2024ರ ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಆಗುತ್ತಾರೆ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆಂದು ಈ ಹಿಂದೆ ದೇವೇಗೌಡರು ಹೇಳಿದ್ದರು. ಇದೀಗ, ಅವರ ಪುತ್ರ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿಸಲು ನರೇಂದ್ರ ಮೋದಿಯೇ ಪ್ರಧಾನಿಯಾಗುವರು ಎನ್ನುತ್ತಿದ್ದಾರೆ” ಎಂದು ಟೀಕಿಸಿದರು.
“ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಿ ಮೋದಿ 11 ದಿನಗಳ ಉಪವಾಸ ವ್ರತ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ವೈದ್ಯರನ್ನು ಕೇಳಿದಾಗ ಅಷ್ಟು ದಿನಗಳ ಕಾಲ ಉಪವಾಸವಿದ್ದು ಬದುಕಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಪ್ರಧಾನಿಯವರು ಉಪವಾಸ ಮಾಡದೆ ಗರ್ಭಗುಡಿ ಪ್ರವೇಶಿಸಿದ್ದರೆ, ಅದು ಅಪವಿತ್ರವಾಗುತ್ತದೆ” ಎಂದು ಛೇಡಿಸಿದರು.
“ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪಿಸುತ್ತೇವೆ ಎಂದು ವಿವಿಧ ರಾಜ್ಯಗಳಲ್ಲಿ ಅಧಿಕಾರ ಪಡೆದರು. ಇನ್ಮುಂದೆ ಹೇಳಲು ಬಿಜೆಪಿಗೆ ಯಾವುದೇ ವಿಷಯ ಇಲ್ಲ” ಎಂದರು.