ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ಯೋಜನೆ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಕೊಂಡಿದ್ದು, ಜ. 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
2018ರಲ್ಲಿ ಶಾಸಕರಾಗಿದ್ದ ಕೆ. ವೆಂಕಟೇಶ್ 295 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ರೂಪಿಸಿ ಪ್ರಸ್ತಾವವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟು, ಮಹತ್ವದ ಯೋಜನೆಗೆ ಮಂಜೂರಾತಿ ಪಡೆದುಕೊಂಡು ಶಂಕುಸ್ಥಾಪನೆ ಮಾಡಿಸಿದ್ದರು.
ಕಾವೇರಿ ನದಿಯ ದಡದಲ್ಲಿರುವ ಮುಳಸೋಗೆ ಗ್ರಾಮದಿಂದ ತಾಲೂಕಿನ 79ಗ್ರಾಮಗಳ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. 295 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು ಕಾವೇರಿ ನೀರಾವರಿ ನಿಗಮವು ಮಹಾರಾಷ್ಟ್ರ ಕೊಲ್ಲಾಪುರದ ಲಕ್ಷ್ಮೀ ಸಿವಿಲ್ ಎಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್ ಕಂಪನಿ ಮೂಲಕ ಅನುಷ್ಠಾನಗೊಳಿಸಿದೆ.
ಮುಳ್ಳುಸೋಗೆ ಗ್ರಾಮದ ಬಳಿ ಏತ ನೀರಾವರಿಯ ಮೂಲಕ ಕಾವೇರಿ ನದಿಯಿಂದ ನೀರನ್ನು ಎತ್ತಿ ಅಲ್ಲಿಂದ 11.37 ಕಿ.ಮೀವರೆಗೆ ಅಳವಡಿಸಿರುವ ಪೈಪ್ ಲೈನ್‌ಗಳ ಮೂಲಕ ಬ್ಯಾಡರ ಬೆಳಗೊಲಿ ಬಳಿ ನಿರ್ಮಾಣಗೊಂಡಿರುವ ಸಂಗ್ರಹಣಾ ತೊಟ್ಟಿಗೆ ನೀರನ್ನು ತರುವ ಕಾಮಗಾರಿ ಸಹ ಸಂಪೂರ್ಣಗೊಂಡಿದೆ.
ಮಳೆಗಾಲದಲ್ಲಿ ನಿರಂತರವಾಗಿ ಕೆರೆಗಳಿಗೆ ನೀರು ಹಾಯಿಸುವ ಸಲುವಾಗಿ ಪ್ರತ್ಯೇಕ ವಿದ್ಯುತ್ ಉಪ ಕೇಂದ್ರವನ್ನು ಸಹ ತೆರೆಯಲಾಗಿದೆ. ಈ ಯೋಜನೆಗೆ 66 ಕೆವಿ ವಿದ್ಯುತ್ ಅಗತ್ಯವಿದೆ. ಬೃಹತ್ ಗಾತ್ರದ ಜಾಕ್ವೆಲ್, ಪಂಪ್‌ಗಳನ್ನು ಅಳವಡಿಸಿ, ದೊಡ್ಡ ಗಾತ್ರದ ಪೈಪ್‌ಗಳನ್ನು ಅಳವಡಿಸಿ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಜ. 24ರಂದು ತಾಲೂಕಿನ ಭಾರತಮಾತ ಕೊಪ್ಪ ಶಾಲೆಯ ಬಳಿ ಇರುವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.