- ಜೈ ಶ್ರೀರಾಂ ಹೇಳುವಂತೆ ಅಪ್ರಾಪ್ತನಿಗೆ ಒತ್ತಾಯ
- ಅಪ್ರಾಪ್ತ ಬಾಲಕರಿಂದ ಕೋಮು ಹಲ್ಲೆಯ ಪ್ರಯತ್ನ
ಮೂವರು ಅಪ್ರಾಪ್ತರು 11 ವರ್ಷದ ಬಾಲಕನ ವಿವಸ್ತ್ರಗೊಳಿಸಿ ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.
ಮೂವರು ಅಪ್ರಾಪ್ತರು ನಗರದ ನಿಪಾನಿಯಾ ಪ್ರದೇಶದ ಸಮೀಪದ ಕೆರೆ ಬಳಿಗೆ ಆಟಿಕೆಗಳನ್ನು ಖರೀದಿಸುವ ನೆಪದಲ್ಲಿ ಸಂತ್ರಸ್ತ ಬಾಲಕನನ್ನು ಕರೆದೊಯ್ದಿದ್ದರು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಗ್ನನಾಗಿದ್ದ ಬಾಲಕನಿಗೆ ‘ಜೈ ಶ್ರೀರಾಂ’, ‘ಹಿಂದುಸ್ತಾನ್ ಜಿಂದಾಬಾದ್’ ಮತ್ತು ‘ಪಾಕಿಸ್ತಾನ್ ಮುರ್ದಾಬಾದ್’ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸುತ್ತಿರುವುದು ಕಾಣಿಸುತ್ತದೆ.
ಅನಂತರದಲ್ಲಿ ಅಪ್ರಾಪ್ತ ಅವರಿಂದ ತಪ್ಪಿಸಿಕೊಂಡು ಮನೆಗೆ ಬಂದು ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ.
ಕುಟುಂಬದ ಸದಸ್ಯರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಎಲ್ಲರ ಪೋಷಕರು ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕನ ಪೋಷಕರು ದೂರು ನೀಡಿದ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 294 ಮತ್ತು 365 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಜೈಶ್ರೀರಾಂ ಎನ್ನುವಂತೆ ಒತ್ತಾಯಿಸಿದ ಆರೋಪಿ ಅಪ್ರಾಪ್ತ ಬಾಲಕರ ಪೋಷಕರು ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳುವುದಾಗಿ ಹಾಗೂ ಮಕ್ಕಳನ್ನು ಸರಿದಾರಿಗೆ ತರಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಜಾಮೀನು ನೀಡಲಾಗಿದೆ. ಆರೋಪಿಗಳನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಅಪ್ರಾಪ್ತರಿಗೆ ಸಂಬಂಧಿಸಿರುವುದರಿಂದ ಆದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪಸರಿಸದಂತೆ ಸಾರ್ವಜನಿಕರಲ್ಲಿ ಪೊಲೀಸರು ವಿನಂತಿಸಿದ್ದಾರೆ.