“ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ. ಈ ಬಗ್ಗೆ ದಕ್ಷತೆಗೆ ತಕ್ಕ ಪ್ರೋತ್ಸಾಹ ಹಾಗೂ ವಿತ್ತೀಯ ಕಾರ್ಯಕ್ಷಮತೆಗೆ ನೀಡುವ ಬೆಲೆಯನ್ನು ಹೆಚ್ಚಿಸುವಂತೆ 16ನೇ ಹಣಕಾಸು ಆಯೋಗವನ್ನು ನಾವು ಒತ್ತಾಯಿಸುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ಆರ್ಥಿಕ ಸಂಯುಕ್ತ ತತ್ವ : 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು” ಎಂಬ ವಿಷಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“16ನೇ ಹಣಕಾಸು ಆಯೋಗ ರಚನೆಯಾಗಿರುವ ಸಂದರ್ಭದಲ್ಲಿ ಈ ವಿಚಾರ ಸಂಕಿರಣ ಅತ್ಯಂತ ಸಮಯೋಚಿತವಾಗಿದೆ. ಸಂಯುಕ್ತ ಆರ್ಥಿಕ ವರ್ಗಾವಣೆಯಲ್ಲಿನ ವೈಪರೀತ್ಯಗಳನ್ನು ಪರಿಶೀಲಿಸಲು ಕರ್ನಾಟಕ ಗಟ್ಟಿಯಾಗಿ ಪ್ರಾತಿನಿಧ್ಯವನ್ನು ವಹಿಸಬೇಕಿದೆ. ದಕ್ಷತೆಯ ಜೊತೆಗೆ ನೀತಿಗೆ ಸಂಬಂಧಿಸಿದಂತೆ ವರ್ಗಾವಣೆಯ ಅರ್ಹತೆಗಳ ಬಗ್ಗೆ ಸಾಕಷ್ಟು ಒಟ್ಟು ನೀಡಲು ಇದು ಸುಸಂದರ್ಭ” ಎಂದು ತಿಳಿಸಿದರು.
ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆರ್ಥಿಕ ಸಂಯುಕ್ತ ತತ್ವ: 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ @siddaramaiah ಅವರ ಭಾಷಣ:
( ಭಾಗ 2 )
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ… pic.twitter.com/OTUPHmJdN5
— CM of Karnataka (@CMofKarnataka) January 20, 2024
” ಹಿಂದಿನ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರೀ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ಇದನ್ನು 16 ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಿದೆ. 14 ನೇ ಹಣಕಾಸು ಆಯೋಗದಡಿ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯು ಶೇ 4.713ರಿಂದ ಶೇ. 3.647 ಕ್ಕೆ 15 ನೇ ಹಣಕಾಸು ಆಯೋಗದಿಂದಾಗಿ ಇಳಿದಿದೆ” ಎಂದು ತಮ್ಮ ಭಾಷಣದಲ್ಲಿ ಸಿಎಂ ವಿವರಿಸಿದರು.
“ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅತ್ಯಂತ ದೊಡ್ಡ ಮೊತ್ತ ಅಂದರೆ ಶೇ 1.066 ರಷ್ಟು ಇಳಿಕೆಯಾಗಿದೆ. ಈಗಿನ ವ್ಯವಸ್ಥೆ ಆದಾಯದ ದೂರ ವ್ಯಾಪ್ತಿಯನ್ನು ಪರಿಗಣಿಸುತ್ತಿದ್ದು, ಈ ಪ್ರಕಾರ ಕರ್ನಾಟಕವು ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯ. ಆದರೆ, ಕಡಿಮೆ ದೂರವ್ಯಾಪ್ತಿ ಇರುವ ಕಾರಣ ಸೋಲುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ. ಈ ಬಗ್ಗೆ 16ನೇ ಹಣಕಾಸು ಆಯೋಗದ ಗಮನ ಸೆಳೆಯಲಿದ್ದೇವೆ” ಎಂದು ಮುಖ್ಯಮಂತ್ರಿ ತಿಳಿಸಿದರು.
“ಅತ್ಯುತ್ತಮ ವಿತ್ತೀಯ ಕಾರ್ಯಕ್ಷಮತೆ ಹೊಂದಿರುವ ರಾಜ್ಯ ಎಂದು ದಾಖಲೆ ಹೊಂದಿರುವ ರಾಜ್ಯಕ್ಕೆ ಅದರ ದಕ್ಷತೆಗಾಗಿ ಯಾವುದೇ ಪ್ರೋತ್ಸಾಹಕಗಳು ದೊರೆಯುತ್ತಿಲ್ಲ. ಕರ್ನಾಟಕದ ಭಾರೀ ವಿತ್ತೀಯ ಕಾರ್ಯಕ್ಷಮತೆ ಗಮನಾರ್ಹವಾಗಿದ್ದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಘೋಷಿಸಿದ ಮೊದಲ ರಾಜ್ಯವೆಂದು ಹೆಗ್ಗಳಿಕೆ ಪಡೆದಿದೆ. ಕೋವಿಡ್ ನಂತರದಲ್ಲಿ ರಾಜಸ್ವ ಕೊರತೆಗಳು ಮರುಕಳಿಸಿದ್ದನ್ನು ಹೊರತುಪಡಿಸಿದರೆ, ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಸದಾ ನಿಗದಿತ ವ್ಯಾಪ್ತಿಯಲ್ಲಿಯೇ ಇವೆ” ಎಂದು ಸಿಎಂ ತಿಳಿಸಿದರು.
ಕರ್ನಾಟಕ ತನ್ನ ಸ್ವಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರದರ್ಶನವನ್ನು ಸಾಧಿಸಿದ್ದರೂ, ರಾಜ್ಯದ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಹಾಗೂ 2032ರ ವೇಳೆಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್‌ನ ಜಿಎಸ್‌ಡಿಪಿ ಸಾಧಿಸಲು ನಮ್ಮಲ್ಲಿರುವ ಸಂಪನ್ಮೂಲಗಳು ಸಾಕಾಗುತ್ತಿಲ್ಲ. ಹೆಚ್ಚುತ್ತಿರುವ ವಲಸೆಯ ಸಮಸ್ಯೆ ನಗರ ಕೇಂದ್ರಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸಾನಿಯಾ ಮಿರ್ಝಾರೊಂದಿಗಿನ ದಾಂಪತ್ಯ ಜೀವನ ಅಂತ್ಯ: ಪಾಕ್ ನಟಿಯ ಕೈ ಹಿಡಿದ ಶೋಯೆಬ್ ಮಲಿಕ್
ಒಂದು ರಾಜ್ಯದ ಅಭಿವೃದ್ಧಿಯ ಕೇಂದ್ರಗಳು ನಗರಗಳಾಗಿದೆ. ಅದರಲ್ಲಿಯೂ ಬೆಂಗಳೂರಿನಂತಹ ನಗರಕ್ಕೆ ಮೂಲಸೌಕರ್ಯದ ವೃದ್ಧಿ ಅತ್ಯವಶ್ಯಕವಾಗಿದೆ. ರಾಜ್ಯದ ಆದಾಯದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಸುಸ್ಥಿರ ಬೆಳವಣಿಗೆಗೆ ಸೂಕ್ತ ಸಹಕಾರವನ್ನು ನೀಡುವುದು ರಾಜ್ಯದ ಆದ್ಯತೆಯಾಗಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.