ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿಯನ್ನು ವಿರೋಧಿಸಿ ಜನವರಿ 26 ರಂದು ದಾವಣಗೆರೆಯಲ್ಲಿ ಟ್ರಾಕ್ಟರ್ ಪೆರೇಡ್ ನಡಸಿ, ಪ್ರತಿಭಟಿಸಲಾಗುತ್ತದೆ ಎಂದು ರೈತ ಸಂಘ ತಿಳಿಸಿದೆ. ಬುಧವಾರ ದಾವಣಗೆರೆಯ ಗಾಂಧಿ ಸರ್ಕಲ್‌ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಹೊಸ ಕಾಯಿದೆ ಜಾರಿಗೆ ತಂದು, ರೈತ, ಕಾರ್ಮಿಕರನ್ನು ಬಂಡವಾಳಶಾಹಿ ವ್ಯವಸ್ಥೆಯ ಕೈಗೊಂಬೆಯಾಗಿ ಮಾಡಲು ಮುಂದಾಗಿದೆ. ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ಸಾರ್ವಜನಿಕರನ್ನು ಹಾಳುಗೆಡವುತ್ತಿದೆ. ಇಂತಹ, ಕಾಯಿದೆಗಳನ್ನು ರದ್ದು ಮಾಡಿ ಜನಪರ ನೀತಿಗಳನ್ನು ಜಾರಿಗೆ ತರಬೇಕು ಎಂದು ರೈತಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಎಲ್ಲ ರೈತ, ಕಾರ್ಮಿಕ, ಜನವಿರೋಧಿ ನೀತಿಗಳನ್ನು ವಿರೋಧಿಸಿ ಗಣರಾಜ್ಯೋತ್ಸವದ ದಿನ ರೈತ, ಕಾರ್ಮಿಕ, ಜನಪರ ಸಂಘಟನೆಗಳ ಮುಂದಾಳತ್ವದಲ್ಲಿ ದಾವಣಗೆರೆಯ ಜಯದೇವ ವೃತ್ತದಿಂದ ಟ್ರ್ಯಾಕ್ಟರ್ ಪೆರೇಡ್ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪೋಸ್ಟರ್ ಬಿಡುಗಡೆಯಲ್ಲಿ ಎಐಟಿಯುಸಿಯ ಚಂದ್ರು,ವಾಸು, ರೈತಸಂಘದ ಬುಳ್ಳಾಪುರ ಹನುಮಂತಪ್ಪ, ರೇವಣಪ್ಪ, ಜನಶಕ್ತಿಯ ಸತೀಶ್, ಪವಿತ್ರ, ರಾಮಾಂಜನೇಯ, ಆದಿಲ್ ಖಾನ್, ಇತರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.