ಹಿಂದಿನ ಯುಪಿಎ ಸರ್ಕಾರಗಳು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡದಿರುವುದಕ್ಕೆ ಬಿಹಾರ್ ಸಿಎಂ ನಿತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ಪೂರಿ ಅವರ ಜನ್ಮ ಶತಮಾನೋತ್ಸವ ದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವಂತೆ ಹಿಂದಿನ ಯುಪಿಎ ಸರ್ಕಾರಗಳಿಗೆ ನಾನು ಹಲವು ಬಾರಿ ಮನವಿ ಮಾಡಿದ್ದೆ. ಆದರೆ ನನ್ನ ಮನವಿಗಳನ್ನು ಪರಿಗಣಿಸಲಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಂಶ ರಾಜಕಾರಣವನ್ನು ಟೀಕಿಸಿದ ನಿತೀಶ್ ಕುಮಾರ್, ಕರ್ಪೂರಿ ಠಾಕೂರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದರು.
“ಬಿಹಾರದಲ್ಲಿ ನಾವು 2005ರಿಂದ, ಅಧಿಕಾರಕ್ಕೆ ಬಂದ ದಿನದಿಂದ 2023ರವರೆಗೆ ಕೇಂದ್ರದಲ್ಲಿದ್ದ ಸರ್ಕಾರಗಳಿಗೆ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಮನವಿ ಮಾಡುತ್ತಲೇ ಬಂದಿದ್ದೇವೆ. ಅಂತಿಮವಾಗಿ ನರೇಂದ್ರ ಮೋದಿ ಸರ್ಕಾರ ನಮ್ಮ ಬೇಡಿಕೆಯನ್ನು ಪರಿಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಾನು ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಇಬ್ಬರಿಗೂ ಧನ್ಯವಾದ ಹೇಳುತ್ತೇನೆ” ಎಂದು ನಿತೀಶ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
“ಪ್ರಧಾನಿ ಅವರು ನನ್ನನ್ನು ಕರೆದಿದ್ದಾರೆ ಎಂದು ಕರ್ಪೂರಿ ಅವರ ಪುತ್ರ ರಾಮ್‌ನಾಥ್ ಠಾಕೂರ್ ಎಂದು ಹೇಳಿದ್ದರು. ಆದರೆ ಪ್ರಧಾನಿ ನನಗೆ ಕರೆ ಮಾಡಿಲ್ಲ. ಆದಾಗ್ಯೂ ಪ್ರಧಾನಿ ಅವರಿಗೆ ಮಾಧ್ಯಮಗಳ ಮೂಲಕ ನಾನು ಧನ್ಯವಾದ ಹೇಳುತ್ತೇನೆ. ನಾವು ಮಾಡಿರುವುದನ್ನು ಗಣನೆಗೆ ತೆಗೆದುಕೊಳ್ಳದೆ ಇದರ ಪ್ರತಿಫಲವನ್ನು ನೀವು ತೆಗೆದುಕೊಳ್ಳಬಹುದು” ಎಂದು ಬಿಹಾರ್ ಸಿಎಂ ವ್ಯಂಗ್ಯವಾಡಿದರು.
“ಇತ್ತೀಚಿನ ದಿನಗಳಲ್ಲಿ ಹಲವು ಜನರು ತಮ್ಮ ಕುಟುಂಬ ರಾಜಕಾರಣವನ್ನು ಹೆಚ್ಚು ಪೋಷಿಸುತ್ತಾರೆ. ಆದರೆ ಕರ್ಪೂರಿ ಠಾಕೂರ್ ತಮ್ಮ ಜೀವನದಲ್ಲಿ ಎಂದಿಗೂ ಇದನ್ನು ಮಾಡಲಿಲ್ಲ. ನಾನೂ ಕೂಡ ಕುಟುಂಬ ರಾಜಕಾರಣವನ್ನು ಪೋಷಿಸಿಲ್ಲ. ಬದಲಿಗೆ ಪಕ್ಷದ ಇತರರನ್ನು ಬೆಳೆಸುತ್ತಿದ್ದೇನೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ನಿಧನದ ನಂತರವೇ ಅವರ ಪುತ್ರ ರಾಮನಾಥ್ ಠಾಕೂರ್ ಅವರಿಗೆ ರಾಜಕೀಯವಾಗಿ ಆದ್ಯತೆ ನೀಡಿದ್ದೇನೆ” ಎಂದರು.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ಪ್ರದಾನ ಮಾಡಲಾಗಿದೆ. ಮಂಗಳವಾರ ಸಂಜೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಕರ್ಪೂರಿ ಠಾಕೂರ್ ಫೆಬ್ರವರಿ 17, 1988 ರಂದು ನಿಧನರಾದರು. ಅವರ ಮರಣದ 35 ವರ್ಷಗಳ ನಂತರ ಭಾರತ ರತ್ನ ಪ್ರಶಸ್ತಿ ಲಭಿಸಿದೆ.