ರಾಜ್ಯ ರಾಜಧಾನಿ ಬೆಂಗಳೂರು ನಗರೀಕರಣದತ್ತ ದಾಪುಗಾಲಿಡುತ್ತ ಸಾಗಿದೆ. ನಗರ ಸಂಪೂರ್ಣ ಕಾಂಕ್ರೀಟ್ ಮಯವಾಗಿದ್ದು, ಮಣ್ಣು ಸಿಗುವುದೇ ಕಷ್ಟಕರವಾಗಿದೆ. ಮಳೆಯಾದರೂ ನೀರು ಇಂಗಲು ಜಾಗವಿಲ್ಲದಂತಾಗಿದೆ. ಇದರಿಂದ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಇದೀಗ, ನಗರದಲ್ಲಿರುವ ಉದ್ಯಾನವನಗಳ ನಿರ್ವಹಣೆಗೆ ಮಳೆನೀರು ಬಳಕೆ ಮಾಡಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ಬೆಂಗಳೂರಿನ 115 ಪಾರ್ಕ್‌ಗಳಲ್ಲಿ ಇಂಗುಗುಂಡಿ ನಿರ್ಮಾಣ ಮಾಡುವುದಕ್ಕೆ ಪಾಲಿಕೆ ಸಜ್ಜಾಗಿದೆ. ಉದ್ಯಾನವನದಲ್ಲಿರುವ ಮರ ಗಿಡಗಳ ಪೋಷಣೆ ಮಾಡುವುದಕ್ಕೆ ಸಜ್ಜಾಗಿರುವ ಪಾಲಿಕೆ ಸಿಎಸ್‌ಆರ್ ಫಂಡ್ ಬಳಕೆ ಮಾಡಿ ಮಳೆ ನೀರಿನ ಮರು ಬಳಕೆ ಮಾಡುವುದಕ್ಕೆ ಯೋಜನೆ ರೂಪಿಸಿದೆ. ಮಳೆನೀರಿನ ಸಂರಕ್ಷಣೆ ಜೊತೆಗೆ ಮರುಬಳಕೆ ಮಾಡೋದಕ್ಕೆ ಯೋಜನೆ ರೂಪಿಸಿದೆ.
ಮುಂದಿನ ಮಾನ್ಸೂನ್ ಒಳಗಾಗಿ ಬೆಂಗಳೂರಿನ 115 ಪಾರ್ಕ್‌ಗಳಲ್ಲಿ 1 ಸಾವಿರ ಇಂಗುಗುಂಡಿಗಳನ್ನು ಪಾಲಿಕೆ ನಿರ್ಮಾಣ ಮಾಡಲಿದೆ. ಈಗಾಗಲೇ, ದಾಸರಹಳ್ಳಿ, ಯಲಹಂಕ, ದಕ್ಷಿಣ ವಲಯದಲ್ಲಿ ಇಂಗುಗುಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ವರ್ಷದೊಳಗೆ ಸಾಧ್ಯವಾದಷ್ಟು ಇಂಗುಗುಂಡಿ ನಿರ್ಮಾಣ ಮಾಡುವುದಕ್ಕೆ ಪಾಲಿಕೆ ಮುಂದಾಗಿದೆ.
ಸದ್ಯ ಬೆಂಗಳೂರಿನಲ್ಲಿರುವ ಪಾರ್ಕ್‌ಗಳ ನಿರ್ವಹಣೆಯನ್ನು ಪಾಲಿಕೆ ಖಾಸಗಿಯವರಿಗೆ ವಹಿಸಿದೆ. ಈ ಹಿಂದೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಪಾಲಿಕೆ ಲಾಲ್ ಬಾಗ್, ಚಾಮರಾಜಪೇಟೆಯ ಜಿಂಕೆವನ ಸೇರಿದಂತೆ ಹಲವೆಡೆ ಇಂಗುಗುಂಡಿ ನಿರ್ಮಾಣ ಮಾಡಿದೆ. ಆದರೆ, ಇದೀಗ ನಿರ್ಮಾಣ ಮಾಡುತ್ತಿರುವ ಇಂಗುಗುಂಡಿಗಳು 20 ಅಡಿ ಆಳ, 4 ಅಡಿ ಅಗಲ ಇರಲಿವೆ.
ಕಳೆದ ಬಾರಿಗಿಂತ ಈ ಬಾರಿಯ ಇಂಗುಗುಂಡಿಗಳ ಗಾತ್ರ ದೊಡ್ಡದಾಗಿದೆ. ಒಂದು ಇಂಗುಗುಂಡಿ ನಿರ್ಮಾಣಕ್ಕೆ ₹40 ಸಾವಿರ ವೆಚ್ಚವಾಗಲಿದೆ. ಈ ವೆಚ್ಚವನ್ನ ಸಿಎಸ್‌ಆರ್ ಫಂಡ್ ಮೂಲಕ ಪಾಲಿಕೆ ಭರಿಸಲಿದೆ. ಒಂದು ಇಂಗುಗುಂಡಿ ಸುಮಾರು 4 ಸಾವಿರ ಲೀಟರ್ ನೀರು ಸಂಗ್ರಹಿಸುವಂತೆ ನಿರ್ಮಾಣ ಮಾಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ದಟ್ಟಣೆ ನಿವಾರಣೆಗೆ ಡ್ರೋನ್‌ಗಳ ಹಾರಾಟ
ಮಳೆ ನೀರು ಭೂಮಿಯ ಮೇಲೆ ಹರಿದು ಚರಂಡಿಗಳನ್ನು ಸೇರುವುದಕ್ಕಿಂತ ಇಂಗುವ ಪ್ರಕ್ರಿಯೆಯಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ವ್ಯರ್ಥವಾಗಿ ಚರಂಡಿಗೆ ಹರಿದು ಹೋಗುತ್ತಿರುವ ಮಳೆ ನೀರು ಪೋಷಣೆ ಮಾಡುವ ಈ ಯೋಜನೆ ಉತ್ತಮವಾಗಿದ್ದು, ಇದು ಜಾರಿಯಾದ ಮೇಲೆ ಬಳಕೆ ಹೇಗೆ ಆಗುತ್ತದೆ ಎಂದು ಕಾದುನೋಡಬೇಕಿದೆ.