ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ(ಕೆ) ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಮೇಲ್ಚಾವಣಿ ಕಿತ್ತಿ ಕೆಳಗೆ ಬೀಳುತ್ತಿದೆ. ಶಾಲೆಯ ಮಕ್ಕಳು ಇಂತಹದರಲ್ಲೇ ಪಾಠಕೇಳುತ್ತಾರೆ. ಈ ಛಾವಣಿಯ ಕೆಳಗೇ ಕೂತು ಊಟಮಾಡುತ್ತಾರೆ.
ಈ ಕಟ್ಟಡ ಯಾವಾಘ ಮೇಲೆ ಬಿಳುತ್ತದೆಯೋ ಗೊತ್ತಿಲ್ಲ ಎಂಬ ಆತಂಕದಲ್ಲಿ ಶಿಕ್ಷಕರು, ಮಕ್ಕಳು ದಿನಾ ಶಾಲೆಗೆ ಬರುತ್ತಾರೆ. ತಾಲೂಕು ಆಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಶಾಲೆಯ ಬಗ್ಗೆ ಗಮನಹರಿಸಬೇಕು ಎಂದು ಮಕ್ಕಳು ಶಾಲೆಯ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.
ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗಿನ 100ಮಕ್ಕಳು ಓದುತ್ತಿದ್ದಾರೆ. ಮೂರು ಜನ ಶಿಕ್ಷಕರಿದ್ದಾರೆ. ಶಾಲೆಯಲ್ಲಿರುವ ಒಟ್ಟು ಐದು ಕೋಣೆಗಳಲ್ಲಿ ಮೂರು ಕೋಣೆಗಳು ಸಂಪೂರ್ಣ ಹಾಳಾಗಿವೆ. ಉಳಿದ ಎರಡು ಕೋಣೆಗಳಲ್ಲಿ ಮಾತ್ರ ಮಕ್ಕಳಿಗೆ ಪಾಠ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಎಲ್ಲ ಕೋಣೆಗಳು ಸೋರುತ್ತವೆ. ಮಳೆಗಾಲದಲ್ಲಿ ಶಾಲೆಗೆ ಒಂದುವಾರಗಳಕಾಲ ರಜೆಸಹ ನೀಡಿದ ಉದಾಹರಣೆಗಳಿವೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಶಾಲೆಯ ಕಟ್ಟಡ ದುರಸ್ತಿ ಮಾಡಲಾರದಷ್ಟು ಹಾಳಾಗಿದೆ. ಅದಕ್ಕಾಗಿ ಈ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಮತ್ತು ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಬೇಕು.ಶಾಲಾ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡುವ ಬಗ್ಗೆ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಶಾಸಕರಿಗೂ ತಿಳಿಸಿದ್ದೇವೆ ಆದರೆ ಯಾವುದೇ ರಯೋಜನವಾಗಿಲ್ಲ. ಮತ್ತೆ ಮಳೆಗಾಲ ಬರುತ್ತೆ, ಶಾಲೆ ಸೋರುತ್ತದೆ. ಅದಕ್ಕಾಗಿ ಮಳೆಗಾಲದೊಳಗಾಗಿ ಸರ್ಕಾರ ಆರು ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಾಯಪ್ಪ ಪೂಜಾರಿ ಆಗ್ರಹಿಸಿದ್ದಾರೆ.