ನೂರರ ನೆನಪು | ಕರ್ಪೂರಿ ಠಾಕೂರ್ ಎಂಬ ನಿಜನಾಯಕ

Date:

24, ಜನವರಿ 2024ರಂದು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ರವರಿಗೆ ನೂರು ವರ್ಷ ತುಂಬುತ್ತದೆ. ಅತಿ ಹಿಂದುಳಿದ ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಕರ್ಪೂರಿ ಠಾಕೂರ್, ನಿಷ್ಠಾವಂತ ಸಮಾಜವಾದಿಯಾಗಿ ರೂಪುಗೊಂಡಿದ್ದು, ಹಿಂದುಳಿದ ಜಾತಿಗಳ ಪ್ರಾತಿನಿಧ್ಯದ ಪರವಾಗಿ ಹೋರಾಡಿ ‘ಜನನಾಯಕ’ ಎಂದು ಖ್ಯಾತರಾಗಿದ್ದು ಒಂದು ಚಾರಿತ್ರಿಕ ಕಥನ. ಇದು ಈ ಜನನಾಯಕನ ಲೆಗಸಿಯನ್ನು ಅರಿಯುವ ಸಣ್ಣ ಪ್ರಯತ್ನ…

ಎಂಬತ್ತರ ದಶಕದ ʼಲಂಕೇಶ್ ಪತ್ರಿಕೆʼಯಲ್ಲಿ ‘ಉರಿಯುತ್ತಿರುವ ಕರ್ಪೂರಿ’ ಎನ್ನುವ ಅರ್ಥದ ಶೀರ್ಷಿಕೆ ಇರುವ ಲೇಖನ ಪ್ರಕಟವಾಗಿತ್ತು. ಅದರ ವಿವರಗಳು ನೆನಪಿಲ್ಲವಾದರೂ ಸಹ ಕರ್ಪೂರಿ ಠಾಕೂರ್ ರವರ ಬದುಕಿನ ಎಲ್ಲಾ ಆಯಾಮಗಳನ್ನು ವಿಶ್ಲೇಷಣೆ ಮಾಡಿದಂತಿರಲಿಲ್ಲ. ಅದಾಗಿ ಮೂವತ್ತೈದು ವರ್ಷಗಳ ಮೇಲಾಗಿದೆ. ಠಾಕೂರ್ ಸಾಬ್ ನಿಧನರಾಗಿ 35 ವರ್ಷಗಳಾಗಿದೆ. ಆದರೆ ಇಂದಿಗೂ ಅವರ ಲೆಗಸಿ ನಮಗೆ ಅಪರಿಚಿತವಾಗಿ ಉಳಿದುಕೊಂಡಿದೆ. ಶೋಷಿತರ ಪರವಾಗಿ ರಾಜಕಾರಣ ಮಾಡಿದ ಧೀಮಂತ ವ್ಯಕ್ತಿ ಯಾಕೆ ಹೀಗೆ ಹಿನ್ನೆಲೆಗೆ ಸರಿಯಲ್ಪಟ್ಟರು? ಇಂದಿನ ಮಂಡಲ್ 2.0 ರಾಜಕಾರಣದಲ್ಲಿ ಕರ್ಪೂರಿಯವರಂತಹ ಹಿಂದುಳಿದ ವರ್ಗಗಳ ರಾಜಕಾರಣಿಯ ಕುರಿತಾದ ಚರ್ಚೆ ಮುನ್ನೆಲೆಗೆ ಬರಬೇಕಿತ್ತು. ಹಾಗಾಗಲಿಲ್ಲ… ಏಕೆ?

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕಾಂಗ್ರೆಸ್ ಸೋಷಿಯಲಿಸ್ಟ್ ಕಾರ್ಯಕರ್ತರಾಗಿ ಭಾಗವಹಿಸಿದ್ದ ಬಿಹಾರದ ಮಾಜಿ ಮು.ಮಂ. ಕರ್ಪೂರಿ ಠಾಕೂರ್ ಸಹ ಎಲ್ಲಾ ಲೋಹಿಯಾವಾದಿಗಳಂತೆ ಕಾಂಗ್ರೆಸ್ ವಿರೋಧಿ ಧೋರಣೆ ಬೆಳೆಸಿಕೊಂಡಿದ್ದರು. ಆದರೆ ಇತರರಂತೆ ಅದು ಗೀಳು ಆಗಿರಲಿಲ್ಲ. ಬದಲಿಗೆ ಲೋಹಿಯಾರ ‘ಹಿಂದುಳಿದ ಜಾತಿಗಳ’ ಸಂಘಟನೆಯ ಚಿಂತನೆಯನ್ನು ರಾಜಕಾರಣದಲ್ಲಿ ಸಮರ್ಥವಾಗಿ ಜಾರಿಗೊಳಿಸಿದರು ಮತ್ತು ಮುಂದುವರೆದು ‘ಅತಿ ಹಿಂದುಳಿದ ವರ್ಗಗಳನ್ನು’ ಗುರುತಿಸಿ ಅವರ ಪ್ರಾತಿನಿಧ್ಯಕ್ಕಾಗಿ ನೀತಿಗಳನ್ನು ರೂಪಿಸಿದರು.

ಪ್ರೊ. ಮಹಮ್ಮದ್ ಸಾಜಿದ್ ಅವರು ʼ1962-1972ರ ಅವಧಿಯಲ್ಲಿ ಬಿಹಾರಿನ ಸೋಷಿಯಲಿಸ್ಟ್ ಪಕ್ಷದಲ್ಲಿ ಜನಸಂಘದೊಂದಿಗೆ ಸಖ್ಯ ಬಯಸುವ ಭೋಲ ಪ್ರಸಾದ್ ಸಿಂಗ್ ಮತ್ತು ರಮಾನಂದ ತಿವಾರಿ ನಡುವೆ ಒಳ ಜಗಳಗಳಿತ್ತು. ಕರ್ಪೂರಿಯವರು ಮೇಲಿನ ಎರಡೂ ಮೇಲ್ಜಾತಿ ಬಣಗಳೊಂದಿಗೆ ಗುರುತಿಸಿಕೊಳ್ಳದೇ ತಮ್ಮದೇ ಹಿಂದುಳಿದ ವರ್ಗಗಳ ಅಸ್ಮಿತೆಯನ್ನು ಉಳಿಸಿಕೊಂಡರು. ಇದು ಮುಂದೆ ಅವರ ನಾಯಕತ್ವದ ಪ್ರಾಬಲ್ಯಕ್ಕೆ ಸಹಕಾರಿಯಾಯಿತು. ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಸೋಷಿಯಲಿಸ್ಟರಿಗೆ ಹಿಂದುಳಿದ ವರ್ಗಗಳ ಸಂಘಟನೆಗೆ ಕರ್ಪೂರಿಯವರು ಮುಖ್ಯ ನೇತಾರರಾಗಿದ್ದರು’ ಎಂದು ಬರೆಯುತ್ತಾರೆ. ಬ್ರಾಹ್ಮಣ- ಭೂಮೀಹಾರ- ಫ್ಯೂಡಲಿಸಂನ ಬಿಹಾರ ರಾಜಕಾರಣದಲ್ಲಿ ಇದು ಬಲು ದೊಡ್ಡ ಸಾಧನೆ ಅನ್ನುವುದರಲ್ಲಿ ಅನುಮಾನವಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ಪೂರಿಯವರು ಮಾರ್ಚ್ 1967ರಿಂದ ಜನವರಿ 1968ರ ಅವಧಿಯಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದರು. ತಮ್ಮ ಅರವತ್ತರ ದಶಕದ ಹೋರಾಟದ ರಾಜಕಾರಣದಲ್ಲಿ ಕಾರ್ಮಿಕರ, ದಲಿತರ, ಕೂಲಿ ಕಾರ್ಮಿಕರ ಪರವಾಗಿ ಸಂಘಟಿಸಿದರು. ಆ ಕಾಲದಲ್ಲಿ ಅವರ ‘ಪೂರಾ ರೇಷನ್, ಪೂರಾ ಕಾಮ್, ನಹೀ ತೊ ಹೋಗಾ ಚಕ್ಕಾ ಜಾಮ್’ ಸ್ಲೋಗನ್ ಜನಪ್ರಿಯವಾಗಿತ್ತು. ಜಮ್ಶೆಡ್ ಪುರದ ಟಾಟಾ ಉಕ್ಕು ಕಂಪನಿಯ ಕಾರ್ಮಿಕರ ಬೇಡಿಕೆಗಳ ಪರವಾಗಿ 28 ದಿನಗಳ ಉಪವಾಸ ಮುಷ್ಕರ ನಡೆಸಿದರು. ನಂತರ ಆಡಳಿತ ಮಂಡಳಿ ಅವರ ಬೇಡಿಕೆಗಳಿಗೆ ಮಣಿಯಬೇಕಾಯಿತು.

ಲೋಹಿಯಾರೊಂದಿಗೆ ಕರ್ಪೂರಿ ಠಾಕೂರ್
ಲೋಹಿಯಾರೊಂದಿಗೆ ಕರ್ಪೂರಿ ಠಾಕೂರ್

1978ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮುರಾರಿಲಾಲ್ ಆಯೋಗದ ಶಿಫಾರಸುಗಳನ್ನು ಆಧರಿಸಿ ಅತಿ ಹಿಂದುಳಿದ ವರ್ಗಗಳಿಗೆ ಶೇ.12, ಹಿಂದುಳಿದ ವರ್ಗಗಳಿಗೆ ಶೇ.8 ಮೀಸಲಾತಿ ಜಾರಿಗೊಳಿಸಿದರು. ಇಂದು ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದ ‘ಜಾತಿ ಗಣತಿʼಯ ವರದಿಯ ಹಿಂದೆ ಕರ್ಪೂರಿ ಠಾಕೂರ್ ರವರ ಲೆಗಸಿಯಿದೆ. ಕರ್ನಾಟಕದಂತೆ ಬಿಹಾರ್ ನಲ್ಲಿಯೂ ಭೂ ಸುಧಾರಣೆ ಜಾರಿಗೊಳಿಸಿದರು. ಆದರೆ ಭೂಮಿಹಾರ್ ಒಳಗೊಂಡಂತೆ ಬಲಿಷ್ಠ ಜಾತಿಗಳು ಇದನ್ನು ತೀವ್ರವಾಗಿ ವಿರೋಧಿಸಿದವು. ಅರಸು ಅವರು ಇದನ್ನು ಮೀರಿದಷ್ಟು ಸುಲಭವಾಗಿ ಕರ್ಪೂರಿಯವರಿಗೆ ಮೀರಲಾಗಲಿಲ್ಲ. ಅದಕ್ಕೆ ಬಿಹಾರ್ ರಾಜ್ಯದ ಬಲಿಷ್ಠ ಬ್ರಾಹ್ಮಣ-ಫ್ಯೂಡಲಿಸಂನ ನೆಟ್ ವರ್ಕ್ ಸಹ ಮುಖ್ಯ ಕಾರಣ. ಮತ್ತು ಗಟ್ಟಿಯಾದ ಪಕ್ಷ ಸಂಘಟನೆ ಇಲ್ಲದ ಇಲ್ಲಿನ ಸಮಾಜವಾದಿಗಳು ಹಗಲೂ ರಾತ್ರಿ ವಿರೋಧಿಸಿದ ಕಾಂಗ್ರೆಸ್ ಪಕ್ಷ ಅರಸು ಅವರ ಪಾಲಿಗೆ ಮುಖ್ಯ ಭೂಮಿಕೆಯಾಗಿದ್ದು ಮತ್ತೊಂದು ಕಾರಣ.

ಇದನ್ನು ಓದಿದ್ದೀರಾ: ನಾವು ಕೋವಿ ಹಿಡಿಯಬೇಕೇ ಅಥವಾ ಲೇಖನಿ ಹಿಡಿಯಬೇಕೆ? : ಒಂದು ಜಿಜ್ಞಾಸೆ

ಅತಿ ಹಿಂದುಳಿದ ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಕರ್ಪೂರಿ ಠಾಕೂರ್ ಮುಂದೆ ನಿಷ್ಠಾವಂತ ಸಮಾಜವಾದಿಯಾಗಿ ರೂಪುಗೊಂಡಿದ್ದು, ಹಿಂದುಳಿದ ಜಾತಿಗಳ ಪ್ರಾತಿನಿಧ್ಯದ ಪರವಾಗಿ ಹೋರಾಡಿ ‘ಜನನಾಯಕ’ ಎಂದು ಖ್ಯಾತರಾಗಿದ್ದು ಒಂದು ಚಾರಿತ್ರಿಕ ಕಥನ.

ಆರಂಭದ ಹಂತದಲ್ಲಿ ಜಾತಿ ಹಿಂದೂಗಳ ಬೆಂಬಲ ಪಡೆದುಕೊಂಡು ರಾಜಕೀಯ ಆರಂಭಿಸಿದ ಜನನಾಯಕ ನಂತರ ಎರಡನೇ ಹಂತದಲ್ಲಿ ಹಿಂದುಳಿದ ಜಾತಿಗಳ ಪ್ರತಿನಿಧಿಯಾಗಿ ಬೆಳೆಯುತ್ತಾ ಮೂರನೆಯ ಹಂತದಲ್ಲಿ ದಲಿತರನ್ನು ಒಳಗೊಂಡ ಅತಿ ಹಿಂದುಳಿದ ಜಾತಿಗಳನ್ನು ಸಂಘಟಿಸಿದರು. ಕ್ರಮೇಣವಾಗಿ ಮೊದಲನೆ ಹಂತದ ಬಲಿಷ್ಠ ಜಾತಿಗಳ ಬೆಂಬಲ ಕಳೆದುಕೊಂಡರು. ಇದು ಬಿಡುಗಡೆಯೂ ಹೌದು. ಪಲ್ಲಟಗಳ ಈ ಸಾಮಾಜಿಕ-ರಾಜಕೀಯ ಪ್ರಕ್ರಿಯೆ ಕುತೂಹಲಕಾರಿಯಾಗಿದೆ. 1990ರ ನಂತರದ ಬಿಹಾರದ ಮಂಡಲ್ ರಾಜಕಾರಣವು ಅರವತ್ತು, ಎಪ್ಪತ್ತರ ದಶಕದ ಕರ್ಪೂರಿ ಠಾಕೂರ್ ಅವರ ಈ ಲೆಗಸಿಯೊಂದಿಗೆ ಬಲವಾಗಿ ಬೆಸೆದುಕೊಂಡಿದೆ.

ಲೋಹಿಯಾರ ಬೌದ್ಧಿಕ ಪ್ರಖರತೆಯಲ್ಲಿ ರೂಪುಗೊಂಡ ಈ ಹಿಂದುಳಿದ ಜಾತಿಗಳ ರಾಜಕಾರಣವನ್ನು ಮುಂದಿನ ಹಂತದಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೊಳಿಸಿದ ಠಾಕೂರ್ ಸಾಹೇಬರು 1952ರಿಂದ 1988ರವರೆಗೂ ಶಾಸಕರಾಗಿದ್ದರು. ಮಧ್ಯೆ 1977ರಲ್ಲಿ ಸಂಸದರಾಗಿದ್ದರು. ಡಿಸೆಂಬರ್ 1970- ಜೂನ್ 1971 ಮತ್ತು ಜೂನ್, 1977 – ಎಪ್ರಿಲ್ 1979ರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು. ಭಾರತದ ರಾಜಕಾರಣದಲ್ಲಿ ಒಂದೆಡೆ ಶಾಸಕ, ಮು.ಮಂ.ಯಾಗಿ ಮತ್ತೊಂದೆಡೆ ಸಮಾಜವಾದಿ ಹೋರಾಟಗಾರರಾಗಿ ಒಂದು living ಉದಾಹರಣೆಯಾಗಿದ್ದು ಕರ್ಪೂರಿ ಠಾಕೂರ್ ಒಬ್ಬರೇ ಇರಬೇಕು.

ಅವರ ಮು.ಮಂ. ಅವಧಿಯಲ್ಲಿ ಮುಸ್ಲಿಂ ಮುಖಂಡರಾದ ಗುಲಾಮ್ ಸರ್ವರ್, ಜಬೀರ್ ಹುಸೇನ್ ಶಿಕ್ಷಣ, ಆರೋಗ್ಯ ಮಂತ್ರಿಗಳಾಗಿದ್ದರು. ಎಲ್ಲಾ ಲೋಹಿಯಾವಾದಿಗಳಂತೆ ಕರ್ಪೂರಿಯವರೂ ಸಹ ಇಂಗ್ಲಿಷ್ ವಿರೋಧಿ ಧೋರಣೆ ಹೊಂದಿದ್ದರು. ಹಿಂದಿಯನ್ನು ಕಡ್ಡಾಯಗೊಳಿಸಿದ್ದರು. ಆದರೆ ಬಿಹಾರ್ ನ ಮೈಥಿಲಿ, ಭೋಜಪುರಿ ಮುಂತಾದ ಸ್ಥಳೀಯ ಭಾಷೆಗಳ ಕುರಿತಾದ ನಿರ್ಲಕ್ಷ್ಯ ಅಚ್ಚರಿ ಮೂಡಿಸುತ್ತದೆ. ಇಂಗ್ಲಿಷ್ ಭಾಷೆ ವಂಚಿತ ಸಮುದಾಯಗಳಿಗೆ ಬಿಡುಗಡೆಯ ರಹದಾರಿ, ಹಿಂದಿ ಭಾಷೆಯ ಬಳಕೆ ಎನ್ನುವುದು ಹೇರಿಕೆಯಾಗುತ್ತದೆ ಮತ್ತು ಸ್ಥಳೀಯತೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಕರ್ಪೂರಿಯವರಿಗೂ ಅರ್ಥವಾಗಲಿಲ್ಲ. ಇದು ಬೇಸರದ ಸಂಗತಿ.

ಕರ್ನಾಟಕದ ದೇವರಾಜ ಅರಸರಂತೆ ಬಿಹಾರದಲ್ಲಿ ಕರ್ಪೂರಿ ಠಾಕೂರ್ ರ ಸಮುದಾಯದ ಜನಸಂಖ್ಯೆ ಕೇವಲ ಶೇ.1.7 ಪ್ರಮಾಣದಲ್ಲಿತ್ತು. ಆದರೆ ಈ ಮಿತಿಯನ್ನು ಮೀರಿ 1978ರಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.26 ಮೀಸಲಾತಿ ಕಲ್ಪಿಸಿದ್ದು, ಅತಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಜಾರಿಗೊಳಿಸಿದ್ದು ಕರ್ಪೂರಿಯವರ ಬಹು ದೊಡ್ಡ ಸಾಧನೆ. ಮತ್ತು ರಾಜಕೀಯ ಇಚ್ಛಾಶಕ್ತಿಯ ಪ್ರಾಮುಖ್ಯತೆ ಗೊತ್ತಾಗುತ್ತದೆ. ಮುಂದೆ ಈ ಒಳ ವರ್ಗೀಕರಣವು ‘ಕರ್ಪೂರಿ ಫಾರ್ಮುಲಾ’ ಅಂತ ಜನಪ್ರಿಯವಾಯಿತು. ಜಾತಿ ವ್ಯವಸ್ಥೆಯ ಈ ಸಂಕೀರ್ಣತೆಯನ್ನು ಅರಿಯಲು ಇಲ್ಲಿನ ಸಮಾಜೋ-ಆರ್ಥಿಕ ವ್ಯವಸ್ಥೆಯಲ್ಲಿ ಕನಿಷ್ಠ ಮಾಹಿತಿ ಇರಬೇಕಾಗುತ್ತದೆ.

 

ಜನರೊಂದಿಗೆ ಜನ ನಾಯಕ
ಜನರೊಂದಿಗೆ ಜನ ನಾಯಕ

ಕಳೆದ ವರ್ಷ ಮಧು ಲಿಮಯೆಯವರು ಹುಟ್ಟಿ ನೂರು ವರ್ಷಗಳಾಗಿದ್ದರೆ ಈ ವರ್ಷ ಮಧು ದಂಡವತೆ ಮತ್ತು ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಆದರೆ ಈ ಮೂವರಲ್ಲಿ ಲಿಮಯೆಯವರು ಚಿಂತನೆಯಲ್ಲಿ ಲೋಹಿಯಾರ ಪ್ರಭಾವ ಮೀರಿ ಬೆಳೆದರೆ ಕರ್ಪೂರಿ ಠಾಕೂರ್ ಚಿಂತನೆ, ಹೋರಾಟ ಮತ್ತು ಕೆಳಹಂತದ ರಾಜಕಾರಣ ಮೂರರಲ್ಲಿಯೂ ಲೋಹಿಯಾರ ವರ್ತುಲದಾಚೆಗೆ ಬೆಳೆದರು. ಬ್ರಾಹ್ಮಣೀಕರಣ ರಹಿತ ರಾಜಕಾರಣದ ಚಳವಳಿಯನ್ನು ಆರಂಭಿಸಿದರು. ಆದರೆ ಅದನ್ನು ಭವಿಷ್ಯದ ರಾಜಕಾರಣವಾಗಿ ಕಟ್ಟಲು ಸಾಧ್ಯವಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.

ಲೋಹಿಯಾರಂತೆ ಅಪಾರ ಓದಿನ ಹುಚ್ಚು ಬೆಳೆಸಿಕೊಂಡಿದ್ದ ಠಾಕೂರ್ ಫುಲೆ, ಅಂಬೇಡ್ಕರ್, ಪೆರಿಯಾರ್ ರವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿಯೇ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ ಒಟ್ಟೊಟ್ಟಿಗೆ ಬಲಗೊಳ್ಳಬೇಕು ಎಂದು ದೃಢವಾಗಿ ನಂಬಿದ್ದರು.

ಜಬೀರ್ ಹುಸೇನ್ ಬರೆದ ‘ಜನರಿಂದ ಸುತ್ತುವರಿದ ವ್ಯಕ್ತಿ’ ಕವನದಲ್ಲಿನ
‘ಅವರ ಕೈಯಲ್ಲಿ ಕಟ್ಟುವ ಕಲ್ಲುಗಳು
ಕಣ್ಣುಗಳ ಹೊಳಪಿನಲ್ಲಿ ಕನಸುಗಳು’ ಎನ್ನುವ ಸಾಲುಗಳು ಜನನಾಯಕರ ಸಮಗ್ರ ವ್ಯಕ್ತಿತ್ವದ ಹೊಳಹುಗಳನ್ನು ಕಾಣಬಹುದು.

ಆದರೆ ಲೋಹಿಯಾರಂತೆ ಕರ್ಪೂರಿಯವರೂ ಸಹ ಪಕ್ಷದೊಳಗೆ ಭಿನ್ನಮತದ ಹೆಸರಿನಲ್ಲಿ ಗುಂಪುಗಳನ್ನು ಕಟ್ಟಿದರು. ಪಕ್ಷ ಬಿಡುವುದು, ಪಕ್ಷ ಸೇರುವುದು, ಮತ್ತೊಂದು ಪಕ್ಷ, ಇನ್ನೊಂದು ಹೀಗೆ ಅನೇಕ ಕಡೆಗಳಲ್ಲಿ ಅಲೆದಾಡಿದರು. ಇದರಿಂದಾಗಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಮತ್ತು ಸಬಲೀಕರಣಕ್ಕೆ ಅಗತ್ಯವಾದ ಒಂದು ಸುಸ್ಥಿರ ರಾಜಕಾರಣ ರೂಪಿಸಲು ಸಾಧ್ಯವಾಗಲಿಲ್ಲ. ಇದು ಕರ್ಪೂರಿ ಠಾಕೂರ್ ರಾಜಕಾರಣದ ಬಲು ದೊಡ್ಡ ಮಿತಿಯಾಗಿದೆ.

ಬಿಹಾರ್ ರಾಜ್ಯದಿಂದ ರಮಾನಂದ ಮಿಶ್ರ, ಸೂರಜ್ ನಾರಾಯಣ ಸಿಂಗ್, ರಾಂಬ್ರಿಕ್ಷ ಬೇನಿಪುರಿಯಂತಹ ಸಮಾಜವಾದಿಗಳ ಜೊತೆಗೂಡಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಕರ್ಪೂರಿ ಠಾಕೂರ್ ಅವರ ನೇತೃತ್ವದ ‘ರೈತ ಚಳವಳಿ’ಯನ್ನು ವಿಸ್ತರಿಸಿ ಅದಕ್ಕೆ ‘ಆರ್ಥಿಕ ಆಯಾಮ’ ತಂದುಕೊಟ್ಟರು. ಆದರೆ ಇದನ್ನು ಗಟ್ಟಿಗೊಳಿಸಲು ಅಗತ್ಯವಾದ ‘ಸ್ಥಿರ ರಾಜಕಾರಣ’ವನ್ನು ಕಟ್ಟಲು ವಿಫಲರಾದರು. ಈ ಕಾರಣದಿಂದ ‘ಅತಿ ಹಿಂದುಳಿದ ವರ್ಗಗಳ’ ಚಳವಳಿಯು ತಮಿಳುನಾಡಿನ ದ್ರಾವಿಡ ಚಳವಳಿ ರೀತಿ ಸಮಾಜೋ-ರಾಜಕೀಯ-ಸಾಂಸ್ಕೃತಿಕ ನೆಲೆಯಲ್ಲಿ ಬಿಹಾರ್ ಮತ್ತು ಉತ್ತರ ರಾಜ್ಯಗಳಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಲೋಹಿಯಾ ರಾಜಕಾರಣದ ಈ ಮಿತಿಯನ್ನು ಕರ್ಪೂರಿ ಠಾಕೂರ್ ಗೂ ಮೀರಲು ಸಾಧ್ಯವಾಗಲಿಲ್ಲ ಎನ್ನುವುದು ಖೇದಕರ ಸಂಗತಿ.

ಲೋಹಿಯಾರ ರೀತಿ ಕಾಂಗ್ರೆಸ್ ವಿರೋಧಿ ಧೋರಣೆಯ ಅತಿರೇಕದಿಂದಾಗಿ ಆರೆಸ್ಸೆಸ್ ನ ರಾಜಕೀಯ ಅಂಗವಾದ ಜನಸಂಘದೊಂದಿಗೂ ಸಖ್ಯ ಬೆಳೆಸಿದರು. ಮಾರ್ಕ್ಸಿಸ್ಟರಲ್ಲಿರುವ ಸೈದ್ಧಾಂತಿಕ ಬದ್ಧತೆ ಕರ್ಪೂರಿಯವರಂತಹ ಕಟ್ಟಾ ಹೋರಾಟಗಾರರಲ್ಲಿ ಆಗಾಗ್ಗೆ ಕೈಕೊಡುತ್ತಿತ್ತು. ಇದು ಇಂದಿಗೂ ಜ್ವಲಂತ ಸಮಸ್ಯೆಯಾಗಿದೆ.

2003ರಲ್ಲಿ ಸಂಸದೀಯ ವ್ಯವಹಾರಗಳ ವಿಚಾರದಲ್ಲಿ ಕರ್ಪೂರಿಯವರ ಒಟ್ಟಾರೆ ಅನುಭವಗಳ ಕುರಿತು ಎರಡು ಸಂಪುಟಗಳು ಪ್ರಕಟವಾಯಿತು. ಎಲ್ಲಾ ಸಮಾಜವಾದಿ ಮುಖಂಡರಂತೆ ಆಡಳಿತ ನಡೆಸಿದ ಮ.ಮಂ. ಅವಧಿಗಿಂತ ವಿರೋಧ ಪಕ್ಷದ ನಾಯಕ, ಶಾಸಕರಾಗಿ ಕರ್ಪೂರಿಯವರ ಅನುಭವ ತುಂಬಾ ಮಹತ್ವದ್ದಾಗಿದೆ. ವಿಧಾನಮಂಡಲದ ಕಾರ್ಯಕಲಾಪಗಳ ಗುಣಮಟ್ಟ ಕುಂಠಿತಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಜನನಾಯಕರ ಆ ಸಾಧನೆ ಎಲ್ಲಾ ರಾಜಕಾರಣಿಗಳಿಗೆ ಪಠ್ಯದಂತಿದೆ.

1971-1977ರವರೆಗೆ ವಿರೋಧ ಪಕ್ಷದ ನಾಯಕರಾಗಿ ಸದನದ ಒಳಗೆ ಮತ್ತು ಹೊರಗೆ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಪರ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಕಾಂಗ್ರೆಸ್ ಪಕ್ಷವು ‘ಮುಂಗೇರಿಲಾಲ್ ಆಯೋಗ’ ರಚಿಸಿತು. 1977ರಲ್ಲಿ ಅಧಿಕಾರಕ್ಕೆ ಬಂದ ಕರ್ಪೂರಿಯವರು 1978ರಲ್ಲಿ ಮೇಲ್ಜಾತಿಗಳ ಯಜಮಾನ್ಯವನ್ನು ಸಡಿಲಗೊಳಿಸಲು ಪಂಚಾಯತ್ ರಾಜ್ ಚುನಾವಣೆ ನಡೆಸಿದರು. ವೈರುಧ್ಯವೆಂದರೆ ನಂತರ 20 ವರ್ಷಗಳ ಕಾಲ ವಿಕೇಂದ್ರೀಕರಣ ಪ್ರಕ್ರಿಯೆ ಸ್ಥಗಿತಗೊಂಡು 2001ರಲ್ಲಿ ಮತ್ತೆ ಪಂಚಾಯತ್ ರಾಜ್ ಚುನಾವಣೆ ನಡೆಯಿತು.

ಕರ್ಪೂರಿಯವರ ಮು. ಮಂ. ಅವದಿಯ ಕಡೇ ದಿನಗಳಲ್ಲಿ ಜೆಮ್ಶೆಡ್ ಪುರದಲ್ಲಿ ಕೋಮು ಗಲಭೆಗಳಾದವು. ಅವರು ಪದತ್ಯಾಗ ಮಾಡುವುದಕ್ಕೂ ಮೊದಲು ಇದರ ತನಿಖೆಗಾಗಿ ‘ನ್ಯಾಯಮೂರ್ತಿ ಜಿತೇಂದ್ರ ನಾರಾಯಣ್ಆಯೋಗ’ ನೇಮಿಸಿದರು. ಕರ್ಪೂರಿ ಠಾಕೂರ್ ನೇತೃತ್ವದ ಈ ಸರ್ಕಾರದಲ್ಲಿ ಜನತಾ ಪಕ್ಷದ ಭಾಗವಾಗಿದ್ದ ಜನಸಂಘದ 68 ಶಾಸಕರಿದ್ದರು. ಇದರಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದ ಆರೆಸ್ಸೆಸ್ ಅಂಗ ಪಕ್ಷದ ದೀನನಾಥ್ ಪಾಂಡೆಯನ್ನು ಆ ಕೋಮು ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ಆಯೋಗವು 1981ರಲ್ಲಿ ಸಲ್ಲಿಸಲಾದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತು. ಕೇವಲ ಕಾಂಗ್ರೆಸ್ ವಿರೋಧಿ ಧೋರಣೆಯಿಂದಾಗಿ ಇಂತಹ ಕೋಮುವಾದಿ ಜನಸಂಘದೊಂದಿಗೂ ಕೈ ಜೋಡಿಸಿ ಸರ್ಕಾರ ರಚಿಸಿದ ಕರ್ಪೂರಿ ಠಾಕೂರ್ ಇದರ ಕುರಿತು ಪಶ್ಚಾತ್ತಾಪ ಪಟ್ಟರೇ? ಗೊತ್ತಿಲ್ಲ. ಆದರೆ ಆರೆಸ್ಸೆಸ್ ಕುರಿತು ಲೋಹಿಯಾವಾದಿಗಳ ಈ ಮೃದು ನಿಲುವು ಮುಂದೆ ಬಿಜೆಪಿಗೆ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಿತು. ಎಂತಹ ವಿರೋಧಾಬಾಸಗಳು.

1979ರಲ್ಲಿ ಕರ್ಪೂರಿ ಠಾಕೂರ್ ಸರ್ಕಾರದ ಪದಚ್ಯುತಗೊಂಡಿತು. ಜನತಾ ಪಕ್ಷದ ಭಿನ್ನ ಬಣವು
ಶೇ. 50ರಷ್ಟು ಮೇಲ್ಜಾತಿಗಳನ್ನೊಳಗೊಂಡ ರಾಮ್ ಸುಂದರ ದಾಸ್ ಸರ್ಕಾರ ಅಧಿಕಾರಕ್ಕೆ ಬಂದಿತು. 1980ರಲ್ಲಿ ಕೇಂದ್ರದಲ್ಲಿ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ ಈ ಸರ್ಕಾರವೂ ಪತನಗೊಂಡು ನಂತರ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡಿತು. ಕರ್ಪೂರಿ ಠಾಕೂರ್ ರಂತಹ ಅತಿ ಹಿಂದುಳಿದ ಜಾತಿಯ ಜನಪ್ರಿಯ ನಾಯಕರ ಕುರಿತು ಜನತಾ ಪಕ್ಷದಲ್ಲಿ ಅಸಹನೆಯಿತ್ತು ಎಂದು ಈ ವಿದ್ಯಮಾನಗಳಿಂದ ಸಾಬೀತಾಗುತ್ತದೆ. ಕರ್ನಾಟಕದಲ್ಲಿಯೂ 1983ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಹಿಂದುಳಿದ ವರ್ಗಗಳ ಮುಖಂಡರಾದ ಬಂಗಾರಪ್ಪನವರಿಗೆ ಮು.ಮಂ. ಹುದ್ದೆ ಕೊಡದೆ ಅಲ್ಲಿಯವರೆಗೆ ಬೋರ್ಡಿಗೂ ಇರದ ರಾಮಕೃಷ್ಣ ಹೆಗಡೆ ಎನ್ನುವ ಹವ್ಯಕ ಬ್ರಾಹ್ಮಣರನ್ನು ಆಯ್ಕೆ ಮಾಡಲಾಯಿತು. ಬಿಹಾರದಲ್ಲಿ ಕರ್ಪೂರಿ ಮತ್ತು ಕರ್ನಾಟಕದಲ್ಲಿ ಬಂಗಾರಪ್ಪ ಈ ಪಿತೂರಿಗೆ ಬಲಿಪಶುಗಳಾದರು.

ಇದನ್ನು ಓದಿದ್ದೀರಾ?: ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ದೇವರಾಜ ಅರಸರಂತೆ ತಮ್ಮ ಕಡೆಯ ದಿನಗಳಲ್ಲಿ ತಾವು ಗುರುತಿಸಿದ ಮುಖಂಡರಿಂದಲೇ ಅಲಕ್ಷ್ಯಕ್ಕೆ ಒಳಗಾದರು. 1985ರಲ್ಲಿ ಕರ್ಪೂರಿಯವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಿ ಅನುಪ್ ಲಾಲ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು. ಲಾಲೂ ಯಾದವ್ ಅವರು ಕರ್ಪೂರಿಯವರನ್ನು ‘ಕಪಟಿ’ ಎಂದು ಕರೆದರು.

ತಮ್ಮ ಬದುಕಿನ ಕಡೆಯ ದಿನಗಳ 1980-88ರ ಅವಧಿಯಲ್ಲಿ ದಲಿತ, ಮುಸ್ಲಿಂ, ಅತಿ ಹಿಂದುಳಿದ ಜಾತಿಗಳ ಸಂಘಟನೆಗಾಗಿ ತುಂಬಾ ಶ್ರಮಿಸಿದರು. ಆದರೆ ಅವರಿಗೆ ಸೂಕ್ತ ಬೆಂಬಲ ದೊರಕಲಿಲ್ಲ. ಇದರಿಂದ ತೀವ್ರ ಹತಾಶೆಗೆ ಒಳಗಾದ ಕರ್ಪೂರಿಯವರು ‘ನಾನು ಯಾದವ ಜಾತಿಯಲ್ಲಿ ಹುಟ್ಟಿದ್ದರೆ ಇಂತಹ ಅವಮಾನ ಎದುರಿಸಬೇಕಾಗಿರಲಿಲ್ಲ’ ಎಂದು ಪರಿತಪಿಸಿದರು. ತಾವು ನಿಧನರಾಗುವ ಮೂರು ದಿನಗಳ ಮುಂಚೆ 14 ಫೆಬ್ರವರಿ 1988ರಂದು ಅತಿ ಹಿಂದುಳಿದ ಜಾತಿಗಳೆಂದು ಪರಿಗಣಿಸಲ್ಪಟ್ಟ ನಿಶದ್, ಸಾಹ್ನಿ, ಕೈವರ್ತಾ ಎಂಬ ಬೆಸ್ತರ ಸಮುದಾಯವನ್ನು ಸಂಘಟಿಸಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದರು.

ಕರ್ಪೂರಿ ಸಾಬ್ ಗೆ ಅನ್ಯಾಯವಾಗಿದೆ. ಆದರೆ ಅವರ ನೂರು ವರ್ಷಗಳು ತುಂಬಿದ ಇಂದಿನ ಸಂದರ್ಭದಲ್ಲಿ ‘ಇಂಡಿಯಾ’ ಒಕ್ಕೂಟ ಅವರ ಲೆಗಸಿಯನ್ನು ಹೇಗೆ ಒಳಗೊಳ್ಳುವ ವಿಧಾನದ ಕುರಿತು ಚಿಂತಿಸಬೇಕು.

ಉಪ ಸಂಹಾರ

ಇಂತಹ ಜನನಾಯಕ ಕರ್ಪೂರಿ ಠಾಕೂರರ ಲೆಗಸಿಯನ್ನು ಇಂದು ಸಾರ್ವಜನಿಕವಾಗಿ ಮರಳಿ ಕಟ್ಟಲು ಬಯಸುವ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರಿಗೆ ಜನನಾಯಕರ ಆ ಬದ್ದತೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಕೇವಲ ಜಾತಿ ಗಣತಿ ಮಾತ್ರ ಕರ್ಪೂರಿಯವರ ಲೆಗಸಿಯನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ. ಕಡೆಯ ಉಸಿರು ಇರುವವರೆಗೂ ದಲಿತ, ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಪರವಾಗಿ ದಿಟ್ಟತನದಿಂದ ಸಂಘಟಿತರಾಗುವ, ಅವರ ಪರವಾಗಿ ನೀತಿ ರೂಪಿಸುವ ಛಲ ಬೇಕಾಗುತ್ತದೆ.

ಛಲ ಬೇಕು ಶರಣಂಗೆ…

ಪೋಸ್ಟ್ ಹಂಚಿಕೊಳ್ಳಿ:

ಬಿ ಶ್ರೀಪಾದ್ ಭಟ್
ಬಿ ಶ್ರೀಪಾದ್ ಭಟ್
ಲೇಖಕರು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...