ಆಹಾರ, ಆರೋಗ್ಯ, ಶಿಕ್ಷಣದ ಯೋಜನೆಗಳನ್ನು ಖಾಯಂ ಮಾಡುವ ಮೂಲಕ, ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ದಾವಣಗೆರೆಯಲ್ಲಿ ಸಂಸದರ ಕಚೇರಿ ಎದರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಕೆ.ಹೆಚ್ ಆನಂದರಾಜ್, “ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
“49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ 10 ಸಾವಿರ ಪಿಂಚಣಿ ಕೊಡಬೇಕು. ಈ ಯೋಜನೆಗಳಲ್ಲಿ ದುಡಿಯವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
“ಎಲ್ಲ ಅಂಗನವಾಡಿ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಜ್ಯುಟಿ ಕಾಯ್ದೆಯನ್ನು ದೇಶದೆಲ್ಲೆಡೆ
ಜಾರಿ ಮಾಡಬೇಕು. 29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿ.ಲತಾ,ಸುವರ್ಣ,ಆಶಾ.ವೀಣಮ್ಮ, ದೇವಿರಮ್ಮ,ಸುಧಮ್ಮ ಹಾಗೂ ಸಂಘಟನೆಯ ಇತರ ಕಾರ್ಯಕರ್ತರು ಹಾಜರಿದ್ದರು.