ಬಿಜೆಪಿ ಸಂಸದ ರಾಘವೇಂದ್ರ ಪರವಾಗಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ವಿರುದ್ಧ ಕ್ರಮ ಕೈಗೋಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಶನಿವಾರ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, “ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ” ಎಂದಿದ್ದರು. ಅವರ ಹೇಳಿಕೆ, ಜಿಲ್ಲೆಯ ಕಾಂಗ್ರೆಸ್‌ನಲ್ಲಿ ತಲ್ಲಣ, ಅಸಮಾಧಾನ ಸೃಷ್ಠಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕೆಲವು ನಾಯಕರು ಒತ್ತಾಯಿಸಿದ್ದಾರೆ.
ಶಾಮನೂರು ಮಾತಿಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್ ರಾಜಣ್ಣ, “ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಅವರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡೋಣ” ಎಂದಿದ್ದಾರೆ.
ಇನ್ನು, ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್ ಕೂಡ ಮೈಸೂರಿನಲ್ಲಿ ಮಾತನಾಡಿದ್ದು, “ಕಾಂಗ್ರೆಸ್ ಜೀವಂತವಾಗಿದ್ದರೆ, ಶಮನೂರು ಶಿವಶಂಕರಪ್ಪ ಅವರನ್ನು ಅಮಾನತು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಶಾಮನೂರು ಶಿವಶಂಕರಪ್ಪ ಇಲ್ಲದಿದ್ದರೆ ಕಾಂಗ್ರೆಸ್ ನಡೆಯಲ್ವಾ? ಅವರು ದುಡ್ಡು ಇದೆ ಎಲ್ಲರನ್ನೂ ಕೊಂಡುಕೊಳ್ಳಬಹುದು ಅಂತ ಭಾವಿಸಿದ್ದಾರೆ. ಬಿಜೆಪಿಗರೂ ಅವರ ಮೇಲೆ ಡಿಪೆಂಡ್ ಆಗಿದ್ದಾರೆ. ದಾವಣಗೆರೆ ಹೋಗುವ ಬಿಜೆಪಿಗರು ಶಾಮನೂರು ಗೆಸ್ಟ್ ಹೌಸ್‌ನಲ್ಲೇ ಮಲಗುತ್ತಾರೆ. ಡಿ.ಕೆ ಶಿವಕುಮಾರ್ ಬಡೆಯಾಗಿದ್ದರೆ, ಶಾಮನೂರು ಅವರನ್ನು ಪಕ್ಷದಿಂದ ಅಮಾನತು ಮಾಡಲಿ” ಎಂದು ವಿಶ್ವನಾಥ್ ಸವಾಲು ಹಾಕಿದ್ದಾರೆ.
ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಅದೂ , ಈ ಹಿಂದೆ ಸಚಿವರಾಗಿದ್ದು ಈಗ ಹಿರಿಯ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪನಂತವರು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ತೀರಾ ಖಂಡನೀಯ. ಹಿರಿಯರಾಗಿರಲಿ , ಕಿರಿಯರಾಗಿರಲಿ , ಅವರು ಎಷ್ಟೇ ಪ್ರಭಾವಶಾಲಿಗಳಾಗಿರಲಿ ಅಥವಾ ಸಿರಿವಂತರಾಗಿರಲಿ ಇಂತಹ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದು ಅಸಾಧ್ಯ. ಅವರ ಈ ನಡೆಯನ್ನು ಖಂಡಿಸಿ ಪಕ್ಷದ ಹಿತದೃಷ್ಟಿಯಿಂದ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಅತೀ ಅವಶ್ಯ.