ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ

Date:

Advertisements
ರಾಜಕೀಯ ನಾಯಕರು ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತ ಊಸರವಳ್ಳಿಯನ್ನೂ ಮೀರಿಸುವುದು ಹೊಸದೇನಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಪ್ರಕ್ರಿಯೆಯೂ ನಿಲ್ಲುವುದಿಲ್ಲ. ಮಾಧ್ಯಮಗಳೂ ಜನರಲ್ಲಿ ತಿಳಿವಳಿಕೆ ತುಂಬುತ್ತಿಲ್ಲ. ಇಂತಹ ಹೊತ್ತಲ್ಲಿ, ರಾಜಕಾರಣದಲ್ಲಿ ಕನಿಷ್ಠ ಮಟ್ಟದ ನೈತಿಕತೆ, ಸೈದ್ಧಾಂತಿಕತೆಯೂ ಇಲ್ಲದೆ ಹೋದರೆ, ದೇಶದ ಭವಿಷ್ಯವನ್ನು ಊಹಿಸಲೂ ಸಾಧ್ಯವಿಲ್ಲ.

ಬಾಲ್ಯದಿಂದಲೂ ಸಂಘಪರಿವಾರದ ಚೆಡ್ಡಿ-ಲಾಠಿಗಳೊಂದಿಗೇ ಬೆಳೆದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನಿರಾಕರಿಸಿದಾಗ ಮೊದಲ ಬಾರಿಗೆ ಮುಖದ ಮೇಲೆ ಸಿಟ್ಟು ತಂದುಕೊಂಡಿದ್ದರು. ಬೇಸರದಿಂದ ಬಿಜೆಪಿ ಬಿಟ್ಟಿದ್ದರು. ಅವರನ್ನು ಆ ಕ್ಷಣದಲ್ಲಿ ಕಾಂಗ್ರೆಸ್ ಕೈ ಹಿಡಿಯದೆ ಹೋಗಿದ್ದರೆ, ಕೊರಗುತ್ತಲೇ ಕೊಳೆತು ಹೋಗುತ್ತಿದ್ದರು.

ಕಾಂಗ್ರೆಸ್ಸಿಗರೂ ಅಧಿಕಾರವಿಲ್ಲದೆ ಹಸಿದಿದ್ದರು; ಅಧಿಕಾರಕ್ಕೇರಲು ಸಣ್ಣ ಹುಲ್ಲುಕಡ್ಡಿಯೂ ದಡ ಸೇರಿಸಬಹುದೆಂದು ಭಾವಿಸಿದ್ದರು. ಹಾಗಾಗಿ ಶೆಟ್ಟರ್ ಅವರನ್ನು ಆನೆ ಎಂದು ಭಾವಿಸಿ, ಭ್ರಮಿಸಿ ಪಕ್ಷಕ್ಕೆ ಬರಮಾಡಿಕೊಂಡರು, ಟಿಕೆಟ್ ಕೊಟ್ಟು ಕೈ ಅಭ್ಯರ್ಥಿಯನ್ನಾಗಿಸಿದರು. ಆದರೆ ಶೆಟ್ಟರ್ ಭಾರೀ ಅಂತರದಿಂದ ಸೋಲುವ ಮೂಲಕ ತಮ್ಮ ತೂಕ ಮತ್ತು ತಾಖತ್ತನ್ನು ತೋರ್ಪಡಿಸಿಕೊಂಡಿದ್ದರು. ಅಷ್ಟಾದರೂ ಬಿಡದ ಕಾಂಗ್ರೆಸ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಗೌರವಿಸಿತು.

ಜಗದೀಶ್ ಶೆಟ್ಟರ್‍‌ಗೆ ಸ್ಥಾನಮಾನ ನೀಡಿ ಗೌರವದಿಂದ ಕಂಡರೂ, ಅವರು ಕಾಂಗ್ರೆಸ್ಸಿಗರಾಗಲಿಲ್ಲ, ಬೆರೆತು ಪಕ್ಷ ಬಲಗೊಳಿಸಲಿಲ್ಲ, ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಲಿಲ್ಲ. ಹಾಗೆಯೇ ಸಂಘ ಸಹವಾಸದಿಂದ ದೂರ ಸರಿಯಲಿಲ್ಲ, ಮತ್ತೆ ಬಿಜೆಪಿ ಸೇರುವುದನ್ನೂ ಮರೆಯಲಿಲ್ಲ.

Advertisements

ಈಗ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್ ಅವರನ್ನು ಒಪ್ಪಿರಲಿಲ್ಲ, ಅವರು ಹೋಗಿದ್ದೇ ಒಳ್ಳೆಯದಾಯಿತು’ ಎಂದಿದ್ದಾರೆ. ‘ಐಟಿ, ಇಡಿ ಭಯ ತೋರಿಸಿದ್ದರಿಂದ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಿರಬಹುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಒಟ್ಟಾರೆ ಬೆಳವಣಿಗೆಯನ್ನು ಕಂಡು ಕಸಿವಿಸಿಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘ಒಂದು ವಸ್ತು ಕೊಳ್ಳಬೇಕಾದರೆ ಹತ್ತಾರು ಸಲ ಯೋಚಿಸಿ ತೆಗೆದುಕೊಳ್ಳುತ್ತೇವೆ. ಹಾಗೆ ಪಕ್ಷಕ್ಕೆ ಯಾರನ್ನಾದರೂ ತೆಗೆದುಕೊಳ್ಳಬೇಕಾದರೆ ಅವರ ಗುಣ, ಹಿನ್ನೆಲೆ, ಅವರ ತತ್ವ ಯಾವುದು ಎಂಬುದನ್ನು ಪರಿಶೀಲಿಸಿ. ಅರ್ಹರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಇವೆಲ್ಲ ಈ ಕ್ಷಣದ ಹಳಹಳಿಕೆಗಳೇ ಹೊರತು, ಸುಧಾರಿಸುವ ಸೂಚನೆಗಳಲ್ಲ. ಬಂದು-ಹೋಗುವ ಪ್ರಕ್ರಿಯೆಯೂ ನಿಲ್ಲುವುದಿಲ್ಲ.

ಸ್ವಲ್ಪ ಹಿಂದಕ್ಕೆ ಹೋಗಿ ನೋಡುವುದಾದರೆ… 2013ರಿಂದ 2018ರವರೆಗೆ, ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ, 2018ರ ವಿಧಾನಸಭಾ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು. ಶತಾಯ ಗತಾಯ ಬಿಜೆಪಿಗೆ ಅಧಿಕಾರ ಹೋಗಬಾರದೆಂದು ತೀರ್ಮಾನಿಸಿದ ಕಾಂಗ್ರೆಸ್, ಜಾತ್ಯತೀತ ಕಾರ್ಡನ್ನು ಮುಂದೆ ಮಾಡಿ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. 37 ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ತತ್ವ-ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟ ಪಕ್ಷಗಳು ಅಧಿಕಾರಕ್ಕಾಗಿ ಮತದಾರರ ಆಯ್ಕೆಯನ್ನೇ ಅಣಕಿಸಲಾಗಿತ್ತು. ಹದಿನಾಲ್ಕು ತಿಂಗಳು ಕಳೆಯುವುದರೊಳಗೆ ಮೈತ್ರಿ ಹಳಸಿಕೊಂಡು, ಸರ್ಕಾರ ಸಮಾಧಿ ಸೇರಿತ್ತು. ಯಥಾಪ್ರಕಾರ ಟೀಕೆ, ಮೂದಲಿಕೆ ಮೇಳೈಸಿತ್ತು. ಸೆಕ್ಯುಲರ್ ಎಂದು ಎದೆಯುಬ್ಬಿಸಿ ಹೇಳುತ್ತಿದ್ದ ಕುಮಾರಸ್ವಾಮಿಯವರು, ಇಂದು ಸಂಘಪರಿವಾರ ಸೇರಿ, ರಾಮನಾಮ ಜಪಿಸುತ್ತ ಸದ್ಗತಿ ಕಾಣುತ್ತಿದ್ದಾರೆ.

ಜುಲೈ 18, 2023ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯಿತು. ಆ ಸಭೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಹೊಂದಿತ್ತು. ಆ ಸಭೆಯ ಉಸ್ತುವಾರಿ ಹೊತ್ತಿದ್ದವರು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್.

ನಾಯಕರನ್ನು ಪ್ರಭಾವಿಸುವ ಮಟ್ಟದ ಮುಂಚೂಣಿ ನಾಯಕ ನಿತೀಶ್ ಕುಮಾರ್, ಈಗ ಮೈತ್ರಿಕೂಟ ತೊರೆದು ಯಾರನ್ನು ವಿರೋಧಿಸಿದ್ದರೋ ಅವರನ್ನೇ- ಬಿಜೆಪಿಯನ್ನೇ ಮತ್ತೊಮ್ಮೆ ಬಿಗಿದಪ್ಪಿಕೊಂಡಿದ್ದಾರೆ. ಆರ್‍‌ಜೆಡಿ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದಾರೆ. ಕೇವಲ 45 ಸ್ಥಾನಗಳನ್ನು ಹೊಂದಿರುವ ಜೆಡಿಯುನ ನಿತೀಶ್ ಕುಮಾರ್, ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತ ಊಸರವಳ್ಳಿಯನ್ನೂ ಮೀರಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಸೇರಿ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿ ವಿರಾಜಮಾನರಾಗಲಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಜೊತೆಗೆ ಸೇರುವ ಪ್ರಾದೇಶಿಕ ಪಕ್ಷಗಳು, ಸ್ಥಳೀಯ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ, ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆಯೇ ಹೊರತು ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ಅಲ್ಲ. ಜನರ ಉದ್ಧಾರಕ್ಕಂತೂ ಖಂಡಿತ ಅಲ್ಲ. ಕಳ್ಳರು, ಕಳಂಕಿತರು, ಭ್ರಷ್ಟರು ಬಿಜೆಪಿ ಸೇರಿದಾಗ ಹೇಗೆ ಪರಿಶುದ್ಧ ಪುಢಾರಿಗಳಾಗುತ್ತಾರೋ, ಹಾಗೆಯೇ ಬಿಜೆಪಿಯಲ್ಲಿದ್ದಾಗ ಕೋಮುವಾದಿಯಾಗುತ್ತಾರೆ. ಅದೇ ವ್ಯಕ್ತಿ ಕಾಂಗ್ರೆಸ್ ಪಕ್ಷ ಸೇರಿದಾಗ ಸೆಕ್ಯುಲರ್, ಸಮಾಜವಾದಿಯ ಪೋಸು ಕೊಡುತ್ತಾರೆ.

ಈ ಚಮತ್ಕಾರ ಸದ್ಯಕ್ಕೆ ಸುದ್ದಿಯಲ್ಲಿರುವ ಮೂವರು ರಾಜಕೀಯ ನಾಯಕರ ಇತ್ತೀಚಿನ ನಡೆ ಮತ್ತು ನುಡಿಯಲ್ಲಿ ಕಾಣುತ್ತಿದೆ. 68ರ ಹರೆಯದ ಬಿಜೆಪಿಯ ಜಗದೀಶ್ ಶೆಟ್ಟರ್, 64ರ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ 73ರಲ್ಲಿರುವ ಜೆಡಿಯುನ ನಿತೀಶ್ ಕುಮಾರ್- ಮೂವರೂ ಮುಖ್ಯಮಂತ್ರಿಯಾಗಿದ್ದವರು. ಈ ವಯಸ್ಸಿನಲ್ಲಿಯೂ ಇವರಿಗೆ ಅಧಿಕಾರದ ಆಸೆ ಹೋಗಿಲ್ಲ. ಅಧಿಕಾರಕ್ಕಾಗಿ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲ. ತತ್ವ-ಸಿದ್ಧಾಂತಕ್ಕೆ ಬದ್ಧರಂತೂ ಅಲ್ಲವೇ ಅಲ್ಲ.

ಸೋಜಿಗದ ಸಂಗತಿ ಎಂದರೆ, ಮಾರಾಟವಾದ ಸುದ್ದಿ ಮಾಧ್ಯಮಗಳಿಗೆ ದೇಶದ ರಾಜಕೀಯ ಬೆಳವಣಿಗೆಯ ಗಂಭೀರತೆ ಅರ್ಥವಾಗುತ್ತಿಲ್ಲ. ವಸ್ತುಸ್ಥಿತಿ ಜನರಿಗೆ ತಿಳಿಯುತ್ತಿಲ್ಲ. ಈ ದೇಶದ ಜನತೆಗೆ ಇದೇನು ಹೊಸ ವಿದ್ಯಮಾನವಲ್ಲ. ಆದರೆ, ರಾಜಕಾರಣದಲ್ಲಿ ಕನಿಷ್ಠ ಮಟ್ಟದ ನೈತಿಕತೆ, ಸೈದ್ಧಾಂತಿಕತೆಯೂ ಇಲ್ಲದೆ ಹೋದರೆ, ದೇಶದ ಭವಿಷ್ಯವನ್ನು ಊಹಿಸಲೂ ಸಾಧ್ಯವಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ತತ್ವ – ಸಿದ್ಧಾಂತ , ಮಾನ – ಮರ್ಯಾದೆ ಇಲ್ಲದ ‘ ತ್ರಿಮೂರ್ತಿಗಳು ‘ !

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X