ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಜಗತ್ತಿನ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ, ಭಾಷೆ, ಬಾಳ್ವೆ, ಉಡುಗೆ ತೊಡುಗೆಯಲ್ಲಿ ಎಷ್ಟೇ ಭಿನ್ನತೆ ಇದ್ದರೂ ಭಾವನಾತ್ಮಕವಾಗಿ ನಾವೆಲ್ಲರೂ ಒಂದಾಗಿ ಸಾಗುತ್ತಿದ್ದೇವೆ. ಮುಂದೆಯೂ ಹೀಗೆ ಐಕ್ಯತೆಯೊಂದಿಗೆ ದೇಶದ ಸಮಗ್ರತೆ ಉಳಿಸುತ್ತಾ ಭಾರತವನ್ನು ವಿಶ್ವದ ಶ್ರೇಷ್ಠ, ಬಲಿಷ್ಠ ರಾಷ್ಟ್ರವನ್ನಾಗಿಸಲು ಶ್ರಮಿಸಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರು ಹೇಳಿದರು.
ಹಾಸನ ನಗರದ ಜಿಲ್ಲಾ ಹಾಕಿ ಮೈದಾನದಲ್ಲಿ ಶುಕ್ರವಾರದಂದು ನಡೆದ 75ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಲಾಲ್ ಬಹುದ್ದೂರ್ ಶಾಸ್ತ್ರಿ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ಸರೋಜಿನಿ ನಾಯ್ಡು, ಜವಾಹರ್ ಲಾಲ್ ನೆಹರು ಸೇರಿದಂತೆ ನೂರಾರು ನೇತಾರರ ನೇತೃತ್ವದಲ್ಲಿ ಲಕ್ಷಾಂತರ ಚಳವಳಿಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಭಾರತದಲ್ಲಿ ಸಂವಿಧಾನವೇ ಸರ್ವೊಚ್ಛವಾದುದು” ಎಂದರು.
“ನಮ್ಮ ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳು ಸಾರಾಂಶ ರೂಪದಲ್ಲಿ ತಿಳಿಸುವ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿ ಭಾರತೀಯರು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದ 31 ಜಿಲ್ಲೆಗಳಲ್ಲಿ ಜನವರಿ 26 ರಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರಂತೆ ಹಾಸನ ಜಿಲ್ಲೆಯಲ್ಲಿಯೂ ಇಂದು ಜಾಥಾಕ್ಕೆ ಚಾಲನೆ ನೀಡಲಾಗುತ್ತಿದೆ. ಸಂವಿಧಾನದಲ್ಲಿರುವಂತೆ ಮೂಲಭೂತ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಈ ಜಾಥಾ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರದ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಜಾಥ ರಥವನ್ನು ಬರಮಾಡಿಕೊಂಡು ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮೆಲ್ಲರ ಸಹಕಾರವನ್ನು ಕೋರಿದೆ” ಎಂದರು.
ಇದೇ ವೇಳೆ ಈ ಬಾರಿಯ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಹಾಸನ ಜಿಲ್ಲಾಡಳಿತದಿಂದ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿನ ಸಾಧಕರಿಗೆ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜ.29ಕ್ಕೆ ʼಸಂವಿಧಾನ ಜಾಗೃತಿ ಕಾರ್ಯಕ್ರಮʼ
ಈ ಬಾರಿಯ ಪ್ರಶಸ್ತಿಯನ್ನು ಕಳೆದ ಮೂವತ್ತು ವರ್ಷಗಳಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಎಚ್ ವೆಂಕಟೇಶ್ ಅವರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಕಳೆದ ಮೂವತ್ತು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಇವರು ಸಮಯ ಪ್ರಜ್ಷೆ, ಕೆಲಸದ ವಿಷಯದಲ್ಲಿ ಯಾವುದೇ ಚ್ಯುತಿ ಇಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ.
ವೆಂಕಟೇಶ್ ಅವರು ತಳ ಸಮುದಾಯದಿಂದ ಬಂದು ಈ ಕೆಲಸ ನಿರ್ವಹಿಸುತ್ತಿದ್ದರೂ ಕೂಡ ತಮ್ಮ ಇಬ್ಬರು ಮಕ್ಕಳನ್ನು ಪದವಿಗಳನ್ನು ಪೂರೈಸಲು ಸಹಕರಿಸಿ ವಿದ್ಯಾವಂತರನ್ನಾಗಿಸಿದ್ದಾರೆ.