ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿನಾಕಾರಣ ಸುಳ್ಳು ಆರೋಪ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ವಿವಿಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪಿ.ನಂದಪ್ಪ ಬುಧವಾರ(ಏ.12)ದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ. ವಿಶ್ವವಿದ್ಯಾಲಯವು ಸುಳ್ಳು ಆರೋಪ ಮಾಡಿದ್ದು, ಪ್ರಕರಣ ದಾಖಲಿಸಿದೆ. ಇದರಿಂದ ವೈಯಕ್ತಿಕ ಕಾರಣಗಳಿಗೆ ಹೊರಗೆ ಓಡಾಡುವಾಗ ಅನಗತ್ಯವಾಗಿ ತೊಂದರೆ ಆಗುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅವಲತ್ತುಕೊಂಡರು.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ವಿದ್ಯಾರ್ಥಿ ನಂದಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೆಲವು ದಿನಗಳಿಂದ ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳು ನನ್ನನ್ನು ಉದ್ದೇಶಪೂರ್ವಕವಾಗಿ ಹಿಂಸಿಸುತ್ತಿವೆ. ನಾನೂ ಸರಿದಂತೆ ಮೂವರು ಸ್ನೇಹಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ಆರೋಪಿಸಿದರು.
“ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ʼಹೊರಗೆ ಸಿಗು ನೋಡಿಕೊಳ್ಳುತ್ತೇವೆʼ ಎಂದು ಸವಾಲ್ ಹಾಕುತ್ತಾರೆ. ಕಾಲೇಜಿನ ಆಡಳಿತ ಮಂಡಳಿಯೂ ಅವರ ಪರವಾಗಿಯೇ ಇದೆ. ಆಡಳಿತ ಮಂಡಳಿಗೆ ನಾನೂ ಕೂಡ ದೂರು ನೀಡಿದ್ದು, ಕೆಲವು ಸಂಘಟನೆಗಳವರು ಅನಾವಶ್ಯಕವಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲಿನ ಆರೋಪಗಳು ಸುಳ್ಳು. ವಿಚಾರಣೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನನಗೆ ನ್ಯಾಯ ದೊರೆಯುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಈ ಮೊದಲೇ ತಿಳಿಸಿದ್ದೇನೆ” ಎಂದು ಹೇಳಿದರು.
“ಸಂಶೋಧನಾ ವಿದ್ಯಾರ್ಥಿ ನರೇಂದ್ರ ಕುಮಾರ್ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ಸಲ್ಲಿಸಿದ್ದರು. ಶಿಸ್ತುಪಾಲನಾ ಸಮಿತಿಯು ವಿಚಾರಣೆಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಅನುಪಸ್ಥಿತಿಯಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಗಂಟೆಗಟ್ಟಲೆ ವಿಚಾರಣೆ ನಡೆಸಿತು” ಎಂದರು.
“ಶಿಸ್ತುಪಾಲನಾ ಅಧಿಕಾರಿಗಳು ವಿಚಾರಣೆ ವೇಳೆ, ದೂರಿಗೆ ಸಂಬಂಧಿತ ವಿಷಯಗಳನ್ನು ಕೇಳುವ ಹೊರತಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳುತ್ತಾರೆ. ʼನೀನು ಬೇರೆ ರಾಜ್ಯದವನಂತೆ ಕಾಣುತ್ತೀಯ, ದನದ ಮಾಂಸ ತಿನ್ನುತ್ತೀಯ. ಅದನ್ನು ಎಲ್ಲಿಂದ ತರ್ತೀರಾʼ ಎಂದು ನಿಂದಿಸುತ್ತಾರೆ. ಅನಗತ್ಯವಾಗಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ” ಎಂದು ಹೇಳಿದರು.
“ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣ ಗಿಡ-ಮರಗಳಿಗೆ ಈಚೆಗೆ ಬೆಂಕಿ ತಗುಲಿತ್ತು. ಅದರ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿದೆ. ಕಿರುಕುಳ ಕೊಟ್ಟು ಮಾನಸಿಕ ಒತ್ತಡ ನೀಡಲಾಗುತ್ತಿದೆ. ಇದರಿಂದಾಗಿ ಸಂಶೋಧನ ಕಾರ್ಯಗಳಿಗೂ ತೊಂದರೆ ಆಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನಿನ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಂದಪ್ಪ ಮತ್ತು ನರೇಂದ್ರ ನಡುವೆ ಮನಸ್ತಾಪಗಳು ಉಂಟಾಗಿದ್ದವು. ಈ ಕುರಿತು ನರೇಂದ್ರ ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ಹಂತದ ವಿಚಾರಣೆ ಆರಂಭವಾಗಿತ್ತು. ಬಳಿಕ ನಂದಪ್ಪನೂ ಸಮಿತಿಗೆ ದೂರು ನೀಡಿದ್ದಾರೆ. ವಿಚಾರಣೆ ಕೈಗೊಳ್ಳುವ ಮುನ್ನವೇ ಉಪವಾಸ ಕುಳಿತಿದ್ದಾರೆ” ಎಂದರು
“ವಿದ್ಯಾರ್ಥಿಗಳು ವೈಯಕ್ತಿಕ ವಿಚಾರಗಳಿಂದ ವಿಶ್ವವಿದ್ಯಾಲಯಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನ ವಿಷಯಕ್ಕೆ, ಪಾಠಪ್ರವಚನಗಳ ವಿಷಯಕ್ಕೆ ಸಂಬಂಧಿಸಿದಂತೆ, ಒಟ್ಟಾರೆಯಾಗಿ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಿಂದ ತಪ್ಪಾಗಿದ್ದರೆ ಸತ್ಯಾಗ್ರಹ ನಡೆಸಲಿ. ಅದಕ್ಕೆ ಯಾವುದೇ ವಿದ್ಯಾರ್ಥಿಗಳಿಗಾದರೂ ಹಕ್ಕಿರುತ್ತದೆ. ಆದರೆ, ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ವಿದ್ಯಾಲಯದ ಮುಂದೆ ಹೀಗೆ ಮಾಡುವುದು ತಪ್ಪು. ಯಾವುದೇ ವಿದ್ಯಾರ್ಥಿಯೂ ಹೀಗೆ ಮಾಡಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ಮುರುಘಾಶ್ರೀ ಪ್ರಕರಣ | ಆರೋಪಿ ಶಿವಮೂರ್ತಿ ಶರಣರ ಮೇಲೆ ದೋಷಾರೋಪ ನಿಗದಿ
“ನಂದಪ್ಪ ಉಪವಾಸಕ್ಕೆ ಕುಳಿತ ಬಳಿಕವೂ ಬೇಡಪ್ಪ, ತನಿಖೆ ನಡೆಸೋಣ, ಶಿಸ್ತು ಪಾಲನಾ ಸಮಿತಿಯ ಅಧಿಕಾರಿಗಳಿಂದ ತನಿಖೆ ವರದಿ ಬರಲಿ ನಂತರ ಆಡಳಿತ ಮಂಡಳಿಯಿಂದ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಯೋಚಿಸುತ್ತೇವೆ ಎಂದರೂ ಕೇಳದೆ ಕುಳಿತಿದ್ದಾರೆ. ಇಲ್ಲ ಸಲ್ಲದ ಅಪವಾದಗಳನ್ನು ಮಾಡುತ್ತಿದ್ದಾರೆ. ಕಾಲೇಜಿನ ವಿರುದ್ಧ ನಕಾರಾತ್ಮಕ ಮಾಹಿತಿ ನೀಡುತ್ತಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡುವುದು ಮಾಡುತ್ತಿದ್ದಾರೆ. ಇಂತಹ ನಡೆ ಯಾವುದೇ ವಿದ್ಯಾರ್ಥಿಗೂ ಶೋಭೆಯಲ್ಲ” ಎಂದಿದ್ದಾರೆ.
“ನನ್ನ ಸಹೋದ್ಯೋಗಿ ಮಿತ್ರರು ಸೇರಿದಂತೆ ಹಲವರು ಹೋಗಿ ತಿಳಿಹೇಳಿದ್ದೇವೆ. ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಿದ್ದೇವೆ. ನಾನೇ ಆಪ್ತಸಮಾಲೋಚನೆಯನ್ನೂ ನಡೆಸಿದ್ದೇನೆ. ಆದರೂ ಅವರು ಮೂರು ದಿನಗಳಿಂದ ಕದಲುತ್ತಿಲ್ಲ. ವಿದ್ಯಾರ್ಥಿಗಳ ಇಂತಹ ನಡೆ ಒಳ್ಳೆಯದಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಕಾಲೇಜಿನ ಆವರಣದಲ್ಲಿ ನಡೆದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ವಿದ್ಯಾರ್ಥಿಗಳ ಮೇಲೂ ಆರೋಪ ಮಾಡಿಲ್ಲ. ಈ ವಿಷಯ ಈವರೆಗೂ ನಮ್ಮ ಗಮನಕ್ಕೆ ಬಂದಿಲ್ಲ. ಅದೆಲ್ಲ ಸುಳ್ಳು. ಕಾಲೇಜು ನಿಯಮಗಳನ್ನು ಮೀರಿದಾಗ ನಾವು ತಡೆದಿದ್ದೇವೆ. ರಾತ್ರಿ 9-30ರ ಬಳಿಕ ಊಟಕ್ಕೆ ಹೊರಗೆ ಹೋಗುವುದು ಕಾಲೇಜಿನ ನಿಯಮವಲ್ಲ. ಇಂತಹ ಸಮಯದಲ್ಲಿ ನಾವೂ ಕೂಡ ನಿಯಮ ಬಾಹಿರವಾಗಿ ನಡೆದುಕೊಳ್ಳಲಾಗುವುದಿಲ್ಲ. ಇದರಲ್ಲಿ ಕಾಲೇಜು ನಿಯಮವೇ ಅಂತಿಮ” ಎಂದರು.