- ಸತತ ಎರಡು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿರುವ ಕೆಕೆಆರ್ ತಂಡ
- 2 ಪಂದ್ಯ ಸೋತಿದ್ದರೂ ಮೂರನೇ ಪಂದ್ಯದಲ್ಲಿ ಪಂಜಾಬ್ ಮಣಿಸಿರುವ ಎಸ್‌ಆರ್‌ಹೆಚ್
ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿರುವ ಕೋಲ್ಕತಾ ನೈಟ್ರೈಡರ್ಸ್ ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಐಪಿಎಲ್ 16ನೇ ಆವೃತ್ತಿಯಲ್ಲಿ ನಾಲ್ಕನೇ ಪಂದ್ಯವಾಡುತ್ತಿರುವ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ಪಡೆ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದರೂ ನಂತರದ ಎರಡು ಪಂದ್ಯಗಳಲ್ಲಿ ಅಮೋಘವಾಗಿ ಗೆಲುವು ಪಡೆದಿದೆ. ಇದೇ ವಿಶ್ವಾಸದಲ್ಲಿ ಹ್ಯಾಟ್ರಿಕ್ ಜಯದ ವಿಶ್ವಾಸದಲ್ಲಿದೆ.
ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಏಡನ್ ಮಾರ್ಕ್ರಮ್ ಸಾರಥ್ಯದ ಸನ್ರೈಸರ್ಸ್ ಹೈದರಾಬಾದ್, ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್ ಜಯಗಳಿಸಿ ಗೆಲುವಿನ ಖಾತೆ ತೆರೆದಿತ್ತು. ಈಗ ಅದೇ ಜಯದ ಲಯ ಉಳಿಸಿಕೊಳ್ಳುವ ಗುರಿ ಎಸ್‌ಆರ್‌ಹೆಚ್ ಹೊಂದಿದೆ.
ಕೆಕೆಆರ್‌ನಲ್ಲಿ ಶಾರ್ದೂಲ್ ಠಾಕೂರ್ ಹಾಗೂ ರಿಂಕು ಸಿಂಗ್ ಫಿನಿಶರ್‌ಗಳ ಪಾತ್ರ ನಿಭಾಯಿಸುವ ಭರವಸೆ ಮೂಡಿಸಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜೇಸನ್ ರಾಯ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸ್ಪಿನ್ ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ಫಾರ್ಮ್‌ನಲ್ಲಿರುವುದರಿಂದ ಕೆಕೆಆರ್ ಬಲ ಹೆಚ್ಚಿಸಿದೆ.
ಕೆಕೆಆರ್ ಈ ಆವೃತ್ತಿಯಲ್ಲಿ ಪವರ್ ಪ್ಲೇನಲ್ಲಿ ಕೇವಲ 6.6ರ ರನ್‌ರೇಟ್‌ನಲ್ಲಿ ರನ್ ಕಲೆಹಾಕಿದರೂ, ಕೊನೆ 5 ಓವರ್‌ಗಳಲ್ಲಿ 11.3 ರನ್‌ರೇಟ್ ಹೊಂದಿದೆ.
ಮತ್ತೊಂದೆಡೆ ಸನ್ರೈಸರ್ಸ್ ಹೈದರಾಬಾದ್ ಟೀಂ ವರ್ಕ್‌ನೊಂದಿಗೆ ಕಣಕ್ಕಿಳಿದರೆ, ಯಾವ ತಂಡಕ್ಕೂ ಬೇಕಾದರೂ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ರಾಹುಲ್ ತ್ರಿಪಾಠಿ, ಮಾರ್ಕ್ರಮ್, ಹ್ಯಾರಿ ಬ್ರೂಕ್ ಎಸ್‌ಆರ್‌ಹೆಚ್ ಬ್ಯಾಟಿಂಗ್‌ನ ಶಕ್ತಿ. ಭುವನೇಶ್ವರ್, ನಟರಾಜನ್‌ಗೆ ಅಂತಿಮ ಓವರ್‌ಗಳ ಜವಾಬ್ದಾರಿ ನೀಡಿ ಮಾರ್ಕೊ ಯಾನ್ಸನ್‌ರನ್ನು ಪವರ್-ಪ್ಲೇನಲ್ಲಿ ಬಳಸಿದರೆ ಎದುರಾಳಿ ತಂಡಕ್ಕೆ ಪೆಟ್ಟು ನೀಡಬಹುದು. ಈ ಪಂದ್ಯದಲ್ಲಿ ಆದಿಲ್ ರಶೀದ್‌ರ ಬದಲು ವೇಗಿ ಫಜಲ್‌ಹಕ್ ಫಾರೂಕಿಯನ್ನು ಆಡಿಸುವ ಸಾಧ್ಯತೆಯಿದೆ.
ಸನ್‌ರೈಸರ್ಸ್ ಪವರ್-ಪ್ಲೇನಲ್ಲಿ ಕೇವಲ 5.8 ರನ್‌ರೇಟ್ ಹೊಂದಿದ್ದು, ಅಂತಿಮ ಓವರ್‌ಗಳಲ್ಲಿ 9.0 ರನ್‌ರೇಟ್‌ನಲ್ಲಿ ರನ್ ಗಳಿಸಿದೆ.
ಪಿಚ್ ರಿಪೋರ್ಚ್
ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟ್ಸ್ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಪಂದ್ಯದಲ್ಲೂ ದೊಡ್ಡ ಮೊತ್ತ ದಾಖಲಾಗಬಹುದು. ಸ್ಪಿನ್ನರ್‌ಗಳಿಗೂ ಉಪಯುಕ್ತವಾಗುವುದರಿಂದ ತಂಡಗಳು ಹತ್ತು ಓವರ್‌ಗಳ ನಂತರ ಎಷ್ಟು ಪರಿಣಾಮಕಾರಿಯಾಗಲಿವೆ ಎನ್ನುವುದು ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ.
ಒಟ್ಟು ಮುಖಾಮುಖಿ: 23
ಕೆಕೆಆರ್: 15
ಸನ್ರೈಸರ್ಸ್: 08
ಸಂಭವನೀಯ ಆಟಗಾರರ ಪಟ್ಟಿ
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ಎನ್ ಜಗದೀಶನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫಗ್ರ್ಯೂಸನ್, ವರುಣ್ ಚಕ್ರವರ್ತಿ.
ಸನ್ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್‌ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್(ನಾಯಕ), ಹೆನ್ರಿಚ್ ಕ್ಲಾಸೆನ್, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸನ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ