ಅಯೋಧ್ಯೆಯಲ್ಲಿ ಒಂದು ಗೋರಿ ಉರುಳಿಸಿ ಇನ್ನೊಂದು ಗೋರಿಯನ್ನೇ ಕಟ್ಟಿದ್ದು ಪ್ರಜಾತಾಂತ್ರಿಕ ವ್ಯವಸ್ಥೆಯ ಸಮಾಧಿಯಾಗಿದೆ. ಆದರೆ ದೇಶದ ಪ್ರಜ್ಞಾವಂತ ಜನರು ನಿಮ್ಮ ಆಟ ನಡೆಸಲು ಬಿಡುವುದಿಲ್ಲ ಎಂದು ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ಶೂದ್ರ ಶಂಭೂಕ ಮುನಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಇಂದು ಇಡೀ ದೇಶದ ತುಂಬಾ ಸೂತಕದ ಛಾಯೆ ಆವರಿಸಿಕೊಂಡಿದೆ. ಅವರು ಮಾಡುತ್ತಿರುವುದು ರಾಮಮಂದಿರ ಉದ್ಘಾಟನೆ ಅಲ್ಲ, ಸೂತಕ ಮನೆಯ ಗಳ ಹಿರಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮನೆ-ಮನೆಗೆ ಬೆಂಕಿ ಹಚ್ಚಿ ಬೆಂಕಿಯಲ್ಲಿ ಕಾಯಿಸಿಕೊಳ್ಳುವ ರಾಕ್ಷಸಿ ಕೆಲಸ ಮಾಡುತ್ತಿದ್ದಾರೆ, ರಾಮ ಹಾಗೂ ರಾಮ ಸಂಸ್ಕೃತಿಗೆ ನಾವು ಧಿಕ್ಕರಿಸಿ, ಕರಾಳ ದಿನವನ್ನಾಗಿ ಆಚರಿಸಬೇಕು” ಎಂದು ಕರೆ ನೀಡಿದರು.
“ರಾಮ ಮಂದಿರ ತರಾತುರಿಯಲ್ಲಿ ಉದ್ಘಾಟನೆ ಮಾಡುವಲ್ಲಿ ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ. ಸರ್ಕಾರದ ಷಡ್ಯಂತ್ರ ಅಡಗಿದೆ. ಸಾಮಾಜಿಕ, ಸಾಂಸ್ಕೃತಿಕವಾಗಿ ದೇಶದ ಮನೋಧರ್ಮವನ್ನು ಬದಲಾಯಿಸುವುದರಲ್ಲಿಯೇ ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ. ಯಶಸ್ವಿಯಾಗಿದೆ. ಕೇವಲ 20 ವರ್ಷಗಳ ಹಿಂದಿನ ದಿನಗಳಿಗಿಂತಲೂ ಇಂದು ದೇಶದಲ್ಲಿ ಹಿಂದುತ್ವ ಪ್ರಮಾಣ ಅಧಿಕವಾಗಿದೆ” ಎಂದರು.
“ದೇಶದಲ್ಲಿ ಮನುಸ್ಮೃತಿ ಹೇರಿ ಮತ್ತೆ ವರ್ಣಾಶ್ರಮ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಇಂದು ರಾಮಮಂದಿರ ಉದ್ಘಾಟನೆಯ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವ ಕಗ್ಗೊಲೆಯಾದ ದಿನ ಎಂದು ಭಾವಿಸಬೇಕು” ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅರ್ಜುನ ಭದ್ರೆ ಹೇಳಿದರು.
ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಿ ನಂತರ ಶಂಭುಕ ಮುನಿಯವರ ಸ್ಮರಣೆ ಅಂಗವಾಗಿ ಶೋಕಾಚರಣೆ ನಡೆಸಲಾಯಿತು.
ಈ ಸುದ್ದಿ ಓದಿದ್ದೀರಾ? ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ರಾಮ, ರಾಮಾಯಣ, ರಾಮರಾಜ್ಯ, ಮಂದಿರಗಳು…
ಕಾರ್ಯಕ್ರಮದಲ್ಲಿ ಚಿಂತಕ ಆರ್.ಕೆ. ಹುಡುಗಿ, ಅಶ್ವಿನಿ ಮದನಕರ್, ಪ್ರಭು ಖಾನಾಪುರೆ, ಮಹಾಂತೇಶ ಬಡದಾಳ, ಸೂರ್ಯಕಾಂತ ಅಜಾದಪೂರ ಮಲ್ಲಿಕಾರ್ಜುನ ಖನ್ನಾ, ಮಹೇಶ ಕೋಕಿಲೆ, ಪರಶುರಾಮ ಯಡ್ರಾಮಿ ಸೇರಿದಂತೆ ಇದ್ದರು.