ಮೈಸೂರಿನ ಆನೆ ಲಾಯವೆಲ್ಲಿ ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೋ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಮೈಸೂರ್ ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ. ಕಾವಾಡಿಗರ ಹಟ್ಟಿಯಲ್ಲಿದ್ದ ಅನಾಥ ಬಾಲಕ ಹಾಲಿವುಡ್ ಅಂಗಳಕ್ಕೆ ಜಿಗಿದ, ಜನಪ್ರಿಯ ನಟನಾದ ಮೈಸೂರ್ ಸಾಬು ಜನಿಸಿ ಇಂದಿಗೆ ನೂರು ವರ್ಷಗಳಾದವು. ಕಾವಾಡಿಗರ ಕೂಸಿನ ಕುತೂಹಲಕರ ಕಥನವಿದು…
ಹಾಲಿವುಡ್ ಮತ್ತು ಇಂಗ್ಲೆಂಡ್ ನ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ ಮೊದಲ ಭಾರತ ಕಲಾವಿದ ಹುಟ್ಟಿ ನೂರು ವರ್ಷಗಳಾದವು. ಈ ಪಟ್ಟಕ್ಕೇರಿದ ಮೊದಲ ಮೈಸೂರು ಕಲಾವಿದನ ಬದುಕು ತಿಪ್ಪೆಯಿಂದ ಉಪ್ಪರಿಗೆಗೆ ಏರಿದ ಒಂದು ಅದ್ಭುತಯಾನ. ಅದು ಕಡು ಬಡತನದಿಂದ ಸಿರಿಯ ಭಂಡಾರಕ್ಕೆ ಲಗ್ಗೆ ಹಾಕಿದ ಸಾಹಸ ಯಾತ್ರೆ. ಸಿನೆಮಾ ಜಗತ್ತು ಮಾತ್ರವೇ ಸೃಷ್ಟಿಸಬಹುದಾದ ಪವಾಡಕ್ಕೊಂದು ದೊಡ್ಡ ಉದಾಹರಣೆ.
ಅಮೇರಿಕಾದ ಸಾಕ್ಷ್ಯ ಕಥಾ ಚಿತ್ರಗಳ ಪಿತಾಮಹ ರಾಬರ್ಟ್ ಫ್ಲಾಹರ್ಟಿ ಮತ್ತು ಇಂಗ್ಲೆಂಡ್ ನ ಚಿತ್ರ ನಿರ್ಮಾಪಕ ಸರ್ ಅಲೆಕ್ಸಾಂಡರ್ ಕೊರ್ಡಾಅವರ ಪ್ರಯತ್ನದಿಂದ ಇಂತಹ ಅದ್ಭುತ ವಿದ್ಯಮಾನ ಸಂಭವಿಸಿತು. ಈ ಕಲಾವಿದನೆ ಎಂದೂ ಮರೆಯಲಾಗದ ಸಾಬು ದಸ್ತಗೀರ್ ಅಥವಾ ಮೈಸೂರ್ ಸಾಬು.
ಸಾಕ್ಷ್ಯ ಕಥಾ ಚಿತ್ರಗಳ ಪಿತಾಮಹ ಎಂದೇ ಹೆಸರಾದ ರಾಬರ್ಟ್ ಫ್ಲಾಹರ್ಟಿ ಅವರು ʼನ್ಯಾನೂಕ್ ಆಫ್ ದಿ ನಾರ್ತ್ʼ (1922) ಮತ್ತು ʼಮ್ಯಾನ್ ಆಫ್ ಆರನ್ʼ (1934) ಎಂಬ ಎರಡು ಮಾನವ ಸಾಹಸ ಬದುಕಿನ ಸಾಕ್ಷ್ಯ ಕಥಾಚಿತ್ರಗಳನ್ನು ಮಾಡಿ ಜಗತ್ ಪ್ರಸಿದ್ಧಿ ಪಡೆದಿದ್ದ ಕಾಲ. ಅದೇ ಕಾಲದಲ್ಲಿ ಅಂದಿನ ಯಶಸ್ವಿ ಚಿತ್ರನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಇಂಗ್ಲೆಂಡಿನ ಸರ್ ಅಲೆಕ್ಸಾಂಡರ್ ಕೊರ್ಡಾ ಅವರು ಫ್ಲಾಹರ್ಟಿ ಅವರ ನಿರ್ದೇಶನದಲ್ಲಿ ಮನುಷ್ಯಬದುಕಿನ ಸಾಹಸದ ಅದೇ ಮಾದರಿಯ ಚಿತ್ರವೊಂದನ್ನು ನಿರ್ಮಿಸಲು ಮುಂದೆ ಬಂದರು. ಭಾರತದಲ್ಲಿ ಆನೆ ಮತ್ತು ಬಾಲಕನ ನಡುವಿನ ಸಂಬಂಧಗಳ ಕತೆಯಿರುವ ಚಿತ್ರ ನಿರ್ಮಾಣದತ್ತ ಒಲವು ತೋರಿದರು. ಅದಕ್ಕಾಗಿ ಅವರು ರುಡ್ಯಾರ್ಡ್ ಕಿಪ್ಲಿಂಗ್ ಅವರ ’ಟೂಮೈ ಆಫ್ ದಿ ಎಲಿಫ್ಯಾಂಟ್ಸ್’ ಸಣ್ಣಕತೆಯನ್ನು ಆರಿಸಿಕೊಂಡರು. ಭಾರತದ ದಟ್ಟಾರಣ್ಯಗಳ ಹಿನ್ನೆಲೆಯಲ್ಲಿ ಯೂರೋಪ್ ಅಮೆರಿಕದಲ್ಲಿ ಅಪರಿಚಿತವಾದ ಆನೆಯ ಒಡನಾಟದ ಮತ್ತು ಸಾಹಸದ ಕಥೆಯು ಅಲ್ಲಿನ ಪ್ರೇಕ್ಷಕರನ್ನು ಸೆಳೆಯುತ್ತವೆಂಬ ನಂಬಿಕೆ ಇತ್ತು. ಕಿಪ್ಲಿಂಗ್ ಕಥೆಯನ್ನು ಆಧರಿಸಿ ಚಿತ್ರಕತೆಯನ್ನು ರೂಪಿಸಲು ಫ್ಲಾಹರ್ಟಿಗೆ ಸಲಹೆ ಮಾಡಿದ ಕೊರ್ಡಾ ಅವರು ಚಿತ್ರೀಕರಣದ ತಂಡದೊಡನೆ ಮುಂಬಯಿಗೆ ಬಂದರು. ಮೊದಲು ಅಸ್ಸಾಂನ ಅರಣ್ಯಗಳಲ್ಲಿ ಚಿತ್ರೀಕರಿಸುವ ಯೋಜನೆಯಿತ್ತು. ಇವರ ಯೋಜನೆಯರಿತ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ತಮ್ಮ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಆಹ್ವಾನ ನೀಡಿದರು. ಅದರಂತೆ ಹೆಂಡತಿಯ ಜೊತೆ ಬಂದಿದ್ದ ಫ್ಲಾಹರ್ಟಿ ಮತ್ತು ಚಿತ್ರೀಕರಣ ತಂಡ 1935 ಮೇ ತಿಂಗಳಲ್ಲಿ ಮೈಸೂರಿಗೆ ಆಗಮಿಸಿತು.
ಅಂದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿತ್ರತಂಡಕ್ಕೆ ಚಿತ್ರರಂಜನ್ ಅರಮನೆಯಲ್ಲಿ ಆಶ್ರಯ ನೀಡಿದ್ದಲ್ಲದೆ ಚಿತ್ರೀಕರಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿದರು. ಚಿತ್ರದ ಆರಂಭದ ಶೀರ್ಷಿಕೆಗಳಲ್ಲಿ ಮೈಸೂರು ಅರಸರನ್ನು ಕೊರ್ಡಾ ನೆನೆದಿದ್ದಾರೆ. ಚಿತ್ರೀಕರಣದ ಸ್ಥಳಗಳನ್ನು ಹುಡುಕಿ ನಿರ್ಧರಿಸಿದ ಮೇಲೆ ಹತ್ತರಿಂದ ಹದಿನೈದು ತಿಂಗಳಕಾಲ ಚಿತ್ರೀಕರಣ ನಡೆಸಬೇಕಾಗುತ್ತದೆಂದು ಫ್ಲಾಹರ್ಟಿ ಅಂದಾಜಿಸಿದ್ದರು. ಆದರೆ ಮುಖ್ಯವಾಗಿ ಅವರಿಗೆ ಕಥೆಯ ನಾಯಕ ಬಾಲಕ ಟೂಮೈ ಪಾತ್ರಕ್ಕೆ ಕಲಾವಿದನನ್ನು ಹುಡುಕಲು ಸಮಯವೇ ಹಿಡಿಯಿತು. ಆನೆಯ ಜೊತೆ ಧೈರ್ಯವಾಗಿ ಒಡನಾಡಬಲ್ಲ ಮುಗ್ಧಮುಖದ ಬಾಲಕನೊಬ್ಬ ಅವರಿಗೆ ಬೇಕಾಗಿತ್ತು. ಎರಡು ತಿಂಗಳ ಹುಡುಕಾಟದಲ್ಲಿ ಮಹಾರಾಜರ ಆನೆಯ ಲಾಯದಲ್ಲಿದ್ದ ಮಾವುತನ ತಬ್ಬಲಿ ಮಗ, ‘ಸಾಬು’ ಎಂಬ ಹನ್ನೆರಡು ವರ್ಷದ ಹುಡುಗ ಕ್ಯಾಮೆರಾಮನ್ ಓಸ್ಮಾಂಡ್ ಬೊರಡೈಲಿ ಅವರ ಕಣ್ಣಿಗೆ ಬಿದ್ದ. ಮಹಾರಾಜರ ಆನೆಯ ಲಾಯದಲ್ಲಿ ಆತ ಆನೆಗಳ ಜೊತೆ ಸರಸದಿಂದ ಇದ್ದದ್ದು ಬೊರಡೈಲಿಯ ಗಮನ ಸೆಳೆಯಿತು. ಆತನ ಸಲಹೆಯಂತೆ ಬಂದು ನೋಡಿದ ಫ್ಲಾಹರ್ಟಿ ತಮ್ಮ ನಾಯಕ ದೊರೆತನೆಂದು ಘೋಷಿಸಿದರು. ಬಾಲಕನ ಜೀವನ ಕಥೆಯೂ ಕಥಾ ನಾಯಕ ಟೂಮೈನ ಕತೆಗೂ ಹೋಲಿಕೆ ಇದ್ದ ಕಾರಣ ಚಿತ್ರದ ಕತೆಗೆ ಬಾಲಕನ ನಿಜ ಜೀವನದ ಕೆಲ ಘಟನೆಗಳನ್ನು ಫ್ಲಾಹರ್ಟಿ ಹೆಣೆದರು.
ಇದನ್ನು ಓದಿದ್ದೀರಾ?: ಪರಕಾಲ ಪ್ರಭಾಕರ್ ಸಂದರ್ಶನ ಭಾಗ-2: ಬಲಿಷ್ಠರು, ಬಹುಸಂಖ್ಯಾತರನ್ನು ಮೇಲಿಟ್ಟು, ಉಳಿದವರನ್ನು ಅವರ ಮುಂದೆ ಕೈಚಾಚಿ ನಿಲ್ಲಿಸಲಾಗುತ್ತಿದೆ
ಮೈಸೂರಿನ ಹೆಗ್ಗಡದೇವನಕೋಟೆ ಮತ್ತು ಕಾಕನ ಕೋಟೆಯ ದಟ್ಟಾರಣ್ಯಗಳಲ್ಲಿ ಸುಮಾರು ಒಂದು ವರ್ಷ ಕಾಲ ಫ್ಲಾಹರ್ಟಿ ಚಿತ್ರೀಕರಣ ಮಾಡಿದರು. ಮಳೆಗಾಲದಲ್ಲಿ ಚಿತ್ರೀಕರಣ ನಿಲ್ಲಿಸಿದುದನ್ನು ಹೊರತುಪಡಿಸಿದರೆ ಸತತವಾಗಿ ತೊಡಗಿಸಿಕೊಂಡ ತಂಡ ಕೊನೆಗೂ 1936 ಜೂನ್ ತಿಂಗಳಲ್ಲಿ ಚಿತ್ರೀಕರಣ ಮುಗಿಸಿತು. ಸಿನಿಮಾದ ಅತಿ ಮುಖ್ಯ ಭಾಗವಾದ ಮೈ ನವಿರೇಳುವ ಆನೆ ಹಿಡಿಯುವ ಖೆಡ್ಡಾ ದೃಶ್ಯಗಳನ್ನು ನಿಜವಾದ ಕಾರ್ಯಾಚರಣೆ ಮಾಡಿಯೇ ಸೆರೆಹಿಡಿಯಲಾಯಿತು. ಅದಕ್ಕಾಗಿ 1,100 ಸ್ಥಳೀಯ ಸಿಬ್ಬಂದಿ, ಖೆಡ್ಡಾ ಆವರಣದೆಡೆಗೆ ಆನೆಗಳನ್ನು ಓಡಿಸಲು ತಮಟೆ ಬಾರಿಸುವ, ಹಿಲಾಲು ಹಿಡಿದು ಗದ್ದಲವೆಬ್ಬಿಸುವ ಇನ್ನೂರು ಮಂದಿ, ಆನೆಗಳನ್ನು ನದಿ ದಾಟಿಸಿ ಖೆಡ್ಡಾಗೆ ಕೂಡಲು ಮಾವುತರಿದ್ದ 36 ಪಳಗಿದ ಆನೆಗಳನ್ನು ಬಳಸಿದ್ದರು. ಆನೆ ಕೂಡುವ ಖೆಡ್ಡಾ ಆವರಣವನ್ನು ಸುಮಾರು ಹತ್ತು ಸಾವಿರ ಮರದ ದಿಮ್ಮಿಗಳನ್ನು ನೆಟ್ಟು ಹದಿನೈದು ದಿವಸದಲ್ಲಿ ನಿರ್ಮಿಸಿದ್ದರು. ಮೈಸೂರು ಜಿಲ್ಲೆಯಲ್ಲಿ ಆವರೆವಿಗೂ ದಾಖಲೆ ಎನಿಸಿದ 80 ಆನೆಗಳನ್ನು ಈ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. ಜೊತೆಗೆ ಕೊರ್ಡಾ ಸೋದರ ಮತ್ತು ಸಹ ನಿರ್ಮಾಪಕ ಜೊಲ್ಟಾನ್ ಕೊರ್ಡಾ ಅವರು ಚಿತ್ರತಂಡದ ಎರಡನೇ ಘಟಕವೊಂದನ್ನು ರಚಿಸಿ ಅದೇ ವೇಳೆಯಲ್ಲಿ ಬೇರೆ ಬೇರೆ ಕಡೆ ಹಲವು ದೃಶ್ಯಗಳನ್ನು ಚಿತ್ರೀಕರಿಸಿದರು.

ಮೈಸೂರಿನಲ್ಲಿ ಚಿತ್ರೀಕರಣ ಮುಗಿವ ವೇಳೆಗೆ ಮೂರು ಲಕ್ಷ ಅಡಿಯಷ್ಟು ಫಿಲಂ ಬಳಸಿದ್ದರು. ಚಿತ್ರೀಕರಣಕ್ಕೆ ಆದ ವೆಚ್ಚ ಕಂಡು ಕೊರ್ಡಾಗೆ ಚಿಂತೆ ಶುರುವಾಗಿತ್ತು. ಫ್ಲಾಹರ್ಟಿಯವರನ್ನು ಬಜೆಟ್ ಮಿತಿಗೆ ಕಟ್ಟಿಹಾಕುವುದು ಸಾಧ್ಯವಿಲ್ಲವೆಂಬುದು ತಿಳಿದಿದ್ದರೂ ಅಂದಾಜಿಸಿದ ಮೂಲ ಮೊತ್ತ ಮೂವತ್ತು ಸಾವಿರಕ್ಕೆ ಬದಲು ತೊಂಬತ್ತು ಸಾವಿರ ಪೌಂಡ್ ಖರ್ಚಾಗಿತ್ತು. ಜೊತೆಗೆ ಫ್ಲಾಹರ್ಟಿ ಅವರ ಮೂಲ ಯೋಜನೆಯಂತೆ ಚಿತ್ರ ಮೂಡಿಬಂದಲ್ಲಿ ಯಶಸ್ಸು ಖಾತ್ರಿಯಾಗದೆಂದು ಭಾವಿಸಿ ಜಾನ್ ಕೊಲಿಯರ್ ಎಂಬ ಕತೆಗಾರನಿಂದ ಭಾರತದಲ್ಲಿ ಚಿತ್ರೀಕರಣಗೊಂಡ ಭಾಗಕ್ಕೆ ಪೂರಕವಾಗಿ ಹೆಚ್ಚುವರಿ ಭಾಗವನ್ನು ಅಳವಡಿಸಿ ಕತೆಯನ್ನು ವಿಸ್ತರಿಸಿದರು; ಅದಕ್ಕೆ ಅಗತ್ಯವಾದ ಚಿತ್ರೀಕರಣವನ್ನು ಲಂಡನ್ನಿನ ಡೆನ್‌ಹ್ಯಾಂ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಿಸಲು ಸೋದರ ಜೋಲ್ಟಾನ್ ಕೊರ್ಡಾನನ್ನು ಕಳುಹಿಸಿಕೊಟ್ಟರು. ಬಾಲಕ ಸಾಬು ತನ್ನ ಅಣ್ಣನ ಜೊತೆ ಉಳಿದ ಚಿತ್ರೀಕರಣಕ್ಕೆ ಲಂಡನ್‌ಗೆ ಆಗಮಿಸಿದ. ಈ ಬೆಳವಣಿಗೆಯಿಂದ ಬೇಸತ್ತ ಫ್ಲಾಹರ್ಟಿ ಅವರು ಮುನಿಸಿಕೊಂಡು ಚಿತ್ರೀಕರಣದ ನಂತರದ ಚಿತ್ರನಿರ್ಮಾಣ ಕಾರ್ಯಕ್ಕೆ ತಲೆಹಾಕಲಿಲ್ಲ.
ಅರಣ್ಯ ಸಾಹಸದ ಈ ಚಿತ್ರದ ಕತೆ ಕೆಲವು ಜಾನಪದ ಅಂಶಗಳನ್ನೊಳಗೊಂಡಿದ್ದರೂ ದೇಸೀ ಜಾನಪದ ಕತೆಗಳಷ್ಟೂ ರಮ್ಯವಾಗಿಲ್ಲ, ತೀರಾ ಸರಳ. ನಾಲ್ಕು ತಲೆಮಾರಿನಿಂದಲೂ ಕುಟುಂಬದ ಜೊತೆ ಇರುವ ಕಾಳನಾಗ ಎಂಬ ಆನೆಯ ಸಂಗಾತಿಯಾಗಿರುವ, ತಾಯಿಯಿಲ್ಲದ ಮಾವುತನ ಮಗ ಟೂಮೈ ಎಂಬ ಬಾಲಕನಿಗೆ ಬೇಟೆಗಾರನಾಗಬೇಕೆಂಬ ಹುಚ್ಚು. ಆನೆಗಳನ್ನು ಹಿಡಿವ ಕಾರ್ಯಾಚರಣೆಗೆ ಮೈಸೂರು ಸರ್ಕಾರದಿಂದ ನೇಮಕವಾದ ಪೀಟರ್ಸನ್ (ಕರ್ನಾಟಕದಲ್ಲಿ ಖೆಡ್ಡಾ ಕಾರ್ಯಾಚರಣೆ ರೂಪಿಸಿದ ’ನೀರು ತೋಟಿ’ ಸ್ಯಾಂಡರ್ಸನ್ ಹೋಲಿಕೆ) ತನ್ನ ತಂಡಕ್ಕೆ ಕಾಳನಾಗ, ಟೂಮೈ ಮತ್ತು ಅವನ ತಂದೆ ಮಾವುತ ಸೇರಿಕೊಳ್ಳುತ್ತಾರೆ. ಇತ್ತ ದೀರ್ಘ ಸಮಯವಾದರೂ ಆನೆಗಳು ಕಾಡಿನಲ್ಲಿ ಪತ್ತೆಯಾಗುವುದಿಲ್ಲ. ಬೇಟೆಗಾರನಾಗಬೇಕೆಂಬ ಟೂಮೈ ಆಸೆಯನ್ನು ಕೇಳಿದ ಜೊತೆಗಾರರು ಗೇಲಿ ಮಾಡುತ್ತಾರೆ. ಆನೆಗಳು ನರ್ತನ ಮಾಡಿದ ದಿನ ನೀನು ಬೇಟೆಗಾರನಾಗುತ್ತೀಯೆಂದು ಅಣಕಿಸುತ್ತಾರೆ.
ಒಂದು ರಾತ್ರಿ ತಂಡ ತಂಗಿರುವ ಶಿಬಿರದ ಮೇಲೆ ಹೊಂಚು ಹಾಕಿದ ಹುಲಿಯನ್ನು ನೋಡಿ ಪೀಟರ್ಸನ್ ಜೊತೆ ಅದನ್ನು ಬೆನ್ನಟ್ಟಿದ ಟೂಮೈನ ಅಪ್ಪ ಸಾಯುತ್ತಾನೆ. ಒಡೆಯನ ಸಾವಿನಿಂದ ರೋಷಗೊಂಡ ಆನೆ ಶಿಬಿರದ ಮೇಲೆ ದಾಳಿ ಮಾಡುತ್ತದೆ. ಟೂಮೈ ಅದನ್ನು ಸಂತೈಸುತ್ತಾನೆ. ಟೂಮೈ ಇನ್ನೂ ಬಾಲಕನಾದ್ದರಿಂದ ಕಾಳನಾಗನನ್ನು ರಾಮಲಾಲ್ ಎಂಬ ಮಾವುತನ ವಶಕ್ಕೆ ಕೊಡುತ್ತಾರೆ. ಅವನ ಹಿಂಸೆ ತಾಳಲಾರದ ಆನೆ ಅವನನ್ನು ಘಾಸಿಗೊಳಿಸುತ್ತದೆ. ಅದನ್ನು ಕೊಲ್ಲುವುದೇ ಉಳಿದಿರುವ ಮಾರ್ಗ ಎಂಬ ತೀರ್ಮಾನಕ್ಕೆ ಬರುತ್ತಾರೆ. ಪೀಟರ್ಸನ್ ಒಪ್ಪುವುದಿಲ್ಲ. ಒಂದು ರಾತ್ರಿ ಟೂಮೈ ಕಾಳನಾಗನನ್ನು ಕರೆದುಕೊಂಡು ಕಾಡಿನೊಳಕ್ಕೆ ತಪ್ಪಿಸಿಕೊಳ್ಳುತ್ತಾನೆ. ಹಾದಿಯಲ್ಲಿ ಆವರೆವಿಗೂ ಕಾಣಿಸಿಕೊಳ್ಳದ, ನರ್ತಿಸುವ ಆನೆಗಳ ಹಿಂಡು ಸಿಗುತ್ತದೆ, ಕಾಳನಾಗನನ್ನು ಕೊಲ್ಲುವುದಿಲ್ಲವೆಂದು ತಿಳಿದ ಮೇಲೆ, ಟೂಮೈ ಪೀಟರ್ಸನ್‌ಗೆ ಆನೆಗಳಿರುವ ಹಿಂಡನ್ನು ತೋರುತ್ತಾನೆ. ಖೆಡ್ಡಾ ಕಾರ್ಯಾಚರಣೆ ನಡೆಸಿ ಆನೆಗಳನ್ನು ಹಿಡಿದ ನಂತರ ಪೀಟರ್ಸನ್ ಟೂಮೈನನ್ನು ಇನ್ನಿಲ್ಲದಂತೆ ಕೊಂಡಾಡುತ್ತಾನೆ. ಪೀಟರ್ಸನ್‌ನ ಸಹಾಯಕ ಮಾಚು ಅಪ್ಪ ಟೂಮೈನನ್ನು ದೊಡ್ಡ ಬೇಟೆಗಾರನನ್ನಾಗಿ ತಯಾರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತಾನೆ.
ಇದಿಷ್ಟು ಕಥಾಹಂದರದ ’ಎಲಿಫ್ಯಾಂಟ್ ಬಾಯ್’ ಚಿತ್ರವು 1937ರಲ್ಲಿ ಬಿಡುಗಡೆಯಾಯಿತು. ಅಪಾರ ಹಣ ವೆಚ್ಚಮಾಡಿದ್ದ ನಿರ್ಮಾಪಕ ಕೊರ್ಡಾಗೆ ಅಸಲು ಬಂದರೆ ಸಾಕೆನಿಸಿತ್ತು. ಚಿತ್ರೀಕರಣ ಮತ್ತು ನಂತರದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ್ದ ಚಿತ್ರವು ಬಿಡುಗಡೆಯಾದಾಗ ಕಂಡ ಯಶಸ್ಸು ಎಲ್ಲ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತ್ತು. ಗಲ್ಲಾಪೆಟ್ಟಿಗೆ ತುಂಬಿತುಳುಕಿತು. ಅಲ್ಲದೆ ಆ ವರ್ಷದ ವೆನಿಸ್ ಚಿತ್ರೋತ್ಸವದಲ್ಲಿ ಚಿತ್ರದ ನಿರ್ದೇಶಕ ರಾಬರ್ಟ್ ಫ್ಲಾಹರ್ಟಿ ಮತ್ತು ಜೋಲ್ಟಾನ್ ಕೊರ್ಡಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.
ಫ್ಲಾಹರ್ಟಿಗೆ ಅದರಿಂದ ಸಂತೋಷವಾದಂತೇನೂ ಕಾಣಲಿಲ್ಲ. ಆದರೆ ಇಡೀ ಚಿತ್ರದ ಯಶಸ್ಸು ನಿಂತದ್ದು ಅನಗತ್ಯ ಗಿಮಿಕ್‌ಗಳಿಲ್ಲದ ಅದರ ಸರಳ ಕತೆ, ಫ್ಲಾಹರ್ಟಿಯ ನಿರ್ದೇಶನದಲ್ಲಿ ಸಂಯೋಜನೆಗೊಂಡ ಕಾಡಿನ ದೃಶ್ಯಗಳನ್ನು ಅನುಸರಿಸಿದ ಸದಭಿರುಚಿ ನಿರೂಪಣೆ, ವಿದೇಶೀ ಪ್ರೇಕ್ಷಕರಿಗೆ ಹೊಸದೆನಿಸುವ ಆನೆ ಮತ್ತು ಬಾಲಕನ ನಡುವಿನ ಬಿಂದಾಸ್ ವರ್ತನೆಗಳು; ಆನೆಗಳನ್ನು ಹಿಡಿವ ಖೆಡ್ಡಾ ಕಾರ್ಯಾಚರಣೆಯ ರೋಮಾಂಚಕ ದೃಶ್ಯಗಳು. ಅದರಲ್ಲೂ ಕಾರ್ಯಾಚರಣೆಯ ಬಹುಮುಖ್ಯ ಭಾಗ ರಿವರ್ ಡ್ರೈವ್ ನ ಮೈನವಿರೇಳಿಸುವ ದೃಶ್ಯಗಳು ಅಂದಿನ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದವು ಎಂದು ದಾಖಲಾಗಿದೆ. (ಕಾಡಿನಲ್ಲಿ ಚದುರಿದ ಆನೆಯ ಹಿಂಡುಗಳನ್ನು ಹಲವು ವಾರಗಳ ಕಾಲ ಸಾವಿರಾರು ಸಿಬ್ಬಂದಿ ಸುತ್ತುವರೆಯುತ್ತಾ ನದಿಯ ಆಯಕಟ್ಟಿನ ಜಾಗದಲ್ಲಿ ಬಂದು ಸೇರುವಂತೆ ಮಾಡುತ್ತದೆ. ಹೀಗೆ ಗುಂಪುಗೂಡಿದ ಆನೆಯ ಬೃಹತ್ ಹಿಂಡನ್ನು ಸಾಕಿದ ಆನೆಗಳ ಮೂಲಕ ಬೆನ್ನಟ್ಟಿ ನದಿಗೆ ಇಳಿಸುತ್ತಾರೆ. ನದಿಯ ಹರಿವಿಗೆ ವಿರುದ್ಧ ಆನೆಗಳು ಚಲಿಸುವಂತೆ ಮಾಡಿ ನಂತರ ಎದುರು ದಡದಲ್ಲಿ ನಿರ್ಮಿಸಿದ ಖೆಡ್ಡಾ ಆವರಣಕ್ಕೆ ಕೂಡುತ್ತಾರೆ. ಹೀಗೆ ಬೆದರಿದ ಆನೆಗಳನ್ನು ನದಿಯಲ್ಲಿ ದಾಟಿಸುವ ರೋಮಾಂಚಕ ದೃಶ್ಯಗಳನ್ನು ಸೃಷ್ಟಿಸುವ ಖೆಡ್ಡಾ ಭಾಗವೇ ರಿವರ್ ಡ್ರೈವ್) ಇದು ನಿಜವಾದ ಕಾರ್ಯಾಚರಣೆಯೇ ಆದ್ದರಿಂದ ಆನೆಗಳ ಸಹಜ ವರ್ತನೆ ಅಂದರೆ ಅವುಗಳ ರೋಷ, ಘೀಳು, ಬೆದರುವಿಕೆ, ಆಕ್ರಮಣ ಯತ್ನ, ಮರಿಗಳನ್ನು ರಕ್ಷಿಸುವ ತಾಯಿಯ ತೊಳಲಾಟ, ಸಲಗಗಳು ತೋರುವ ಪ್ರತಿರೋಧ ಎಲ್ಲವೂ ಇಲ್ಲಿ ಸಹಜದೃಶ್ಯಗಳಾಗಿ ಸಾಕ್ಷ್ಯಚಿತ್ರದ ಸ್ವರೂಪ ಪಡೆದುಕೊಂಡಿವೆ. ಇದಿಷ್ಟೇ ಭಾಗವನ್ನು ಹೆಕ್ಕಿ ಖೆಡ್ಡಾ ಕಾರ್ಯಾಚರಣೆಯ ಸಾಕ್ಷ್ಯಚಿತ್ರವೆಂಬಂತೆ ತೋರಿಸಬಹುದಾಗಿತ್ತು. ಇದರ ಜೊತೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಅನೇಕ ಆಸಕ್ತಿದಾಯಕ ದೃಶ್ಯಗಳು- ನಗೆಯುಕ್ಕಿಸುವ ಮಂಗನಚೇಷ್ಟೆ, ಟೂಮೈ ಮತ್ತು ಕಾಳನಾಗ ಮನೆಯ ಮೇಲೆ ಬಿಟ್ಟ ಕುಂಬಳಕಾಯಿ ಕದಿಯುವುದು, ಹುಲಿಯ ಆಕ್ರಮಣ, ಬೀದಿಯಲ್ಲಿ ಮಲಗಿರುವ ಮಗುವನ್ನು ಇನ್ನೇನು ತುಳಿದೇ ಬಿಟ್ಟಿತು ಎನ್ನುವಾಗ ಮಗುವಿನ ಪಕ್ಕದಲ್ಲಿ ಕಾಲಿಟ್ಟು ದಾಟುವ ಕಾಳನಾಗನ ನಡೆ, ಆತನ ರೋಷಾವೇಷ, ಹೊಳೆಯಲ್ಲಿ ಈಜುವ ಆನೆಯ ಸಾಹಸ, ರಾತ್ರಿಯ ವೇಳೆಯಲ್ಲಿ ತೆಗೆದ ಆನೆಗಳ ಹಿಂಡಿನ ಸುಂದರ ದೃಶ್ಯಗಳು ಸಾಹಸದ ಚಿತ್ರಕ್ಕೆ ಹೇಳಿ ಮಾಡಿಸಿದಂತಿದ್ದವು. ಹಾಗೆ ನೋಡಿದರೆ ಮೈಸೂರು ಕಾಡುಗಳ ದೃಶ್ಯದೊಳಗೆ ಕಥೆಯ ಎಳೆಗೆ ತಕ್ಕಂತೆ ಆಗಾಗ್ಗೆ ತೂರಿಬರುವ, ಸ್ಟುಡಿಯೋದಲ್ಲಿ ಚಿತ್ರಿತಗೊಂಡ ದೃಶ್ಯಗಳ ಹೆಣಿಗೆ ಸಮುಚಿತವಾಗಿ ಬೆರೆಯದೆ ಕಿರಿಕಿರಿ ತರುತ್ತದೆ. ಅಂಥದೇ ಕಿರಿಕಿರಿ ತರುವುದು ಭಾರತೀಯರ ಪಾತ್ರಗಳನ್ನು ವಹಿಸಿರುವ ಬ್ರಿಟನ್/ ಯೂರೋಪ್ ಕಲಾವಿದರ ಅಭಿನಯ.
ಇದನ್ನು ಓದಿದ್ದೀರಾ?: ಲಂಕೇಶ್ ನೆನಪು | ಭೂಮಿಯಲ್ಲಿ ಕಾಲೂರಿ ಆಕಾಶದ ಧ್ಯಾನ: ಎನ್.ಎಸ್ ಶಂಕರ್ ಬರೆಹ
ಇವುಗಳ ನಡುವೆ ನಿಜವಾಗಿಯೂ ಎಲ್ಲರ ಮನಗೆದ್ದು ಅಂತಾರಾಷ್ಟ್ರೀಯ ಪ್ರಸಿದ್ಧಿಯ ತೆಕ್ಕೆಗೆ ಜಿಗಿದವನೆಂದರೆ ಮೈಸೂರು ಸಾಬು ಎಂದೇ ಹೆಸರಾದ ಸಾಬು ದಸ್ತಗೀರ್ ಅಥವಾ ಸೇಲಾರ್ ಶೇಖ್. ಎಲಿಫ್ಯಾಂಟ್ ಬಾಯ್ ಬಗ್ಗೆ ಏಪ್ರಿಲ್ ೬, ೧೯೩೭ರ ನ್ಯಾಯಾರ್ಕ್ ʼಟೈಂʼ ಪತ್ರಿಕೆಯಲ್ಲಿ ಬಂದ ವಿಮರ್ಶೆಯೊಂದು ಚಿತ್ರದ ಪ್ರಮುಖ ಆಕರ್ಷಣೆ ಸಾಬು ಎಂದು ಗುರುತಿಸಿದೆ. ಅಂದಿನ ಪತ್ರಿಕೆಗಳು ಸಾಬುವನ್ನು ಹೊಗಳಿದ ಅಭಿಪ್ರಾಯಗಳನ್ನು ಹೀಗೆ ಸಂಗ್ರಹಿಸಬಹುದು. ಚಿತ್ರದ ತತ್‌ಕ್ಷಣದ ಆಕರ್ಷಣೆಯೆಂದರೆ, ಸಾಬು. ಕ್ಯಾಮೆರಾದ ಎದುರು ಆತನ ಸ್ವಾಭಾವಿಕ ವರ್ತನೆ ಹಾಲಿವುಡ್‌ನ ಪ್ರತಿಭಾವಂತ ಬಾಲಕಲಾವಿದರ ಮುಖವು ನಾಚುವಂತೆ ಮಾಡುತ್ತದೆ. ವಿದೇಶಿ ಪಾತ್ರಗಳನ್ನು ವಹಿಸಿದಾಗ ಆಂಗ್ಲೋ ಮೂಲದ ಕಲಾವಿದರು ತಮ್ಮ ಚರ್ಮದ ಬಣ್ಣವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ಇಲ್ಲಿ ಸಾಬು ತನ್ನ ತಾಜ ನೈಸರ್ಗಿಕ ತ್ವಚೆಯಿಂದ ಹೊಳೆಯುತ್ತಾನೆ. ಸಾಬು ನಮಗೆ ತಿಳಿಯದ ನಾಡಿನವನಾದರೂ ಬಹು ಪರಿಚಿತನಂತೆ, ಸಹಜವ್ಯಕ್ತಿಯಂತೆ ಇದ್ದಾನೆ. ಮನೆಯ ಭಾಷೆ ಮಾತ್ರ ಆಡಬಲ್ಲ ಆತ ಕಲಿತು ಆಡಿರುವ ಇಂಗ್ಲಿಷ್ ಪದಗಳ ಉಚ್ಛಾರಣೆ ತಮಾಷೆಯೆನಿಸಿದರೂ ಸಂಭಾಷಣೆ ಹೇಳುವುದು ಅವನಿಗೆ ಸಹಜವಾದ ಧ್ವನಿ ಮತ್ತು ರೀತಿಯಲ್ಲಿವೆ. ಆ ಬಾಲಕನ ಲೀಲಾಜಾಲ ಚಲನೆ, ಭಾವುಕ ಸನ್ನಿವೇಶಗಳಲ್ಲಿ ತಾಳುವ ಮೌನ, ಕಣ್ಣುಗಳ ಭಾವ, ಭಿಡೆಯಿಲ್ಲದ ಅಭಿನಯವನ್ನು ಆಧುನಿಕ ಸಿನಿಮಾತಂತ್ರಜ್ಞಾನವು ಬೇರೊಂದು ಅನುಭವಕ್ಕೆ ದಾಟಿಸುತ್ತದೆ.
ಮೈಸೂರಿನ ಕಾರಾಪುರದಲ್ಲಿ ಜನಿಸಿದ(೨೭ನೇ ಜನವರಿ ೧೯೨೪), ಅರಮನೆ ಲಾಯದ ಮಾವುತನೊಬ್ಬನ ಮಗನಾದ ಸಾಬು ತಂದೆಯೊಟ್ಟಿಗೆ ಸಾಕಿದ ಆನೆಗಳ ಜೊತೆ ಬೆಳೆದವನು. ಹತ್ತಿರದ ಕಬಿನಿಯಲ್ಲಿ ಆನೆಗಳನ್ನು ಮೀಯಿಸುತ್ತಿದ್ದ ಸಾಬುಗೆ ಬಾಲ್ಯದಿಂದಲೇ ಆನೆಗಳ ಒಡನಾಟ. ಕಾರಾಪುರದ ಹತ್ತಿರದ ಗುಡಿಸಲುಗಳಲ್ಲಿ ಬೀಡುಬಿಟ್ಟಿದ್ದ ಅರಮನೆಯ ಸಾಕಿದ ಆನೆಗಳನ್ನು ನೋಡಿಕೊಳ್ಳುವ ಮಾವುತರಲ್ಲಿ ಒಬ್ಬನಾದ ಸಾಬು ತಂದೆ ಶೇಖ್ ಇಬ್ರಾಹಿಂನ ಹೆಣ್ಣಾನೆಯ ಹೆಸರು ಗುಡಿಯಾಟಿ. ಅವನ ಪತ್ನಿ ಅಸ್ಸಾಂ ಮೂಲದ ರೋಸೆಬೀ. ದಂಪತಿಗೆ ಶೇಖ್ ದಸ್ತಗೀರ್, ಸಾಬು ದಸ್ತಗೀರ್(ಸೇಲರ್ ಶೇಖ್) ಎಂಬ ಗಂಡುಮಕ್ಕಳು ಮತ್ತು ಪ್ಯಾರೆಜಾನ್ ಎಂಬ ಹೆಣ್ಣುಮಗುವಿತ್ತು. ಸಾಬು ಎಳವೆಯಲ್ಲಿ ತಾಯಿಯನ್ನು ಕಳೆದುಕೊಂಡ. ತಂದೆ ಗೌಸೆಬೀ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಂಡ. ಆಕೆಗೆ ಅಬ್ದುಲ್ ಅಜೀಜ್ ಎಂಬ ಗಂಡು ಮಗು ಹುಟ್ಟಿತು. ಸಾಬುಗೆ ಒಂಬತ್ತನೇ ವಯಸ್ಸಿನಲ್ಲಿ ಪಿತೃವಿಯೋಗವಾಯ್ತು. ಶೇಖ್ ಇಬ್ರಾಹಿಂ ಮರಣವನ್ನು ಸಹಿಸದ ಆನೆ ಗುಡಿಯಾಟಿ ಕೆರಳಿ ಎಲ್ಲರ ಮೇಲೂ ದಾಳಿ ಮಾಡಿತು. ನಂತರ ತಪ್ಪಿಸಿಕೊಂಡು ಕಾಡು ಸೇರಿತು. ಅರಮನೆಯಿಂದ ಆ ಆನೆಯನ್ನು ಮರಳಿ ಹಿಡಿಯದಂತೆ ಸಂದೇಶ ಹೋಯಿತು. ಹೀಗೆ ಗಂಡ, ಆನೆ ಇಲ್ಲದ ಸಂಸಾರವನ್ನು ಕರೆದುಕೊಂಡು ಮಲತಾಯಿಯು ಮೈಸೂರಿನಲ್ಲಿ ಇಬ್ರಾಹಿಂ ಕೊಂಡಿದ್ದ ಮನೆಯಲ್ಲಿ ನೆಲೆಸಿದಳು. ತಲಾ ಎರಡು ರೂಪಾಯಿ ತಿಂಗಳ ಸಂಬಳದ ಮೇಲೆ ಅಣ್ಣತಮ್ಮಂದಿರಿಬ್ಬರನ್ನು ಅರಮನೆ ಲಾಯದಲ್ಲಿ ಕೆಲಸಕ್ಕೆ ಮಹಾರಾಜರು ಸೇರಿಸಿಕೊಂಡರು. ತಲೆಗೊಂದು ಕೊಳಕು ಚೌಕವನ್ನು ಪೇಟದಂತೆ ಸುತ್ತಿ ನಡುವಿಗೆ ದಟ್ಟಿಯನ್ನು ಬಿಗಿದು ಅರಮನೆಯ ಆನೆಗಳ ಜೊತೆ ಬದುಕು ಆರಂಭಿಸಿದ ಸಾಬುಗೆ ತಾನೊಬ್ಬ ಮಾವುತನಾಗಬೇಕೆಂಬ ಕನಸಿತ್ತು.
ಇದನ್ನು ಓದಿದ್ದೀರಾ?: ನೂರರ ನೆನಪು | ಕರ್ಪೂರಿ ಠಾಕೂರ್ ಎಂಬ ನಿಜನಾಯಕ
ಕೆಲಕಾಲದ ನಂತರ ಅವನ ಸೋದರಿಯೂ ತೀರಿಕೊಂಡಳು. ಮಲಸೋದರ ಅಜೀಜ್ ಅಂಧನಾಗಿದ್ದ. ಆದರೆ ಸಂಕೋಚ ಸ್ವಭಾವದ ನಿರ್ಗತಿಕ ಬಾಲಕನಿಗೆ ಹನ್ನೆರಡನೇ ವಯಸಿಗೆ ಅದೃಷ್ಟದ ಬಾಗಿಲು ತೆರೆಯಿತು. ಆನೆಗಳ ಜೊತೆಗೆ ಸಲೀಸಾಗಿ ವರ್ತಿಸುತ್ತಾ ನೆಗೆದು ಕುಪ್ಪಳಿಸುತ್ತಿದ್ದ ಬಾಲಕ ಸಹಜವಾಗಿ ಚಿತ್ರದ ನಾಯಕನ ಪಾತ್ರಕ್ಕೆ ಆಯ್ಕೆಯಾದ. ಚಿತ್ರೀಕರಣದುದ್ದಕ್ಕೂ ಫ್ಲಾಹರ್ಟಿ ಮತ್ತು ಕ್ಯಾಮರಾಮನ್ ಬೊರಡೈಲಿ ನೀಡುತ್ತಿದ್ದ ಸೂಚನೆಗಳನ್ನು ನುರಿತ ನಟನಂತೆ ಅಭಿನಯಿಸಿದ್ದು ಜೊತೆಗೆ ಇಂಗ್ಲಿಷ್ ಸಂಭಾಷಣೆಗಳನ್ನು ಬಾಯಿಪಾಠ ಮಾಡಿ ಒಪ್ಪಿಸುತ್ತಿದ್ದ ರೀತಿ ಕಂಡು ಚಿತ್ರೀಕರಣ ತಂಡ ಅಚ್ಚರಿಯ ಮಡುವಲ್ಲಿ ಮುಳುಗಿತ್ತು. ಫ್ಲಾಹರ್ಟಿಯ ಹೆಂಡತಿ ಫ್ರಾನ್ಸೆಸ್ ನೆನಪಿನ ಸಂಪುಟ ’ಸಾಬು, ದ ಎಲೆಫ್ಯಾಂಟ್ ಬಾಯ್’ ಪುಸ್ತಕದಲ್ಲಿ ಸಾಬುವಿನ ಮುಗ್ದತೆ, ನಟನೆಯಲ್ಲಿ ಪಳಗಿದ ರೀತಿಯ ಬಗ್ಗೆ ವಿವರವಾಗಿ ಬರೆದು ಅವನೊಂದು ಅಚ್ಚರಿಯ ಶೋಧ ಎಂದು ದಾಖಲಿಸಿದ್ದಾರೆ.
ಮೈಸೂರಿನ ನಂತರ ಉಳಿದ ಚಿತ್ರದ ಭಾಗಗಳನ್ನು ಸ್ಟುಡಿಯೋನಲ್ಲಿ ಚಿತ್ರೀಕರಿಸಲು ಸಾಬು ಮತ್ತು ಅವನ ಹಿರಿಯ ಸೋದರನನ್ನು ಇಂಗ್ಲೆಂಡ್‌ಗೆ ಕರೆತಂದರು. ಆತನಿಗೆ ಬೆಂಬಲವಾಗಿ ನಿಂತು ಪೋಷಿಸಿದವರು ಅನೇಕರು. ಆನೆ ಲಾಯದಲ್ಲಿ ಗುರುತಿಸಿದ ಕ್ಯಾಮರಾಮನ್ ಓಸ್ಮಾಂಡ್ ಬೊರಡೈಲಿ ಲಂಡನ್‌ನಲ್ಲಿ ಆತನಿಗೆ ಆಸರೆಯಾದರು. ಅಲೆಕ್ಸಾಂಡರ್ ಕೊರ್ಡಾ ಆತನನ್ನು ಲಂಡನ್‌ನ ಬೀಕಾನ್‌ಫೀಲ್ಡ್‌ನಲ್ಲಿನ ಶಾಲೆಯೊಂದಕ್ಕೆ ಸೇರಿಸಿ ಶಿಕ್ಷಣ ಕೊಡಿಸಿದರು.
ಗಮನಿಸಬೇಕಾದ ಅಂಶವೆಂದರೆ ಫ್ಲಾಹರ್ಟಿಯು ಸಾಬುವಿನ ಜೀವನ ಕತೆಯ ಬಹುಭಾಗವನ್ನು ಕತೆಗೆ ಅಳವಡಿಸಿದರು. ಆನೆಯ ಜೊತೆಗಿನ ಬಾಂಧವ್ಯ, ತಂದೆಯ ಸಾವು, ಗುಡಿಯಾಟಿಯ ರೋಷದ ವರ್ತನೆಯೆಲ್ಲ ಚಿತ್ರದಲ್ಲಿ ಹಾಗೆಯೇ ಮೂಡಿದವು. ಜೊತೆಗೆ ಸಾಬುವಿನ ಸಹಜ ವೇಷಭೂಷಣವನ್ನೇ ಚಿತ್ರದ ಪಾತ್ರಧಾರಿಯಲ್ಲಿ ಉಳಿಸಿಕೊಂಡರು.
’ದಿ ಎಲಿಫ್ಯಾಂಟ್ ಬಾಯ್’ ಅಮೋಘ ಯಶಸ್ಸು ಕಂಡ ನಂತರ ಅದರ ಪ್ರಚಾರಕ್ಕೆ ಅಮೆರಿಕಾಗೆ ಹೋದಾಗ ಹಾಲಿವುಡ್‌ನ ಸ್ಟುಡಿಯೋಗಳು ಈತನ ಬಗ್ಗೆ ಆಸಕ್ತಿ ತಾಳಿದವು. ’ದಿ ಎಲಿಫ್ಯಾಂಟ್ ಬಾಯ್’ ನಂತರ ಕೊರ್ಡಾ ಅವನಿಗಾಗಿಯೇ ಮತ್ತೊಂದು ಮಹಾತ್ವಾಕಾಂಕ್ಷಿ ಚಿತ್ರ ’ದಿ ಡ್ರಂ’(೧೯೩೮) ನಿರ್ಮಿಸಿದರು. ವಸಾಹತು ಭಾರತದಲ್ಲಿ ಬ್ರಿಟೀಷರ ಜೊತೆ ಸೇರಿ ತನ್ನ ದುಷ್ಟ ಚಿಕ್ಕಪ್ಪನ ವಿರುದ್ಧ ಯುದ್ಧ ಮಾಡುವ ಯುವರಾಜನ ಕಥೆ. ಬ್ರಿಟೀಷರ ಜೊತೆ ಕೈಜೋಡಿಸಿದ ಯುವರಾಜ ಭಾರತೀಯರಿಗೆ ಇಷ್ಟವಾಗಲಿಲ್ಲ. ಪ್ರದರ್ಶನದ ವಿರುದ್ಧ ಪ್ರತಿಭಟನೆಗಳೂ ನಡೆದವು. ಆದರೂ ಅದು ವರ್ಣದಲ್ಲಿ ತೆಗೆದ, ತಾಂತ್ರಿಕವಾಗಿ ಉನ್ನತ ಗುಣಮಟ್ಟದ ಚಿತ್ರ. ಅನಂತರ ’ದಿ ಥೀಫ್ ಆಫ್ ಬಾಗ್ದಾದ್’(೧೯೪೦) ಮತ್ತು ’ದಿ ಜಂಗಲ್ ಬುಕ್’(೧೯೪೨) (ನಾಯಕ ಮೌಗ್ಲಿಯ ಪಾತ್ರ) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಅಮೆರಿಕಾಗೆ ಬಂದ ಸಾಬುವನ್ನು ಯೂನಿವರ್ಸಲ್ ಸ್ಟುಡಿಯೋ ತನ್ನ ಸಂಸ್ಥೆಯ ಖಾಯಂ ನಟನನ್ನಾಗಿಸಿಕೊಂಡಿತು. ಅರೇಬಿಯನ್ ನೈಟ್ಸ್, ವೈಟ್ ಸ್ಯಾವೇಜ್, ಕೋಬ್ರಾ, ಬ್ಲಾಕ್‌ನಾರ‍್ಸಿಸಸ್, ಮ್ಯಾನ್ ಈಟರ್ ಆಫ್ ಕುಮಾನ್(೧೯೪೮-ಜಿಮ್ ಕಾರ್ಬೆಟ್ ಕಥೆ) ಇತ್ಯಾದಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದ. ಇಂಗ್ಲೆಂಡ್, ಹಾಲಿವುಡ್, ಫ್ರಾನ್ಸ್, ಇಟಲಿಯ ಹಲವು ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ.
೧೯೪೪ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದ ಸಾಬು ಮುಂದೆ ಹತ್ತೊಂಬತ್ತು ವರ್ಷ ವಿವಿಧ ಸಾಹಸ, ಮನೋವೈಜ್ಞಾನಿಕ, ಸಾಮಾಜಿಕ ವಸ್ತುವಿನ ಒಟ್ಟು ೨೩ ಚಿತ್ರಗಳಲ್ಲಿ ನಟಿಸಿ ಮನೆಮಾತಾದರು. ಮರಿಲಿನ್ ಕೂಪರ್ ಎಂಬ ತನ್ನ ಸಹನಟಿಯನ್ನು ಮದುವೆಯಾದ ಸಾಬುಗೆ ಪಾಲ್ ಮತ್ತು ಜಾಸ್ಮಿನ್ ಎಂಬ ಮಕ್ಕಳು. ಈ ನಡುವೆ ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಸೈನ್ಯದಲ್ಲಿ ಸಲ್ಲಿಸಿದ ಕಡ್ಡಾಯ ಸೇವೆಗೆ ಅನೇಕ ಮನ್ನಣೆ ಸಂದವು. ಆದರೆ ಆತನ ಬದುಕು ಮೂವತ್ತೊಂಬತ್ತನೆ ವಯಸ್ಸಿಗೆ ಹಠಾತ್ತನೆ ಕೊನೆಗೊಂಡಿತು. ಹೃದಯಾಘಾತದಿಂದ ತೀರಿಕೊಂಡ(೩ನೇ ಡಿಸೆಂಬರ್ ೧೯೬೩) ಸಾಬುವಿನ ನಿಜವಾದ ಹುಟ್ಟಿದ ದಿನಾಂಕ ತಿಳಿಯದು. ಆತನನ್ನು ಇಂಗ್ಲೆಂಡಿಗೆ ಹಡಗಿನಲ್ಲಿ ಕರೆತರುವಾಗ ವಯಸ್ಸನ್ನು ಅಂದಾಜಿಸಿ ಬೊರಡೈಲಿ ನೀಡಿದ ದಿನಾಂಕವದು.
ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಸಾಬು ದೊಡ್ಡ ಸೆಲೆಬ್ರಿಟಿಯಾಗಿ ೧೯೫೭ರಲ್ಲಿ ಪತ್ನಿಯೊಡನೆ ಮೈಸೂರಿಗೆ ಬಂದು ಮಹಾರಾಜರನ್ನು ಭೇಟಿ ಮಾಡಿ ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ. ಮತ್ತೆ ಅವನ ನಂಟರನ್ನು ಹುಡುಕಿ ಭೇಟಿ ಮಾಡಿ ಹಣ ಸಹಾಯ ಮಾಡಿದ. ಅದಾಗಲೇ ನಿಧನನಾಗಿದ್ದ ಮಲಸೋದರನ ಕುಟುಂಬಕ್ಕೆ ನೆರವು ನೀಡಿದ ದಾಖಲೆಗಳಿವೆ. ಸಾಬು ಅವರ ಬದುಕು ಬಡತನದಿಂದ ಶ್ರೀಮಂತಿಕೆಯ ಉಪ್ಪರಿಗೆಗೆ ಏರಿದ ರಮ್ಯ ಕಥಾನಕಕ್ಕೆ ಉದಾಹರಣೆಯಾಗಿದೆ.
ಎತ್ತಣ ಮಾಮರ? ಎತ್ತಣ ಕೋಗಿಲೆ?… ಎಲ್ಲಿಯ ಫ್ಲಾಹರ್ಟಿ? ಎಲ್ಲಿಯ ಕೊರ್ಡಾ? ಮೈಸೂರಿನ ಆನೆ ಲಾಯವೆಲ್ಲಿ ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೋ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ.
(ಇಲ್ಲಿಯ ಬಹುತೇಕ ವಿವರಗಳನ್ನು ಹಲವು ಮೂಲಗಳಿಂದ, ವಿಶೇಷವಾಗಿ ಫ್ರಾನ್ಸೆಸ್ ಫ್ಲಾಹರ್ಟಿ ಬರೆದ ಸಾಬು, ದಿ ಎಲಿಫ್ಯಾಂಟ್ ಬಾಯ್, ಮತ್ತು ಪಾಲ್ ರೋಥಾನ ‘ರಾಬರ್ಟ್ ಜೆ.ಫ್ಲಾಹರ್ಟಿ, ಎ ಬಯಾಗ್ರಫಿ’ಯಿಂದ ಸಂಗ್ರಹಿಸಿದ್ದೇನೆ. ಜೊತೆಗೆ ಸಾಬು ಬಾಲ್ಯ, ಮನೆತನದ ಬಗ್ಗೆ ಸಾಕಷ್ಟು ವಿಷಗಳನ್ನು ಸಂಗ್ರಹಿಸಿರುವ ಹಿರಿಯರಾದ ಎ.ಸಿ. ಚಂದ್ರಶೇಖರ್ ಅವರಿಗೂ ಋಣಿಯಾಗಿದ್ದೇನೆ.)

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.