ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 2024-25ನೇ ಸಾಲಿನ ಆಯವ್ಯಯದ ತಯಾರಿಕೆಯ ಸಿದ್ಧತೆ ನಡೆದಿದ್ದು, ಈ ಹಿನ್ನೆಲೆ, ಆಯವ್ಯಯಕ್ಕೆ ಸಾರ್ವಜನಿಕರು ಸಲಹೆ, ಸೂಚನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಪಾಲಿಕೆಯ 2024-25ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಸಲಹೆ/ಸೂಚನೆಗಳನ್ನು ಕಳುಹಿಸಬಹುದಾಗಿದೆ.
ಸಾರ್ವಜನಿಕರು ತಮ್ಮ ಸಲಹೆಗಳನ್ನು ಪಾಲಿಕೆಗೆ ಸಲ್ಲಿಸಲು ಅನುಕೂಲವಾಗುವಂತೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹಾ ಪೆಟ್ಟಿಗೆ(ಬಾಕ್ಸ್) ಅನ್ನು ಇರಿಸಿದ್ದು, ಸಾರ್ವಜನಿಕರು ಸಲಹಾ ಪೆಟ್ಟಿಗೆಯ ಮೂಲಕ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ವರದಕ್ಷಿಣೆ ಕಿರುಕುಳ ಆರೋಪ
2024-25ನೇ ಸಾಲಿನ ಕರಡು ಆಯವ್ಯಯಕ್ಕೆ ನಗರದ ಎಲ್ಲಾ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳನ್ನು ಇ-ಮೇಲ್‌ಗಳಾದ bbmpbudget@gmail.com ಹಾಗೂ suggestions2bbmpbudget@gmail.com ಮೂಲಕವೂ ಸಲ್ಲಿಸಬಹುದಾಗಿದೆ.
ಆರ್.ಡಬ್ಲ್ಯೂಎಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಫೆಬ್ರುವರಿ 10ರ ಒಳಗಾಗಿ ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ತಮ್ಮ ಅತ್ಯಮೂಲ್ಯವಾದ ಸಲಹೆ, ಸೂಚನೆಗಳನ್ನು ನೀಡಲು ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲ್ಕೆರೆ ಅವರು ಕೋರಿದ್ದಾರೆ.