ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭದ ಅಂಗವಾಗಿ ಕಲಬುರಗಿ ಜಿಲ್ಲೆಯ ವಾಡಿಯಲ್ಲಿ ಸೋಮವಾರ ಹಿಂದುತ್ವವಾದಿ ಕೋಮು ಸಂಘಟನೆಗಳು ಶೋಭಾಯಾತ್ರೆ ನಡೆಸಿದ್ದಾರೆ. ಈ ವೇಳೆ, ಶೋಭಾಯಾತ್ರೆಗೆ ಪೊಲೀಸರು ತಡೆಯೊಡ್ಡಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮ, ವಾಡಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಮೆರವಣಿಗೆ ನಡೆಸಿದ್ದ ಹಿಂದುತ್ವ ಕೋಮು ಕಾರ್ಯಕರ್ತರ ಗುಂಪು, ವಾಡಿಯ ಬಸ್ ನಿಲ್ದಾಣದ ಬಳಿಯಿದ್ದ ಮುಖಂಡರ ರೆಸ್ಟೋರೆಂಟ್‌ಗೆ ನುಗ್ಗಿದ್ದಾರೆ. ರೆಸ್ಟೋರೆಂಟ್ ಮುಚ್ಚುವಂತೆ ದಾಂಧಲೆ ನಡೆಸಿದ್ದಾರೆ. ಈ ವೇಳೆ, ಮುಸ್ಲಿಂ ಯುವಕರು ಮತ್ತು ಹಿಂದುತ್ವವಾದಿಗಳ ನಡುವೆ ಗದ್ದಲ ಉಂಟಾಗಿದೆ. ಸ್ಥಳಕ್ಕೆ ಬಂಧ ಪೊಲೀಸರು ಎರಡೂ ಗುಂಪನ್ನು ವಾಪಸ್ ಕಳಿಸಿದ್ದಾರೆ.
ಆದರೆ, ಸೋಮವಾರ ರಾತ್ರಿ ಮತ್ತೆ ಗದ್ದಲ, ಕಲ್ಲು ತೂರಾಟ ನಡೆದಿದೆ. ಹೀಗಾಗಿ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪರಿಣಾಮ, ಚಿತ್ತಾಪುರ ತಹಶೀಲ್ದಾರ್ ಸೈಯದ್ ಷಾಷಾವಲಿ ಅವರು ವಾಡಿಯಲ್ಲಿ ಗುರವಾರದವರೆಗೆ (ಜ.25) ನಿಷೇಧಾಜ್ಞೆ ಜಾರಿ ಮಾಡಿ, ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಷೆ ತೆರವುಗೊಳ್ಳುವವರೆಗೂ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿಸಲಾಗಿದೆ. ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯದ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಗುರುವಾರದವರೆಗೆ ತೆರೆಯದಂತೆ ಆದೇಶಿಸಲಾಗಿದೆ.