“ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಜನವರಿ 22ರಂದು ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ಸೇರಿದಂತೆ ನಾನಾ ಹಿಂದು ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಅಂದು ರಜೆ ಘೋಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಾಗುತ್ತಿದ್ದು ಮುಜರಾಯಿ ಇಲಾಖೆ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ, ಸರ್ಕಾರಿ ರಜೆ ಇಲ್ಲ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನವನ್ನು ನಾಳೆ ಉದ್ಘಾಟಿಸಲಾಗುವುದು” ಎಂದು ತಿಳಿಸಿದರು.
“ಹಿಂದಿನ ಸರ್ಕಾರ ಜನವರಿ 21 ನ್ನು ದಾಸೋಹ ದಿನ ಎಂದು ಆಚರಿಸಲು ಘೋಷಣೆ ಮಾಡಿದ್ದರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಯಾವಾಗ ಮಾಡಿದರು, ಯಾವ ಸಂದರ್ಭದಲ್ಲಿ ಹಾಗೂ ಯಾಕಾಗಿ ಮಾಡಿದರು ಎಂದು ನನಗೆ ತಿಳಿದಿಲ್ಲ , ವಿಚಾರ ಮಾಡಲಾಗುವುದು” ಎಂದರು.
ಕೊಬ್ಬರಿ ಬೆಳೆಗಾರರಿಗೆ ಕ್ವಿಂಟಾಲಿಗೆ ₹1500
“ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ ₹12000 ಗಳೊಂದಿಗೆ ₹1500 ಹೆಚ್ಚುವರಿಯಾಗಿ ನೀಡಲಾಗುತ್ತಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
“ಒಟ್ಟು ನಮ್ಮ ಸರ್ಕಾರದಿಂದ ಕ್ವಿಂಟಾಲಿಗೆ ₹1500 ಒದಗಿಸಲಾಗುವುದು. ₹3000 ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ ₹1500 ಹೆಚ್ಚಾಗಿ ನೀಡಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿಗೆ ಬಿಕ್ಕಟ್ಟು: ಪ್ಲಾನ್ ಬಿ ಇಲ್ಲ ಎಂದ ಪರಿಸರ ಇಲಾಖೆ
ಕುಣಿಗಲ್ ಸ್ಟಡ್ ಫಾರಂ ಸ್ಥಳಾಂತರ ಕ್ಕೆ ಸಲಹೆ
ಟಿಪ್ಪು ಸುಲ್ತಾನರ ಕಾಲದ ಕುಣಿಗಲ್ ಸ್ಟಡ್ ಫಾರಂನ್ನು ಸರ್ಕಾರ ಮುಚ್ಚುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, “ಬೆಂಗಳೂರಿನ ಹೃದಯ ಭಾಗದಲ್ಲಿ ರೇಸ್ ಕೋರ್ಸ್ ಇದ್ದು, ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಸಲಹೆ ನೀಡಿದ್ದೇನೆ. ಕುಣಿಗಲ್ ನಲ್ಲಿ 400 ಏಕರೆಯಷ್ಟು ಜಮೀನು ಇದ್ದು, ಇಲ್ಲಿ 80 ಏಕರೆಯಷ್ಟಿದೆ. ಅಲ್ಲಿ ಸ್ಥಳ ನೀಡುವುದಾಗಿ ಹೇಳಿದ್ದೇನೆ” ಎಂದು ತಿಳಿಸಿದರು.