯಾರ್ಥಿ ಹಾಗೂ ಪಾಲಕ ವಿರೋಧಿ” ಎಂದು ಪಾಫ್ರೆ ತಿಳಿಸಿದೆ.
“ಪ್ರಕರಣ 6ರ ಅಡಿಯಲ್ಲಿ ಪದವಿಯಾದವರು ಈ ಪ್ಲಸ್ ಟು ಹಂತದ ಕೋಚಿಂಗ್ ಕೇಂದ್ರಗಳಲ್ಲಿ ಬೋಧಕರಾಗಬಹುದೆಂದು ಹೇಳಿದೆ. ವಿಪರ್ಯಾಸವೆಂದರೆ, ಕೇಂದ್ರ ಸರ್ಕಾರ ನಡೆಸುವ ಕೇಂದ್ರೀಯ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವವರು ಕ್ರಮವಾಗಿ ಸಾಮಾನ್ಯ ಪದವಿ ಜೊತೆಗೆ ಬಿಎಡ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ಪದವಿ ಇರಬೇಕೆಂದು ನಿಗದಿಗೊಳಿಸಿದೆ. ಪ್ಲಸ್ ಟು ಹಂತದ ಕೋಚಿಂಗ್ ಕೇಂದ್ರಗಳಲ್ಲಿ ಪದವಿ ಮಾಡಿದವರು ಬೋಧಕರಾಗಬಹುದೆಂದು ಹೇಳುವುದು ಯಾವ ಬಗೆಯ ಗುಣಮಟ್ಟವನ್ನು ನೀಡುತ್ತದೆ ಎಂಬುದನ್ನು ಅರಿಯಬೇಕಿದೆ” ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ | ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ; ಇಂದಿನಿಂದ ಸಾರ್ವಜನಿಕರಿಗೆ ಪ್ರವೇಶ
ಶಾಲಾ-ಕಾಲೇಜುಗಳಿಗೆ ಸಮಾನಾಂತರವಾಗಿ ನಡೆಯುವ ಈ ಕೋಚಿಂಗ್ ಕೇಂದ್ರಗಳು ಶಾಲಾ-ಕಾಲೇಜುಗಳ ಉದ್ದೇಶವನ್ನೇ ಗೌಣಗೊಳಿಸಿ, ಶಿಕ್ಷಣದ ಕಲ್ಪನೆಯನ್ನು ಮಾಹಿತಿ ಒದಗಿಸುವ ಶುಲ್ಕ ಆಧಾರಿತ ವ್ಯಾಪಾರದ ಕೇಂದ್ರಗಳ ಮಟ್ಟಕ್ಕೆ ಇಳಿಸುತ್ತಿರುವುದು ಶಿಕ್ಷಣದ ಸಾಮಾಜಿಕ ಒಳಿತು ಹಾಗು ಸಾಮಾಜಿಕ ಪರಿವರ್ತನೆಯ ಸಾಧನದಂತೆ ಕಾರ್ಯನಿರ್ವಹಿಸಬೇಕೇಂಬ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಲಿದೆ. ಈ ಮೂಲಕ , ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ಬಹುಜನ ಸಮಾಜದ ಮಕ್ಕಳು ಖಾಯಂ ಶಿಕ್ಷಕರಿಲ್ಲದೆ, ಕಲಿಕೆಯಿಲ್ಲದೆ ಕೊನೆಗೆ ಮಾಹಿತಯೂ ಇಲ್ಲದೆ ಶಿಕ್ಷಣವನ್ನು ತೊರೆಯುವಂತೆ ಮಾಡಿ , ಶಾಲಾ-ಕಾಲೇಜುಗಳಿಗೆ ಸಮಾನಾಂತರ ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುವ ಸಾಮರ್ಥ್ಯವುಳ್ಳ ಉಳ್ಳವರು ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರ್ಯಾಯ ವ್ಯವಸ್ಥೆ ಸೃಷ್ಟಿಸುವ ಕುತಂತ್ರವಾಗಿದೆ ಎಂದು ಪಾಫ್ರೆ ದೂರಿದೆ.
ಈ ಹಿನ್ನೆಲೆಯಲ್ಲಿ, ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 28 ಅಡಿಯಲ್ಲಿ ಯಾವುದೇ ಶಿಕ್ಷಕರು ಖಾಸಗಿ ಬೋಧನೆ ಅಥವಾ ಮನೆ ಪಾಠದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ನಿಷೇಧ ಹೇರಿರುವ ಮಾದರಿಯಲ್ಲಿಯೇ , ಮೂಲ ಶಿಕ್ಷಣದ ಕಲ್ಪನೆಗೆ ಅಪವಾದವಾಗಿರುವ ಎಲ್ಲ ಬಗೆಯ ಕೋಚಿಂಗ್ ಕೇಂದ್ರಗಳನ್ನು ನಿಷೇಧಿಸಿ, ಶಾಲಾ-ಕಾಲೇಜುಗಳಲ್ಲಿಯೇ ಎಲ್ಲ ಬಗೆಯ ಬೆಂಬಲಿತ ವ್ಯವಸ್ಥೆಗಳನ್ನು ರೂಪಿಸಬೇಕು. ಆ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯವು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.