- ಕಾಂಗ್ರೆಸ್ ಎಂಎಲ್‌ಸಿ ಜೊತೆ ಸವದಿ ಬೆಂಗಳೂರಿಗೆ
- ಕಾಂಗ್ರೆಸ್ ನಾಯಕರ ಭೇಟಿಗೆ ಆಲೋಚಿಸುವೆ ಎಂದ ಸವದಿ
ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತಿದ್ದಂತೆಯೇ ಬಿಜೆಪಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಸ್ವಪಕ್ಷದ ನಾಯಕರೇ ರಾಜ್ಯ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದಾರೆ. ಈ ನಡುವೆ ಲಕ್ಷ್ಮಣ ಸವದಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಿದರು.
ಬಿಜೆಪಿ 212 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಹೆಸರು ಹೊರಬಿದ್ದಿದ್ದೇ ತಡ ಬಿಜೆಪಿಗೆ ಬಂಡಾಯದ ಬಿಸಿ ತಗುಲಿದೆ. ಅನೇಕ ನಾಯಕರು ಬಿಜೆಪಿ ತೊರೆದು ಬೇರೆ ಪಕ್ಷಗಳ ಕಡೆಗೆ ಮುಖ ಮಾಡಿದರೆ, ಇನ್ನು ಕೆಲವರು ರಾಜ್ಯ ಸರ್ಕಾರದ ಲೋಪದೋಷಗಳನ್ನು ಉಲ್ಲೇಖಿಸಿ ಹರಿಹಾಯುತ್ತಿದ್ದಾರೆ.
ಮಾಜಿ ಶಾಸಕ ಲಕ್ಷ್ಮಣ ಸವದಿ ಅವರಿಗೂ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆ ಪಕ್ಷ ಹಾಗೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈ ಸಂಬಂಧ ಇಂದು (ಏ.14) ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಜತೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿರುವ ಲಕ್ಷ್ಮಣ ಸವದಿ ಅವರು ಇಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮಣ ಸವದಿ ಅವರು, “ಇಂದು ಸಂಜೆ 4ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಭೇಟಿಯಾಗಿ, ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ. ತದನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಪಕ್ಷ ಬಿಡಲು ನಿನ್ನೆಯೇ ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತ ಪರಿವರ್ತನೆ ಮಾಡುವ ನಾಯಕರು ನಾಳೆ ಜೆಡಿಎಸ್ ಸೇರಲಿದ್ದಾರೆ : ಎಚ್ ಡಿ ಕುಮಾರಸ್ವಾಮಿ
“ಬಿಜೆಪಿಯ ಯಾವೊಬ್ಬ ನಾಯಕನನ್ನೂ ಭೇಟಿಯಾಗಲ್ಲ. ಸದ್ಯ ನಾನಿನ್ನು ಬಿಜೆಪಿ ಪಕ್ಷದಲ್ಲಿಯೇ ಇದ್ಧೇನೆ. ಹಾಗಾಗಿ ಬೇರೆ ಮಾತನಾಡುವುದಿಲ್ಲ. ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ನಂತರ ಬೇರೆ ವಿಚಾರದ ಚರ್ಚೆ” ಎಂದಿದ್ದಾರೆ.
ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಅವರ ಜೊತೆಗೆ ಬೆಂಗಳೂರಿಗೆ ಆಗಮಿಸಿರುವ ಲಕ್ಷ್ಮಣ ಸವದಿ ಅವರು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆಗೆ ಸಭೆ ನಡೆಸಿದರು.
“ಕಾಂಗ್ರೆಸ್ ನಾಯಕರ ಜೊತೆ ಕೆಲವು ವಿಚಾರ ಹಂಚಿಕೊಳ್ಳುವೆ. ಅವರು ಅದಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ತೀರ್ಮಾನ ಮಾಡುತ್ತೇನೆ” ಎಂದಿದ್ದರು. ಇದೀಗ ಕಾಂಗ್ರೆಸ್ ನಾಯಕರ ಜೊತೆಗೆ ಅವರು ಸಭೆ ನಡೆಸಿದ್ದು, ಕಾಂಗ್ರೆಸ್ ಸೇರ್ಪಡೆ ಆಗುವುದು ಬಹುತೇಕ ಖಚಿತವಾಗಿದೆ.