ಉಡುಪಿಯಲ್ಲಿ ಜ.17ರಂದು ನಡೆದ ಪುತ್ತಿಗೆ ಶ್ರೀಗಳ ಪರ್ಯಾಯಯೋತ್ಸವ ಕಾರ್ಯಕ್ರಮಕ್ಕಾಗಿ ನಗರದಲ್ಲಿ ಹದಗೆಟ್ಟ ರಸ್ತೆಗಳಿಗೆ ಡಾಂಬರೀಕರಣ, ರಸ್ತೆ ಗುಂಡಿಗಳಿಗೆ ತೇಪೆ, ಚರಂಡಿ ನಿರ್ಮಾಣ ಕಾಮಗಾರಿಗಳು ನಡೆದಿದ್ದವು. ಅದರೆ, ಕಾಮಗಾರಿಗಳು ಕಳಪೆ ಗುಣಮಟ್ಟ ಮತ್ತು ಅವೈಜ್ಞಾನಿಕವಾಗಿ ನಡೆದಿವೆ ಎಂಧು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮ್ಮುಂಜೆ ಪೆಟ್ರೋಲ್ ಬಂಕ್ ಬಳಿ ಚರಂಡಿ ಕಾಮಗಾರಿ ನಡೆದಿದ್ದು, ಜಲ್ಲಿಗೆ ತಕ್ಕಷ್ಟು ಸಿಮೆಂಟ್ ಹಾಕಿಲ್ಲ. ಹೊಸ ಚರಂಡಿ ನಿರ್ಮಾಣ ಮಾಡಿದ ಸ್ಥಳಗಳಲ್ಲಿ ನೀರಿನ ಹರಿಯುತ್ತಿಲ್ಲ. ಇದೊಂದು ವ್ಯರ್ಥ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಜ್ಜರಕಾಡಿನಿಂದ ಬ್ರಹ್ಮಗಿರಿವರೆಗೆ ರಸ್ತೆ ವಿಭಾಜಕಕ್ಕೆ ಬಣ್ಣ ಬಳಿಯುವ ಕಾಮಗಾರಿಯು ನಡೆಯುತ್ತಿದೆ. ದೀರ್ಘ ಸಮಯ ಬಣ್ಣ ಬಾಳಿಕೆ ಬರಬೇಕೆಂದರೆ ವೈಜ್ಞಾನಿಕವಾಗಿ ಎರಡು ಹಂತದಲ್ಲಿ ಬಣ್ಣ ಬಳಿಯಬೇಕು. ಆದರೆ, ಇಲ್ಲಿ ಒಂದೇ ಹಂತದಲ್ಲಿ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ.
ಕಳಪೆ ಕಾಮಗಾರಿ ಬಗ್ಗೆ ಉಡುಪಿ ನಗರ ಸಭೆ ಮಾಜಿ ಸದಸ್ಯ ನಿತ್ಯಾನಂದ ಆಕ್ರೋಶ ವ್ಯಕ್ತಪಡಿಸಿದ್ದು, “ನಗರಸಭೆಯು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣ, ಚರಂಡಿ ವ್ಯವಸ್ಥೆ ಮಾಡುತ್ತಿದೆ. ಆದರೆ, ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಶಿಸಬೇಕು. ಮಾರುಥಿ ಮೀತಿಯಾ ರಸ್ತೆ, ಕಾಡುಬೆಟ್ಟು ರಸ್ತೆ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಕಳಪೆ ಗುಣಮಟ್ಟದ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.