ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ‘ಈ ದಿನ’ ಯೂಟ್ಯೂಬ್ ಚಾನೆಲ್‌ಗಾಗಿ ಬ್ಯಾಂಕಿಂಗ್ ತಜ್ಞ ವೆಂಕಟ್ ಶ್ರೀನಿವಾಸನ್ ಅವರು ಪರಕಾಲ ಅವರ ಸಂದರ್ಶನ ನಡೆಸಿಕೊಟ್ಟಿದ್ದಾರೆ. ‘The Crooked Timber of New India’ ಕೃತಿಯ ಹಿನ್ನೆಲೆಯಲ್ಲಿ ಈ ಸಂದರ್ಶನ ಮೂಡಿ ಬಂದಿದೆ. ಒಂದು ತಾಸಿನ ಅವರ ಸಂದರ್ಶನದ ಮೊದಲ ಭಾಗದ ಕನ್ನಡ ಸಾರಾಂಶ ಇಲ್ಲಿದೆ.
ಪರಕಾಲ ಪ್ರಭಾಕರ್ ಅವರು ದೇಶದ ಹೆಸರಾಂತ ಸಾಮಾಜಿಕ ವ್ಯಾಖ್ಯಾನಕಾರರು ಮತ್ತು ರಾಜಕೀಯ ಅರ್ಥಶಾಸ್ತ್ರಜ್ಞರು. ಉತ್ಪಾದನೆ, ವ್ಯಾಪಾರ ವಾಣಿಜ್ಯ ಮತ್ತು ಕಾನೂನು- ಸರ್ಕಾರದೊಂದಿಗೆ ಅವುಗಳ ಸಂಬಂಧದ ಅಧ್ಯಯನವೇ ಪೊಲಿಟಿಕಲ್ ಎಕಾನಮಿ. ಪರಕಾಲ ದೆಹಲಿಯ ಜವಾಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಓದಿದವರು. London School of Economicsನಿಂದ ಡಾಕ್ಟರೇಟ್ ಪಡೆದವರು.
‘The Crooked Timber of New India’ ಪರಕಾಲ ಅವರ ಇತ್ತೀಚಿನ ಮಹತ್ವದ ಕೃತಿ. ಭಾರತ ಗಣರಾಜ್ಯ ತೀವ್ರ ಸಂಕಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಾದ ಆಯ್ಕೆಯಲ್ಲ ಎಂಬುದು ಈ ಕೃತಿಯ ಸಂದೇಶ. ಕಾಯಿಲೆ ಬಿದ್ದಿರುವ ದೇಶದ ಹಣಕಾಸು ಸ್ಥಿತಿಯ ನರಳಾಟದ ಮಗ್ಗುಲುಗಳ ಕುರಿತು ಹರಿತ ಒಳನೋಟಗಳನ್ನು ನೀಡಿದ್ದಾರೆ. ಬಡತನ ಮತ್ತು ನಿರುದ್ಯೋಗ ಕುರಿತ ವಾಸ್ತವಾಂಶಗಳನ್ನು ಮೋದಿ ಸರ್ಕಾರ ಅದುಮಿಟ್ಟಿದೆ, ಈ ಸರ್ಕಾರದಡಿ ದೇಶದ ಅಂಕಿ ಅಂಶದ ಸಮಗ್ರತೆಗೆ ಧಕ್ಕೆ ಒದಗಿದೆ ಎನ್ನುತ್ತಾರೆ. ಪರಕಾಲ ಅವರು ದೇಶದ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಪತಿ ಕೂಡ.
ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ. ನಿರುದ್ಯೋಗದ ಗಂಭೀರ ಸಮಸ್ಯೆ ಆವರಿಸಿದೆ. ತೀವ್ರ ಹಣದುಬ್ಬರವಿದೆ. ಯುವಜನರು ಹತಾಶರಾಗಿದ್ದಾರೆ. ಶಿಕ್ಷಣವು ಕೌಶಲ್ಯಗಳನ್ನು ಕಲಿಸುತ್ತಿಲ್ಲ. ಜನಸಂಖ್ಯೆಯ ಶಕ್ತಿಸಾಮರ್ಥ್ಯಗಳನ್ನು ಪೋಲು ಮಾಡಲಾಗುತ್ತಿದೆ. ಡಾಲರ್ ಮತ್ತು ರೂಪಾಯಿಯ ವಿನಿಮಯ ಮೌಲ್ಯ 80 ರುಪಾಯಿಯ ಗಡಿ ದಾಟಿದಾಗ ಒಂದು- ಎರಡು ದಿನದ ಮಟ್ಟಿಗೆ ಹಾಹಾಕಾರ ಎದ್ದಿತ್ತು. ಈಗ 83 ರುಪಾಯಿ ಮುಟ್ಟಿದರೂ ಯಾರಿಗೂ ದರಕಾರಿಲ್ಲ. ಕೋವಿಡ್ ಹೊತ್ತಿನಲ್ಲಿ ಲಕ್ಷ ಲಕ್ಷ ಶ್ರಮಜೀವಿಗಳ ಕಡುಕಠಿಣ ಮಹಾವಲಸೆ ಯಾರನ್ನೂ ತಟ್ಟಲಿಲ್ಲ. ನೂರಾರು ಶವಗಳು ಗಂಗೆಯಲ್ಲಿ ತೇಲಿದರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಮಾಲ್ದೀವ್ಸ್ ವರ್ಸಸ್ ಲಕ್ಷದ್ವೀಪ, ಮಂದಿರದಂತಹ ವಿಷಯಗಳ ಕುರಿತು ಭಾರೀ ಚರ್ಚೆ ನಡೆಯುತ್ತದೆ.
2022ರ ಆರಂಭದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ರೇಲ್ವೆ ನೇಮಕಾತಿ ಕುರಿತು ಭಾರೀ ಗಲಭೆಗಳಾದವು. 35 ಸಾವಿರ ಉದ್ಯೋಗಗಳಿಗೆ 1.35 ಕೋಟಿಗಿಂತ ಹೆಚ್ಚು ಅರ್ಜಿಗಳು ಬಂದಿದ್ದವು. ದೇಶದ ನಿರುದ್ಯೋಗ ಸಮಸ್ಯೆಯ ಆಳಕ್ಕೆ ಸಣ್ಣ ನಿದರ್ಶನವಿದು. ಇಂತಹ ನೈಜ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳಲಾಗುತ್ತದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಂದಿರವನ್ನು ಮುಂದೆ ಮಾಡಲಾಗುತ್ತದೆ. ಇಂದ್ರಜಾಲ ಅಥವಾ ಯಕ್ಷಿಣಿ ಮಾಡುವವನು ಸಭಿಕರ ಗಮನವನ್ನು ಮತ್ತೆತ್ತಲೋ ಸೆಳೆದು ಯಾಮಾರಿಸುತ್ತಾನೆ. ಜನ ಯಾಮಾರಿದಾಗ ತನ್ನ ಕೈಚಳಕ ಪ್ರಯೋಗಿಸಿರುತ್ತಾನೆ. ದೇಶದಲ್ಲಿ ಈಗ ಥೇಟ್ ಇಂತಹುದೇ ವಿದ್ಯಮಾನ ನಡೆಯುತ್ತಿದೆ.
ನನ್ನ ಪುಸ್ತಕದಲ್ಲಿ ಹೊಸದೇನನ್ನೂ ಹೇಳಿಲ್ಲ. ಎಲ್ಲರಿಗೂ ಗೊತ್ತಿದ್ದದ್ದೇ. ಜನ ಈ ಸಂಗತಿಗಳನ್ನು ಬಿಡಿ ಬಿಡಿಯಾಗಿ ಒಂದಕ್ಕೊಂದು ಸಂಬಂಧವಿಲ್ಲದಂತೆ ನೋಡುತ್ತಿದ್ದಾರೆ. ಇವುಗಳನ್ನು ಇಡಿಯಾಗಿ ನೋಡಬೇಕು ಮತ್ತು ಇವುಗಳ ನಡುವೆ ಪರಸ್ಪರ ಸಂಬಂಧವಿದೆ. ಇವೆಲ್ಲವುಗಳ ಕಥಾನಕ ನಿರೂಪಣೆ ವಿನ್ಯಾಸ ಒಂದೇ ಆಗಿದೆ. ಈ ವಿನ್ಯಾಸ ಏನು ಮತ್ತು ಇದು ಹೀಗೆಯೇ ಮುಂದುವರೆದರೆ ದೇಶವನ್ನು ಎಲ್ಲಿಗೆ ತಲುಪಿಸುತ್ತದೆ, ಜಾತ್ಯತೀತತೆ, ಬಹುತ್ವ, ಉದಾರವಾದಿತ್ವ, ಸಹಿಷ್ಣುತೆ, ಜನತಂತ್ರ, ಗಣರಾಜ್ಯ ತತ್ವಗಳ ಗತಿಯೇನು? ಈ ಎಲ್ಲ ಮೌಲ್ಯಗಳನ್ನು ನಾವು ಅಳವಡಿಸಿಕೊಂಡದ್ದರ ಹಿಂದೆ ಸ್ವಾತಂತ್ರ್ಯ ಹೋರಾಟದ ಬಹುದೀರ್ಘ ಇತಿಹಾಸವಿದೆ. ಇಂದು ಈ ಮೌಲ್ಯಗಳಿಗೆ ವಿದೇಶೀ ಎಂಬ ಹಣೆಪಟ್ಟಿ ಹಚ್ಚಿ ಗಾಳಿಗೆ ತೂರಲಾಗುತ್ತಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕಿಂಚಿತ್ತೂ ಪಾತ್ರ ವಹಿಸದಿದ್ದ ವೇದಿಕೆಗಳು ಮತ್ತು ರಾಜಕೀಯ ಶಕ್ತಿಗಳು ದೇಶಭಕ್ತರ ವೇಷ ಹಾಕಿ ನಿಂತಿವೆ. ಒಂದಕ್ಕೊಂದು ಹೊಂದಾಣಿಕೆಯೇ ಇಲ್ಲದ ಅಸಂಗತ ಆರ್ಥಿಕ ಚಿಂತನೆ ಇವರದು. ಈಗಿನ ಆಳುವ ಪಕ್ಷದ ಹಳೆಯ ಅವತಾರವು ಮುಕ್ತ ವ್ಯಾಪಾರ ಮತ್ತು ಉದಾರ ಆರ್ಥಿಕ ನೀತಿಯ ಪರವಾಗಿತ್ತು. ಆದರೆ ಈಗಿನ ಅವತಾರವು ಗಾಂಧೀ ಪ್ರಣೀತ ಸಮಾಜೋ ಅರ್ಥಶಾಸ್ತ್ರವನ್ನು ಪ್ರತಿಪಾದಿಸಿ 1980ರಲ್ಲಿ ತನ್ನ ಯಾತ್ರೆ ಆರಂಭಿಸಿತ್ತು. ಅದನ್ನು ಒಂದು ಹಂತದಲ್ಲಿ ಸಮಾಧಿ ಮಾಡಲಾಯಿತು. ಎಲ್ಲರೂ ಮರೆತೇ ಹೋದರು. ಅದೇ ವೇದಿಕೆಯು 1991ರ ಉದಾರ ಆರ್ಥಿಕ ನೀತಿಯನ್ನು ತೀವ್ರವಾಗಿ ವಿರೋಧಿಸಿತ್ತು. ಈ ವಿರೋಧಾಭಾಸವನ್ನು ಗಮನಿಸಿರಿ. ಇದೇ ರಾಜಕೀಯ ಪಕ್ಷ ಜಿ.ಎಸ್.ಟಿ.ಯನ್ನು ಕೂಡ ವಿರೋಧಿಸಿತ್ತು. ಆದರೆ ಇಂದು ಇವರೇ ಜಿ.ಎಸ್.ಟಿ.ಯ ಮಹಾನ್ ಬೆಂಬಲಿಗರು.
ಖಾಸಗೀಕರಣವನ್ನು ವಿರೋಧಿಸಿದ ಇವರೇ ಇಂದು ಖಾಸಗೀಕರಣದ ಹರಿಕಾರರು. ಕಪ್ಪುಹಣ ನಗದು ರೂಪದಲ್ಲೇ ಉಳಿಯುವುದಿಲ್ಲ ಎಂಬ ಪ್ರಾಥಮಿಕ ಸಂಗತಿಯೂ ಗೊತ್ತಿಲ್ಲದೆ ನೋಟು ರದ್ದು ಮಾಡಿದರು. ಮೈಕ್ರೋ ಮತ್ತು ಮ್ಯಾಕ್ರೋ ಎಕಾನಮಿ ನಡುವೆ ವ್ಯತ್ಯಾಸ ತಿಳಿಯದ ‘ಅರ್ಥಶಾಸ್ತ್ರಜ್ಞ’ರು ಇವರಲ್ಲಿದ್ದಾರೆ. ಉದ್ಯೋಗ ಕಡಿತ ಮಾಡುವುದರಿಂದ ಕಂಪನಿ ಉಳಿಸಬಹುದು, ದೇಶದ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಬರುವುದಿಲ್ಲ, ನೋಟುರದ್ದಿನ ಕ್ರಮದಿಂದ ಗ್ರಾಮೀಣ ಅರ್ಥಶಾಸ್ತ್ರ ಸತ್ಯಾನಾಶವಾಗಿ ಹೋಗಿದೆ. ಇಂದಿಗೂ ಚೇತರಿಸಿಕೊಂಡಿಲ್ಲ. ಭಾರತೀಯ ಪೌರತ್ವ ತೊರೆದು ವಿದೇಶಗಳಿಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸ ಹೂಡಿಕೆ ಆಗುತ್ತಿಲ್ಲ. ಪರಿಸ್ಥಿತಿ ಅದಕ್ಕೆ ತಕ್ಕಂತೆ ಪೂರಕವಾಗಿಲ್ಲ.
ನಮ್ಮದು ಗಣರಾಜ್ಯ ಒಕ್ಕೂಟ. ರಾಜಕೀಯ ಮತ್ತು ಆರ್ಥಿಕ ಸಂಬಂಧಗಳೆರಡಕ್ಕೂ ಈ ಮಾತು ಅನ್ವಯಿಸುತ್ತದೆ. ಆದರೆ ಹಣಕಾಸು ಆಯೋಗವು ರಾಜ್ಯಗಳಿಗೆ ಹಂಚಿಕೆ ಮಾಡುವ ಹಣಕಾಸು ಸಂಪನ್ಮೂಲಗಳನ್ನು ಕಡಿತ ಮಾಡಬೇಕೆಂದು ಖುದ್ದು ಪ್ರಧಾನಮಂತ್ರಿಯವರೇ ಬಯಸಿದ್ದರಂತೆ. ನೀತಿ ಆಯೋಗದ ಮಾಜಿ ಮುಖ್ಯಸ್ಥರೊಬ್ಬರು ಇತ್ತೀಚೆಗೆ ಈ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹೊರ ಹಾಕಿದ್ದಾರೆ. ಜಿ.ಎಸ್.ಟಿ. ಜಾರಿಯಿಂದ ರಾಜ್ಯದ ಆರ್ಥಿಕ ಆದಾಯದ ಮೂಲಗಳು ಬತ್ತಿ ಹೋಗುತ್ತವೆ. ಈಗಾಗಲೇ ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಇಲ್ಲ. ಕೆಲವು ರಾಜ್ಯಗಳು ಕೇಂದ್ರಕ್ಕೆ ಸಲ್ಲಿಸುವ ಒಂದು ರೂಪಾಯಿಯ ಆದಾಯದಲ್ಲಿ 23 ಪೈಸೆಗಳನ್ನು ಅವುಗಳಿಗೆ ವಾಪಸು ಕೊಡಲಾಗುತ್ತಿದೆ. ಕೆಲವು ರಾಜ್ಯಗಳಿಗೆ ಒಂದು ರೂಪಾಯಿಗೆ ಒಂದು ರೂಪಾಯಿ ಅಥವಾ ಎರಡು ರೂಪಾಯಿಯನ್ನು ಕೊಡಲಾಗುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ತನಗೆ ಬೇಕಾದವರಿಗೆ ಹೆಚ್ಚು ಮತ್ತು ಬೇಡವಾದವರಿಗೆ ಕಡಿಮೆ ನೀಡಿ ತಾರತಮ್ಯ ಮಾಡುವ ಅವಕಾಶವಿದೆ.
ಈ ತಾರತಮ್ಯ ಕುರಿತು ಮೊದಲೇ ಎಚ್ಚರಿಕೆ ನೀಡುವ ಘೋಷಣೆಯೇ ಡಬಲ್ ಎಂಜಿನ್ ಸರ್ಕಾರ. ಎರಡೂ ಕಡೆ ನಮ್ಮನ್ನು ಆರಿಸದೆ ಹೋದರೆ ಶಿಕ್ಷೆ ಕಾದಿದೆ ಎಂಬ ಸಂದೇಶ ಈ ಘೋಷಣೆಯಲ್ಲಿ ಆಡಗಿದೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಗಣರಾಜ್ಯ ಒಕ್ಕೂಟ ತತ್ವಗಳನ್ನು ನಾಶಪಡಿಸಲಾಗುತ್ತಿದೆ. ತೀರ್ಮಾನಗಳನ್ನು ತೆಗೆದುಕೊಳ್ಳುವ ಮತ್ತು ತೆರಿಗೆ ಸಂಗ್ರಹಿಸಿ ಅದನ್ನು ವಿನಿಯೋಗಿಸುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ತುಳಿಯಲಾಗುತ್ತಿದೆ. ಬಿಜೆಪಿಯನ್ನು ವಿಧಾನಸಭೆಗೆ ಆರಿಸದೆ ಇರುವ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ರಾಜಕಾರಣ ಮತ್ತು ಆರ್ಥಸ್ಥಿತಿಯ ನಡುವಣ ಸಾವಯವ ಸಂಬಂಧ ಇದೇ ಆಗಿದೆ. ಈ ಎರಡೂ ಪ್ರತ್ಯೇಕವಾಗಿರುವುದು ಸಾಧ್ಯವಿಲ್ಲ.
ಈಗ ನಡೆಯುತ್ತಿರುವ ಈ ವಿದ್ಯಮಾನ ಮುಂದಿನ ಐದು-ಹತ್ತು ವರ್ಷಗಳ ತನಕ ಮುಂದುವರೆದರೆ ಗಣರಾಜ್ಯ ಒಕ್ಕೂಟ ವ್ಯವಸ್ಥೆಯು ಇನ್ನಷ್ಟು ಒತ್ತಡ ಎದುರಿಸಲಿದೆ. ಪರಿಸ್ಥಿತಿ ಗಂಭೀರವಾಗಲಿದೆ. 140-150 ಜನಪ್ರತಿನಿಧಿಗಳನ್ನು ಪಾರ್ಲಿಮೆಂಟಿನಿಂದ ಹೊರಹಾಕಿ ಶಾಸನಗಳನ್ನು ಪಾಸು ಮಾಡಲಾಗುತ್ತಿದೆ!

ದೇಶದ ರೈತ ಸಮುದಾಯವನ್ನು ಮತ್ತು ದೊಡ್ಡ ಪ್ರಮಾಣದ ಆರ್ಥಿಕ ವ್ಯವಸ್ಥೆಯನ್ನು ಪ್ರಭಾವಿಸುವ ಮೂರು ಕೃಷಿ ಕಾಯಿದೆಗಳನ್ನು ಪಾರ್ಲಿಮೆಂಟಿನಲ್ಲಿ ಚರ್ಚೆಯೇ ಇಲ್ಲದೆ ಪಾಸು ಮಾಡಲಾಯಿತು. ಭಾರೀ ರೈತ ಚಳವಳಿ ನಡೆಯಿತು. ಪ್ರತಿಭಟಿಸುವವರನ್ನು ದೇಶದ್ರೋಹಿಗಳೆಂದು ಬಣ್ಣಿಸಲಾಯಿತು. ಪಂಜಾಬ್ ಚುನಾವಣೆಗಳಿಗೆ ಮುನ್ನ ಈ ಕಾಯಿದೆಗಳನ್ನು ವಾಪಸು ಪಡೆಯಲಾಗಿದೆ ಎಂದು ಸಾರಲಾಯಿತು. ನಂತರ ಪಾರ್ಲಿಮೆಂಟಿನಲ್ಲಿ ಯಾವ ಚರ್ಚೆಯೂ ಇಲ್ಲದೆ ಈ ಕಾಯಿದೆಗಳನ್ನು ವಾಪಸು ಪಡೆಯಲಾಯಿತು. ಆರ್ಥಿಕ ಸಾಧಕಬಾಧಕಗಳನ್ನು ಹೊಂದಿದ ಕಾಯಿದೆಗಳನ್ನು ಚರ್ಚೆಯೇ ಇಲ್ಲದೆ ಪಾಸು ಮಾಡಲಾಗುತ್ತದೆ ಮತ್ತು ಹಿಂಪಡೆಯಲಾಗುತ್ತದೆ! ಜನಪ್ರತಿನಿಧಿಗಳ ದನಿ ಎಲ್ಲಿ ಕಳೆದು ಹೋಗಿದೆ? ಚರ್ಚೆಗೆ ಆಸ್ಪದವೇ ಇಲ್ಲ, ಈ ಸರ್ಕಾರ ಕೇಳಿಸಿಕೊಳ್ಳುವುದಿಲ್ಲ, ಮಾತಾಡುವುದೂ ಇಲ್ಲ. ನಾವು ಬದುಕಿರುವ ಹೊಸ ಭಾರತವಿದು.