ಟೀಂ ಇಂಡಿಯಾ ಕ್ರಿಕೆಟ್‌ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಿಂದ ಪ್ರಮುಖ ಆಟಗಾರ ಕೆ ಎಲ್ ರಾಹುಲ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಬ್ಯಾಟ್ಸ್‌ಮನ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ.
ಹೈದರಾಬಾದ್‌ನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಅವರು ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿಯೇ ಈ ಬಗ್ಗೆ ನಿರ್ಧರಿಸಿದ್ದೆವು. ನಾವು ಇನ್ನಿಬ್ಬರು ವಿಕೆಟ್ ಕೀಪರ್ ಅವರನ್ನುಆಯ್ಕೆ ಮಾಡಿದ್ದೇವೆ. ನಿಸ್ಸಂಶಯವಾಗಿ ರಾಹುಲ್ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಸರಣಿ ಡ್ರಾ ಆಗಲು ಅವರ ಆಟ ನಮಗೆ ತುಂಬ ಸಹಾಯವಾಗಿದೆ. ಆದರೆ ಐದು ಪಂದ್ಯಗಳ ಈ ಸರಣಿಯನ್ನು ಪರಿಗಣಿಸಿದಾಗ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಇತರ ಇನ್ನಿಬ್ಬರು ಕೀಪರ್‌ಗಳು ನಿರ್ವಹಿಸಲಿದ್ದಾರೆ” ಎಂದು ತಿಳಿಸಿದರು.
ರಾಹುಲ್ ಬದಲಿಗೆ ಕೆ ಎಸ್ ಭರತ್ ಹಾಗೂ ಧ್ರವ ಜುರೆಲ್ ವಿಕೇಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ತವರಿನ ಪಿಚ್‌ಗಳ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ವೇಗಿಗಳಿಗೆ ಅನುಕೂಲ ತಂದುಕೊಡುವ ಬಗ್ಗೆ ನಮಗೆ ಖಚಿತವಿಲ್ಲ. ಆದರೆ ಸ್ಪಿನ್ನರ್‌ಗಳಿಗೆ ಸ್ಪಲ್ಪ ಅನುಕೂಲ ಸಾಧ್ಯತೆಯಿದೆ. ಆಟ ಪ್ರಾರಂಭವಾದ ನಂತರ ಇದರ ಬಗ್ಗೆ ತಿಳಿದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಅಲಭ್ಯವಾಗುವ ಕಾರಣದಿಂದ ಯುವ ಆಟಗಾರ ಒಬ್ಬರು ಹೊರಹೊಮ್ಮಲು ಸಾಧ್ಯತೆಯಿದೆ ಎಂದು ದ್ರಾವಿಡ್ ತಿಳಿಸಿದ್ದಾರೆ.
ಕಳೆದ 9 ಇನಿಂಗ್ಸ್‌ಗಳಲ್ಲಿ ಶುಭ್‌ಮನ್ ಗಿಲ್ ಅವರ ನೀರಸ ಪ್ರದರ್ಶನದ ಬಗ್ಗೆ ಮಾತನಾಡಿದ ತಂಡದ ಮುಖ್ಯ ಕೋಚ್, ಗಿಲ್ ಅವರು ಉತ್ತಮ ಆಟಗಾರರಾಗಿದ್ದು, ಕ್ರಿಕೆಟಿಗನಾಗಿ ತಮ್ಮ ವೃತ್ತಿಯನ್ನು ಉತ್ತಮವಾಗಿ ಆರಂಭಿಸಿದ್ದಾರೆ. ಕೆಲವು ಸಂದರ್ಭದಲ್ಲಿ ನಾವು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತೇವೆ. ಮತ್ತೆ ಕೆಲವು ಸಲ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಟವಾಡಿದ್ದಾರೆ. ಗಿಲ್ ಕೂಡ ಹಲವು ಸವಾಲುಗಳ ನಡುವೆ ಉತ್ತಮ ಸಾಮರ್ಥ್ಯದೊಂದಿಗೆ ತಮ್ಮ ಆಟ ನಿರ್ವಹಿಸುತ್ತಿದ್ದಾರೆ. ಕಳೆದ ಋತುಗಳಲ್ಲಿ ನಮಗಾಗಿ ಶತಕಗಳನ್ನು ಸಿಡಿಸಿದ್ದರು. ಸದ್ಯ ಉತ್ತಮ ಲಯಕ್ಕೆ ಮರಳುತ್ತಿದ್ದಾರೆ” ಎಂದು ತಿಳಿಸಿದರು.
ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ನಾಳೆ (ಜ.25) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.