ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “ಜಗದೀಶ್ ಶೆಟ್ಟರ್ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗಿದ್ದರೂ ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ” ಎಂದು ಬೇಸರದಿಂದ ನುಡಿದಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಅವಮಾನ ಆಯಿತು ಎಂದು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಬಳಿಕ ಟಿಕೆಟ್ ನೀಡಲಾಯಿತಾದರೂ 35 ಸಾವಿರ ಮತಗಳಿಂದ ಸೋತಿದ್ದರು. ಆದರೂ ಕೂಡ ಕಾಂಗ್ರೆಸ್ ಪಕ್ಷ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಗೌರವದಿಂದ ನಡೆಸಿಕೊಂಡಿದೆ. ಶೆಟ್ಟರ್ ಅವರನ್ನು ಒತ್ತಡದಿಂದ ಬಿಜೆಪಿಗೆ ಕರೆಸಿಕೊಂಡಿದ್ದಾರೋ ಏನೋ ಗೊತ್ತಿಲ್ಲ” ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರ: ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಏನು? pic.twitter.com/bWsK8KXLTY
— eedina.com (@eedinanews) January 25, 2024
“ಜಗದೀಶ್ ಶೆಟ್ಟರ್ ಅವರೊಂದಿಗೆ ನಿನ್ನೆ ಬೆಳಗ್ಗೆ ಕೂಡ ಇದೇ ವಿಚಾರವನ್ನು ಮಾತನಾಡಿದ್ದೆ. ಆಗ ನಾನು ಮತ್ತೆ ಬಿಜೆಪಿಗೆ ಹೋಗುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ಗೆ ದ್ರೋಹ ಬಗೆಯಲ್ಲ. ಯಾಕೆಂದರೆ ರಾಜಕಾರಣದಲ್ಲಿ ಸ್ಥಾನ ನೀಡುವ ಮೂಲಕ ನನಗೆ ಮರುಜೀವ ಕೊಟ್ಟಿದೆ. ಬಿಜೆಪಿಗೆ ಸೇರುವ ಕೆಲಸ ಮಾಡಲ್ಲ ಎಂದಿದ್ದರು. ಅದನ್ನೇ ನಿನ್ನೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಇವತ್ತು ನೋಡಿದರೆ ದೆಹಲಿಗೆ ಹೋಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಕೆಪಿಸಿಸಿ ಕಚೇರಿಯ ಮೂಲಕ ತಿಳಿಯಿತು” ಎಂದು ತಿಳಿಸಿದರು.
ಟಿಕೆಟ್ ತಪ್ಪಿಸಿದಾಗ ದೇಶದ ಹಿತ ಗೊತ್ತಿರಲಿಲ್ವಾ? ಡಿಕೆಶಿ ಪ್ರಶ್ನೆ
ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದಾಗ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದಾಗ ದೇಶದ ಹಿತ ಗೊತ್ತಿರಲಿಲ್ವಾ?” ಎಂದು ಡಿಕೆ ಶಿವಕುಮಾರ್ ಮರು ಪ್ರಶ್ನೆ ಹಾಕಿದರು.
ಇದನ್ನು ಓದಿದ್ದೀರಾ? ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು; ಮರಳಿ ಪಕ್ಷ ಸೇರಿದ್ದೇನೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್ಗೆ ಯಾವುದೇ ಅನ್ಯಾಯ ಆಗಿಲ್ಲ: ಸಿಎಂ ಸಿದ್ದರಾಮಯ್ಯ
ಮತ್ತೊಂದೆಡೆ ಸದ್ಯದ ರಾಜಕೀಯ ಬೆಳವಣಿಗೆಯ ವಿಚಾರದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, “ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್ಗೆ ಯಾವುದೇ ಅನ್ಯಾಯ ಆಗಿಲ್ಲ” ಎಂದು ತಿಳಿಸಿದ್ದಾರೆ.
“ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲ್ಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು. ಈಗ ಹೋಗಿದ್ದಾರೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಇದೇನು ಅನಿರೀಕ್ಷಿತ ಅಲ್ಲ, ಕೆಟ್ಟ ಮೇಲಾದರೂ
ನಿಮಗೆ ಬುದ್ಧಿ ಬರಲಿ.
ಧಾರವಾಡದ ಕೇಂದ್ರ ಸಚಿವರನ್ನು ಮತ್ತೊಮ್ಮೆ ಗೆಲ್ಲಿಸಲು ಜಗದೀಶ್ ಶೆಟ್ಟರ್ ಎರಡನೇ ಹಂತದ ಬಲಿ,,,ಪಕ್ಷ ಬಿಡುವಾಗ ಬೈದಾಡಿಕೊಂಡು ಈಗ ಹೋಗಿ ಮತ್ತೆ ಅವರು ಎದುರಿಗೇ ಅದ್ಹೇಗೆ ಕೂಡುವರೋ,,, ಕಾರ್ಯಕರ್ತರಿಗೆ ಕೆಟ್ಟ ಅನುಭವ,,, ಏನೋ ಭಯ ಇರಬಹುದು ಅಷ್ಟು ಅವಮಾನ ಅನುಭವಿಸಿಯೂ ಮತ್ತೆ ವಾಪಸ್ ಹೋಗುವುದೆಂದರೆ,,,