29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೇಗೂರುನಲ್ಲಿ ನಡೆದಿದೆ.
ಬೇಗೂರು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬುಧವಾರ ಬೆಳಗಿನ ಜಾವ ಬೆಳಿಗ್ಗೆ 5 ಗಂಟೆ ಸುಮಾರಿಗೆ ಜೋರು ಶಬ್ದ ಕೇಳಿ ಹಿನ್ನೆಲೆ, ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಓಡಿ ಬಂದು ನೋಡಿದಾಗ 12 ವರ್ಷದ ಬಾಲಕಿ ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದು ಓದ್ದಾಡುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತ ಬಾಲಕಿ ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೃತ ಬಾಲಕಿಯ ತಂದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಬೇಗೂರು ರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದಾರೆ. ಈ ದಂಪತಿಗೆ ಒಬ್ಬಳೇ ಮಗಳು ಇದ್ದಳು.
ಮನೆಯಲ್ಲಿ ಪೋಷಕರು ಮಲಗಿದ್ದಾಗ ಮುಂಜಾನೆ 4.30ಕ್ಕೆ ಬಾಲಕಿ ಎದ್ದು ಮನೆಯ ಹಾಲ್‌ಗೆ ಬಂದಿದ್ದಳು. ಅದೇ ಸಮಯಕ್ಕೆ ತಾಯಿ ಎದ್ದು ಬಂದಿದ್ದು, ಇಷ್ಟು ಬೇಗ ಏಕೆ ಎದ್ದೆ ಎಂದು ಕೇಳಿದ್ದಾರೆ. ಅದಕ್ಕೆ ಬಾಲಕಿ ಅಸ್ಪಷ್ಟ ಉತ್ತರ ನೀಡಿ, ಮತ್ತೆ ಮಲಗುವುದಾಗಿ ರೂಮ್‌ಗೆ ತೆರಳಿದ್ದಾಳೆ. ಬಳಿಕ ತಾಯಿ ಅಡುಗೆ ಮನೆ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ₹8.2 ಲಕ್ಷ ಕಳೆದುಕೊಂಡ ಯುವತಿ
ಬಳಿಕ 5 ಗಂಟೆ ಸುಮಾರಿಗೆ ಬಾಲಕಿ 29ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿ ಮೇಲಿನಿಂದ ಕೆಳಗೆ ಬೀಳುತ್ತಿದ್ದಂತೆ ಜೋರಾದ ಶಬ್ದ ಕೇಳಿ ಬಂದಿದೆ. ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಬಂದು ನೋಡಿದಾಗ ಬಾಲಕಿಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಬಳಿಕ ಆತ ಕೂಡಲೇ, ಬಾಲಕಿಯ ಪೋಷಕರಿಗೆ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್ಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.