ಬಿಹಾರದಲ್ಲಿ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿ ಜೊತೆಗೆ ಮೈತ್ರಿ ಕೆಳದುಕೊಂಡಿದ್ದಾರೆ. ಅವರನ್ನು ಮೈತ್ರಿಗೆ ಮರಳಿ ತಂದು, ಇಂಡಿಯಾ ಮೈತ್ರಿಕೂಟವನ್ನು ಗಟ್ಟಿಗೊಳಿಸಲು ಒಕ್ಕೂಟದ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ನಡುವೆ, ಇಂಡಿಯಾ ಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಯನ್ನು ಕಸರತ್ತು ಮುಗಿಸಿವೆ. ಆ ರಾಜ್ಯದ ಒಟ್ಟು 80 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 11 ಕ್ಷೇತ್ರಗಳನ್ನು ಎಸ್‌ಪಿ ಬಿಟ್ಟುಕೊಟ್ಟಿದೆ
ಸೀಟು ಹಂಚಿಕೆಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, “ಕಾಂಗ್ರೆಸ್ ಜೊತೆಗಿನ ನಮ್ಮ ಸೌಹಾರ್ದ ಮೈತ್ರಿಯು 11 ಪ್ರಬಲ ಸ್ಥಾನಗಳೊಂದಿಗೆ ಉತ್ತಮ ಆರಂಭ ಮಾಡಿದೆ. ಈ ಬೆಳವಣಿಗೆಯು ಗೆಲುವಿನತ್ತ ಮುಂದುವರೆಸುತ್ತದೆ. ‘ಇಂಡಿಯಾ’ ಕೂಟ ಮತ್ತು ‘ಪಿಡಿಎ’ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ತಂತ್ರವು ಇತಿಹಾಸವನ್ನು ಬದಲಿಸುತ್ತದೆ” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 11 ಸ್ಥಾನಗಳ ಒಪ್ಪಂದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿದರೆ, ಇಂಡಿಯಾ ಕೂಟದಲ್ಲಿ ಸೀಟು ಹಂಚಿಕೆ ಮುಗಿಸಿದ ಮೊದಲ ರಾಜ್ಯ ಉತ್ತರ ಪ್ರದೇಶವಾಗಿಲಿದೆ.
ಸದ್ಯ, ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ತನ್ನ ಕ್ಷೇತ್ರ ಹಂಚಿಕೆಯ ಸ್ಥಾನಗಳ ಬಗ್ಗೆ ಖಚಿತಪಡಿಸಿಲ್ಲ. ಆದರೆ, ಅಖಿಲೇಶ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, “ಮುಕುಲ್ ವಾಸ್ನಿಕ್ ನೇತೃತ್ವದ ಕಾಂಗ್ರೆಸ್ ರಾಷ್ಟ್ರೀಯ ಮೈತ್ರಿ ಸಮಿತಿಯು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳತ್ತದೆ. ಸಭೆಯ ಬಳಿಕ ಸಕಾರಾತ್ಮಕ ವಾತಾವರಣವಿದೆ. ಶೀಘ್ರದಲ್ಲೇ ಫಲಿತಾಂಶ ದೊರೆಯಲಿದೆ” ಎಂದು ಹೇಳಿದ್ದಾರೆ.
ಈ ಹಿಂದೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 20 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿತ್ತು. ”ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಎಸ್‌ಪಿ ಎಂಟು ಸ್ಥಾನಗಳನ್ನು ನೀಡಲು ಮುಂದಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಮತ್ತೆ ಮಾತುಕತೆ ನಡೆದಿದ್ದು, ಕಾಂಗ್ರೆಸ್‌ಗೆ 11 ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ” ಎಂದು ಎಸ್‌ಪಿ ನಾಯಕರೊಬ್ಬರು ತಿಳಿಸಿದ್ದರು.
ಉತ್ತರ ಪ್ರದೇಶದಲ್ಲಿ ಇಂಡಿಯಾ ಕೂಟದಲ್ಲಿ ಎಸ್‌ಪಿ, ಕಾಂಗ್ರೆಸ್ ಮಾತ್ರವಲ್ಲದೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಕೂಡ ಇದೆ. ಆರ್‌ಎಲ್‌ಡಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಹೀಗಾಗಿ, ಉಳಿದ 62 ಸ್ಥಾನಗಳಲ್ಲಿ ಎಸ್‌ಪಿ ಸ್ಪರ್ಧಿಸುವ ಸಾಧ್ಯತೆ ಇದೆ.
2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನದಲ್ಲಿ ಗೆದ್ದರೆ, ಎಸ್‌ಪಿ 5 ಸ್ಥಾನಗಳಿಗೆ ಸೀಮಿತವಾಗಿತ್ತು.