ಬಸವಾದಿ ಕಾಲಘಟ್ಟದ ಶರಣ ಅಂಬಿಗರ ಚೌಡಯ್ಯನವರು ಸಮಾಜದಲ್ಲಿನ ಅನಾಚಾರ, ಅತ್ಯಾಚಾರ, ಡಂಭಾಚಾರವನ್ನು ನಿರ್ಭಯವಾಗಿ ಟೀಕಿಸಿ ವಚನ ಪರಂಪರೆಯ ಕೆಚ್ಚೆದೆ ಮೆರೆದವರು ಎಂದು ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಅಮರವಾಡಿ ಅಭಿಪ್ರಾಯಪಟ್ಟರು.
ಔರಾದ ತಾಲೂಕು ಆಡಳಿತ ವತಿಯಿಂದ ಭಾನುವಾರ ತಹಸೀಲ್ ಸಭಾಂಗಣದಲ್ಲಿ ನಡೆದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, “ನೇರ ನಡೆ ನುಡಿಯ, ನ್ಯಾಯ ನಿಷ್ಠುರ ಶರಣರಾಗಿ ಶಿವಾನುಭವ ಪರವಾದ ವಚನಗಳು ಬರೆದಿದ್ದರೂ ಸಹ ಸಮಕಾಲೀನ ಸಾಮಾಜಿಕ ವಿಡಂಬನೆ ಮತ್ತು ಕಳವಳ ಅವರ ವಚನಗಳಲ್ಲಿ ಕಾಣುತ್ತದೆ” ಎಂದರು.
“ಪ್ರಸ್ತುತ ಕಾಲದಲ್ಲಿಯೂ ತಾಂಡವಾಡುತ್ತಿರುವ ಮೌಢ್ಯತೆ, ಜಾತಿಯತೆ ವಿರುದ್ಧವಾಗಿ ಹೋರಾಡಲು ಅವರ ವಚನಗಳು ನಮಗೆ ಬಹುಮುಖ್ಯ ಪ್ರೇರಕ ಶಕ್ತಿಯಾಗಿ ನಿಲ್ಲುತ್ತವೆ. ಅವರ ವಚನಗಳಲ್ಲಿ ಆಳವಾದ ಅನುಭವ ಮತ್ತು ಸಾಮಾಜಿಕ ಪ್ರಜ್ಞೆ ಅಡಗಿದ್ದು, ವೈಚಾರಿಕ ಬದುಕಿಗೆ ದಾರಿದೀಪವಾಗಿವೆ” ಎಂದು ನುಡಿದರು.
ಯುವ ಚಿಂತಕ, ಶಿಕ್ಷಕ ಅನೀಲಕುಮಾರ ಮಚ್ಕೂರಿ ಮಾತನಾಡಿ, “ಶರಣ ಅಂಬಿಗರ ಚೌಡಯ್ಯ ಅವರ ವಚನ ಸಂದೇಶಗಳು ನಾವು ಅಳವಡಿಸಿಕೊಳ್ಳಬೇಕು” ಎಂದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿ, “ಅಂಬಿಗರ ಚೌಡಯ್ಯ ಒಬ್ಬ ದಿಟ್ಟ ಹಾಗೂ ಧೀರ ವಚನಕಾರರಾಗಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಿಸಿದ ಹಿಮಾಚಲ ಪ್ರದೇಶ ಸರ್ಕಾರ
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಮಣ್ಣ ವಡೆಯರ್, ಪಪಂ ಸದಸ್ಯ ದಯಾನಂದ ಘುಳೆ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ತಾಪಂ ಸಹಾಯಕ ನಿರ್ದೇಶಕ ಸುದೇಶ, ಖಜಾನಾಧಿಕಾರಿ ಮಾಣಿಕ ನೇಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ವ್ಯವಸ್ಥಾಪಕ ಗುರುಸಿದ್ದಪ್ಪ, ಲಿಂಗಾಯತ ಸಮಾಜ ಯುವ ಸಂಘದ ಅಧ್ಯಕ್ಷ ವಿರೇಶ ಅಲಮಾಜೆ ಸೇರಿದಂತೆ ಇನ್ನಿತರರಿದ್ದರು.