ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ರಾಮಜನ್ಮ ಭೂಮಿ ಆಂದೋಲನದ ಪ್ರಮುಖ ರೂವಾರಿಗಳಾಗಿದ್ದ ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಪಾಲ್ಗೊಳ್ಳುತ್ತಿಲ್ಲ ಎಂದು ವರದಿಯಾಗಿದೆ.
ಚಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಅವರು ತಮ್ಮ ಅಯೋಧ್ಯೆ ಭೇಟಿಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ. ಅಡ್ವಾಣಿ ಅವರಿಗೆ ಈಗ 96 ವರ್ಷ ವಯಸ್ಸಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಹಿರಿಯ ನಾಯಕರ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಮಹಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಈ ಹಿಂದೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಬಹಿರಂಗವಾಗಿಯೇ ವಿನಂತಿಸಿದ್ದರು. ಇದು ವ್ಯಾಪಕ ವಿವಾದಕ್ಕೂ ಕಾರಣವಾಗಿತ್ತು.
ಅಡ್ವಾಣಿಯವರೊಂದಿಗೆ ರಾಮಮಂದಿರ ಚಳವಳಿಯ ನೇತೃತ್ವ ವಹಿಸಿದ್ದ ಮುರಳಿ ಮನೋಹರ್ ಜೋಷಿ ಅವರನ್ನೂ ಸಮಾರಂಭದಿಂದ ಹೊರಗುಳಿಯುವಂತೆ ಕೇಳಲಾಗಿತ್ತು. ಅಡ್ವಾಣಿ ಮತ್ತು ಜೋಷಿ ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಸಮಾರಂಭಕ್ಕೆ ಹಾಜರಾಗದಂತೆ ವಿನಂತಿಸಲಾಗಿದೆ. ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಚಂಪತ್ ರಾಯ್ ತಿಳಿಸಿದ್ದರು. ಇದು ವಿವಾದವಾದ ಬಳಿಕ ವಿಶ್ವ ಹಿಂದೂ ಪರಿಷತ್ನ ಕೆಲ ಮುಖಂಡರು ಇಬ್ಬರ ಮನೆಗೂ ತೆರಳಿ, ಆಹ್ವಾನ ಪತ್ರಿಕೆ ವಿತರಿಸಿದ್ದರು.
ಇದನ್ನು ಓದಿದ್ದೀರಾ? ಭಾರತ್ ಜೋಡೋ ನ್ಯಾಯ ಯಾತ್ರೆ | ರಾಹುಲ್ ಗಾಂಧಿ ದೇವಸ್ಥಾನ ಪ್ರವೇಶಿಸದಂತೆ ತಡೆದ ಅಸ್ಸಾಂ ಬಿಜೆಪಿ ಸರ್ಕಾರ
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಇಂದು ಬಹು ನಿರೀಕ್ಷಿತ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಬೃಹತ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತದ ಸಾವಿರಾರು ದಾರ್ಶನಿಕರು ಸೇರಿದಂತೆ ಎಲ್ಲ ವರ್ಗಗಳ 7,000 ಕ್ಕೂ ಹೆಚ್ಚು ಅತಿಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕಾಂಗ್ರೆಸ್ ನಿರಾಕರಿಸಿದೆ. ಕಾಂಗ್ರೆಸ್ನ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು. “ಧಾರ್ಮಿಕ ಕಾರ್ಯಕ್ರಮವನ್ನು ಮೋದಿಯವರ ರಾಜಕೀಯ ಕಾರ್ಯಕ್ರಮವನ್ನಾಗಿಸಿದ್ದಾರೆ. ಹಾಗಾಗಿ, ಕಾಂಗ್ರೆಸ್ ಭಾಗವಹಿಸುವುದಿಲ್ಲ” ಎನ್ನುವ ಮೂಲಕ ಆಹ್ವಾನ ತಿರಸ್ಕರಿಸಿದ್ದರು.