ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿನ ವಾಣಿಜ್ಯ/ಸಾಂಸ್ಥಿಕ/ಬೃಹತ್ ತ್ಯಾಜ್ಯ ಉತ್ಪಾದಕರು ಪ್ರಕಟಣೆ ಹೊರಡಿಸಿದ 30 ದಿನಗಳೊಳಗೆ ನೋಟರೈಸ್ಡ್ ಪ್ರಮಾಣ ಪತ್ರ/ಅಫಿಡವಿಟ್ ಅನ್ನು ಭರ್ತಿ ಮಾಡಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಸಲ್ಲಿಸಬೇಕು. ಪ್ರಮಾಣಪತ್ರವನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ-4(3)ರ ಪ್ರಕಾರ, ಘನತ್ಯಾಜ್ಯ ನಿರ್ವಹಣಾ ಬೈ-ಲಾಗಳಲ್ಲಿ ಸೂಚಿಸಿರುವ ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ತ್ಯಾಜ್ಯ ಉತ್ಪಾದಕರು ಸುಂಕದ ರೂಪದಲ್ಲಿ ಪಾವತಿಸಬೇಕು. ಅಲ್ಲದೆ, ನಿಯಮ-15(ಎಫ್) ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ಸಂಗ್ರಹಿಸಬೇಕು. ಅದರಂತೆ, ಈ ಶುಲ್ಕವನ್ನು ಆಸ್ತಿ ತೆರಿಗೆ ಜೊತೆ ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಲೆಮರೆಸಿಕೊಂಡಿದ್ದ ಮೂವರು ರೌಡಿಶೀಟರ್ಗಳ ಬಂಧಿಸಿದ ಸಿಸಿಬಿ ಪೊಲೀಸರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರ ಕಲಂ 285ರಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ(ಸೇವಾ ಶುಲ್ಕ)ವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸುವ ಕುರಿತು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿನ ವಾಣಿಜ್ಯ/ಸಾಂಸ್ಥಿಕ/ಬೃಹತ್ ತ್ಯಾಜ್ಯ ಉತ್ಪಾದಕರು 30 ದಿನಗಳ ಒಳಗೆ ಪ್ರಮಾಣಪತ್ರವನ್ನು ಬೆಂಗಳೂರಿನ ವಸಂತನಗರದಲ್ಲಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಕಚೇರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.