ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿರ್ಮೂಲನಾ ಆಂದೋಲನ ಹಾಗೂ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಗದಗ ನಗರದ ಹಳೆ ಜಿಲ್ಲಾಸ್ಪತ್ರೆಯ ಡ್ಯಾಪ್ಕ್ಯೂ ಕಚೇರಿಯಲ್ಲಿ ಬುಧವಾರ(ಜ.24) ಹಮ್ಮಿಕೊಳ್ಳಲಾಗಿತ್ತು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ (ಪಿಪಿಟಿಸಿಟಿ ಕೇಂದ್ರ) ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಡಾ. ಅರುಂಧತಿ ಕುಲಕರ್ಣಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಡಾ. ಅರುಂಧತಿ ಕುಲಕರ್ಣಿ, “ಪ್ರತಿಯೊಬ್ಬ ಗರ್ಭಿಣಿಯು ಆರೋಗ್ಯಯುತ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ಎಚ್.ಐ.ವಿ ಮುಕ್ತ ಮಗುವನ್ನು ಪಡೆಯಲು ಎಚ್.ಐ.ವಿ. ಕಾಯಿಲೆಯ ಮಾಹಿತಿ ಪಡೆದು ಎಲ್ಲ ಗರ್ಭಿಣಿಯರು ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು. 40 ಜನಗರ್ಭಿಣಿಯರಿಗೆ ಊಡಿ ತುಂಬಿ ಸೀಮಂತ ಮಾಡಿದರು.
ಪ್ರತಿಯೊಬ್ಬ ಗರ್ಭಿಣಿಯು ಪ್ರತಿ ತ್ರೈಮಾಸಿಕದಲ್ಲಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಲು ತಿಳಿಸಿದರು. ಪ್ರತಿದಿನ ಯೋಗ ವ್ಯಾಯಾಮ ಮಾಡುತ್ತ ಚಟುವಟಿಕೆಯಿಂದ ಇರಲು ತಿಳಿಸಿದರು. ಎಚ್.ಐ.ವಿ ಏಡ್ಸ್ ಕಾಯ್ದೆ ಜಾರಿಯಾಗಿದ್ದು, ಎಚ್.ಐ.ವಿ.ಯೊಂದಿಗೆ ಬದುಕುತ್ತಿರುವ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಎಚ್.ಐ.ವಿ ಸಂಬಂಧಿತ ತಾರತಮ್ಯದ ವಿರುಧ್ಧ ಕಾನೂನಿನ ರಕ್ಷಣೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ಮಾತನಾಡಿ, ಎಚ್.ಐ.ವಿ ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯಗತಗೊಂಡಿದ್ದು, ಎಚ್.ಐ.ವಿ ಸೋಂಕಿತ ಗರ್ಭಿಣಿಯಿಂದ ಹುಟ್ಟಿದ ಮಕ್ಕಳು ಎಚ್.ಐ.ವಿ.ಯಿಂದ ಮುಕ್ತವಾಗಿದ್ದು ಉತ್ತಮ ಪ್ರಗತಿಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ನಮ್ಮ ಜಿಲ್ಲೆಯು ಎಚ್.ಐ.ವಿ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಎಚ್.ಐವಿ ಸೋಂಕಿನ ಪ್ರಮಾಣ 0.03% ಇದ್ದು, ಎಚ್.ಐ.ವಿ. ಸೋಂಕನ್ನು ಸೊನ್ನೆಗೆತರಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ತಿಳಿಸಿದರು.
ತಾಯಿಯಿಂದ ಮಗುವಿಗೆ ಎಚ್.ಐ.ವಿ ಸೋಂಕಿನ ನಿರ್ಮೂಲನೆಗಾಗಿ, ಹೆಪಟೆಟಿಸ್ ಹಾಗೂ ಸಿಫಿಲಿಸ್ ನಿರ್ಮೂಲನೆಗಾಗಿ ಗರ್ಭಿಣಿಯರಿಗೆ ಈ ಮೂರು ರೋಗಗಳ ತಪಾಸಣೆ ಮಾಡಿ, ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುವುದರ ಮುಖಾಂತರ ಜಾಗೃತಿಯನ್ನು ಮೂಡಿಸಲಾಯಿತು.
ಎಚ್‍ಐವಿ ಸೋಂಕಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿದರು. ಯೋಜನೆಗಳಾದ ಅನ್ನ ಅಂತ್ಯೋದಯ ಯೋಜನೆ, ವಿಶೇಷ ಪಾಲನಾ ಯೋಜನೆ, ವಸತಿ ಸೌಲಭ್ಯ, ಧನಶ್ರೀ ಯೋಜನೆ, ಚೇತನಾಯೋಜನೆ, ಮೈತ್ರಿ ಯೋಜನೆ, ಉಚಿತ ಕಾನೂನು ಸೇವೆ ಹಾಗೂ ಮೂಲಭೂತ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಮಹೇಶ ಕೊಪ್ಪಳ, ಶ್ರೀಮತಿ ಚವಡಿ ಮೇಲ್ವಿಚಾರಕರು ನಗರ ಆರೋಗ್ಯ ಕೇಂದ್ರ, ಶ್ರೀಮತಿ ಮುರ್ನಾಳ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ಅನುಸೂಯಾ ಟಂಕಸಾಲಿ ಪ್ರಾರ್ಥಿಸಿದರು, ಚೆನ್ನಮ್ಮ ಸ್ವಾಗತಿಸಿದರು, ರೇಣುಕಾ ವಂದಿಸಿದರು.