ರಸ್ತೆ ಬದಿಯಲ್ಲಿ ನಿಂತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಕಾರು ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತಂಬರಮಟ್ಟಿ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದ ಮಲ್ಲು ಪೂಜಾರಿ (24), ಕಲ್ಲಪ್ಪ ಕೌಟಗಿ, (34), ಕಾಮಾಕ್ಷಿ ಬಡಿಗೇರ (35), ತುಕಾರಾಮ್ ತಳೇವಾಡ (30) ಎಂದು ಗುರುತಿಸಲಾಗಿದೆ.
ಬಾದಾಮಿಗೆ ತೆರಳಿದ್ದ ನಾಲ್ವರು ಶುಕ್ರವಾರ ಮುಂಜಾನೆ ಮರಳಿ ತಮ್ಮೂರಿಗೆ ತೆರಳುತ್ತಿದ್ದರು. ಈ ವೇಳೆ, ತಂಬರಮಟ್ಟಿ ಕ್ರಾಸ್ ಬಳಿಯ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಸ್ಥಳದಲ್ಲೇ ನಾಲ್ವರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಮೂಲಕ ಕಬ್ಬು ತೆರವುಗೊಳಿಸಿ ಕಾರು ಹೊರತೆಗೆಯಲಾಗಿದ್ದು, ಮೃತದೇಹಗಳನ್ನು ಬೀಳಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.